ಗುರುವಾರ , ಜೂನ್ 17, 2021
21 °C

ಹಸಿರು ಕರ್ನಾಟಕ; ಆ. 15 ಕ್ಕೆ ಸಚಿವರಿಂದ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಿತ್ರದುರ್ಗ: ರಾಜ್ಯ ಸರ್ಕಾರ 2018–19ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವ ಹಸಿರು ಕರ್ನಾಟಕ ಯೋಜನೆಗೆ ಆ. 15ರಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಸಸಿ ನೆಡುವ ಹಾಗೂ ವಿತರಿಸುವ ಮೂಲಕ ಚಾಲನೆ ನೀಡಲಿದ್ದಾರೆ ಎಂದು ಡಿಸಿಎಫ್ ಮಂಜುನಾಥ್ ತಿಳಿಸಿದರು.

14 ರಂದು ಶಾಲಾ ಮಕ್ಕಳಿಂದ ಜಾಥಾ, 16 ರಿಂದ 18 ರವರೆಗೆ ಜಿಲ್ಲೆಯ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ವನಮಹೋತ್ಸವ ಆಯೋಜಿಸಿ ಸಸಿಗಳನ್ನು ಕಚೇರಿ ಆವರಣ ಅಥವಾ ಸಮೀಪದ ಸರ್ಕಾರಿ ಜಮೀನಿನಲ್ಲಿ ನೆಡಲಾಗುವುದು. ಅದಕ್ಕೆ ಬೇಕಾದ ಸಸಿಗಳನ್ನು ಅರಣ್ಯ ಇಲಾಖೆಯಿಂದ ಪೂರೈಸಲಾಗುವುದು ಎಂದು ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಾದೇಶಿಕ ವಿಭಾಗದಿಂದ 3.80 ಲಕ್ಷ ಸಸಿಗಳು ಈಗಾಗಲೇ ಇವೆ. ಅದನ್ನು ಸಾರ್ವಜನಿಕರಿಗೆ, ರೈತರಿಗೆ, ಶಾಲಾ ಮಕ್ಕಳಿಗೂ ಉಚಿತವಾಗಿ ನೀಡಲಾಗುವುದು. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಜಿಲ್ಲಾ ಪೆರೇಡ್‌ನಲ್ಲಿ ಅರಣ್ಯ ಇಲಾಖೆಯ ವಿಶೇಷ ದಳವು ಸಮವಸ್ತ್ರದಲ್ಲಿ ಭಾಗವಹಿಸಲಿದೆ ಎಂದರು.

ಎಲ್ಲ ಇಲಾಖೆಗಳ ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಬಗ್ಗೆ ಚಿತ್ರಕಲಾ, ಭಾಷಣ ಸ್ಪರ್ಧೆ, ಬೀಜದುಂಡೆ ಬಿತ್ತನೆ ಕಾರ್ಯಕ್ರಮ ಮತ್ತು ಪರಿಸರ ಹಾಡುಗಳ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆ ನಡೆಸಲಾಗುತ್ತದೆ ಎಂದು ಹೇಳಿದರು.

ಹಸಿರು ಕರ್ನಾಟಕಕ್ಕೆ ಸಂಬಂಧಿಸಿದ ಬಿತ್ತಿ ಪತ್ರಗಳನ್ನು ಈಗಾಗಲೇ ನಗರದ ವಿವಿಧೆಡೆ ಹಾಗೂ ಗ್ರಾಮ ಪಂಚಾಯಿತಿಗಳಲ್ಲೂ ಅಂಟಿಸಲಾಗಿದೆ. ಹಸಿರು ರಾಜ್ಯವನ್ನಾಗಿಸುವ ಸದುದ್ದೇಶದಿಂದ ಸರ್ಕಾರ ಜನರ ಸಹಕಾರದೊಂದಿಗೆ ಈ ಆಂದೋಲನ ಕೈಗೊಂಡಿದೆ ಎಂದು ಹೇಳಿದರು.

ಮೂರು ದಿನಗಳ ಕಾಲಾವಧಿಯಲ್ಲಿ ಸ್ಥಳೀಯ ಪ್ರತಿಭೆಗಳ ಮೂಲಕ ನಾವು ಬೀದಿನಾಟಕ ಸೇರಿ ವಿವಿಧ ಕಾರ್ಯಕ್ರಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಆಯೋಜಿಸಿ ವನ್ಯಜೀವಿಗಳ ಬಗ್ಗೆ, ಅರಣ್ಯಗಳಲ್ಲಿ ಆಕಸ್ಮಿಕವಾಗಿ ಬೀಳುವ ಬೆಂಕಿಯನ್ನು ನಿಂದಿಸುವುದರ ಬಗ್ಗೆ ಬೀದಿನಾಟಕಗಳ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದರು.

ಹೊಂಗೆ, ಬೇವು, ಹಲಸು, ನಲ್ಲಿ, ಟೀಕ್, ಸ್ವಿಲ್ವರ್ ಓಕ್, ಸಂಪಿಗೆ, ಹುಣಸೆ ಸಸಿಗಳು ಲಭ್ಯವಿದ್ದು, ನಿರ್ವಹಣೆ ಮಾಡುವ ಪ್ರದೇಶದಲ್ಲಿ ಮಾತ್ರ ಸಸಿಗಳನ್ನು ನಾಟಿ ಮಾಡಬೇಕು. ಸಸಿಗಳನ್ನು ಬೆಳೆಸಲು ಆಸಕ್ತಿ ಇದ್ದವರು ಹೆಸರು ನೋಂದಾಯಿಸಿಕೊಂಡು ಉಚಿತವಾಗಿ ಪಡೆಯಬಹುದು ಎಂದು ತಿಳಿಸಿದರು.

ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ವೈದ್ಯರ ಅವಶ್ಯಕತೆ ಇದ್ದು, ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ಸಾಲಿನ ನೇಮಕಾತಿಯಲ್ಲಿ ಆಡುಮಲ್ಲೇಶ್ವರಕ್ಕೆ ಒಬ್ಬರು ಪಶುವೈದ್ಯರನ್ನು ನೇಮಿಸುವ ಸಾಧ್ಯತೆ ಇದೆ ಎಂದು ಹೇಳಿದರು.

ಮರ ಹರಣ: ದಂಡ

ಸರ್ಕಾರಿ ಕಲಾ ಕಾಲೇಜಿನ ರಸ್ತೆ ಮಾರ್ಗದಲ್ಲಿ ಅನುಮತಿ ಇಲ್ಲದೆಯೇ ಮರಗಳನ್ನು ನಾಶ ಮಾಡಿದ್ದಕ್ಕಾಗಿ ಪ್ರಕರಣ ದಾಖಲಿಸಿಕೊಂಡು ಸಂಬಂಧಪಟ್ಟ ಗುತ್ತಿಗೆದಾರರಿಗೆ ರೂ 25 ಸಾವಿರ ದಂಡ ವಿಧಿಸಲಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಮರಗಳು ಅಡ್ಡಬಂದಾಗ ಸಂಬಂಧಪಟ್ಟ ಪ್ರಾಧಿಕಾರ ಒಂದು ಅರ್ಜಿ ಕೊಟ್ಟರೆ, ಅದನ್ನು ಪರಿಶೀಲಿಸಿ ಅನುಮತಿ ನೀಡುತ್ತೇವೆ. ಅರ್ಜಿ ಕಳಿಸಿದ್ದೇನೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಹೇಳಿದ್ದಾರೆ. ಆದರೆ, ಅವರು ಕೊಟ್ಟ ಅರ್ಜಿ ನಮ್ಮ ಕಚೇರಿಗೆ ತಲುಪಿಲ್ಲ. ಮತ್ತೊಮ್ಮೆ ಕಳಿಹಿಸಲು ಹೇಳಿದ್ದೇನೆ ಎಂದು ಮಂಜುನಾಥ್ ಮಾಹಿತಿ ನೀಡಿದರು.

 ಚೀಪ್ಸ್‌ ಸೇವನೆ: ಕೃಷ್ಣಮೃಗಗಳ ಸಾವು

ಆಡುಮಲ್ಲೇಶ್ವರದ ಕಿರು ಮೃಗಾಲಯದಲ್ಲಿ ಎರಡು ಕೃಷ್ಣಮೃಗಗಳು ಜನರು ನೀಡಿದ ಚೀಪ್ಸ್‌ ಸೇವನೆಯಿಂದ ವಿಷಾಹಾರವಾಗಿ ಮೃತಪಟ್ಟಿವೆ. ಅರಣ್ಯ ಇಲಾಖೆ ಸಿಬ್ಬಂದಿ ಎಷ್ಟೇ ಜಾಗೃತಿ ಮೂಡಿಸಿದರೂ ಜನರು ಆಹಾರ ನೀಡುತ್ತಾರೆ. ಹಾಗಾಗಿ ಜನರಿಗೆ ಎಟುಕದ ಹಾಗೇ ಪ್ರಾಣಿಗಳಿಗೆ ಬ್ಯಾರಿಕೇಡ್ ಹಾಕಿದ್ದೇವೆ ಎಂದು ಡಿಸಿಎಫ್ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು