ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರುಣನ ಅವಕೃಪೆ: ಶೇಂಗಾ ಬೆಳೆಗಾರರು ಕಂಗಾಲು

Last Updated 21 ಸೆಪ್ಟೆಂಬರ್ 2021, 5:19 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನಲ್ಲಿ ಸುಮಾರು ಒಂದೂವರೆ ತಿಂಗಳಿನಿಂದ ಮಳೆಯಾಗದ ಕಾರಣಕ್ಕೆ ಮುಂಗಾರು ಹಂಗಾಮಿಗೆ ಬಿತ್ತನೆ ಮಾಡಿರುವ ಬಹುತೇಕ ಬೆಳೆಗಳು ಒಣಗುತ್ತಿವೆ. ವಿಶೇಷವಾಗಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಶೇಂಗಾ ಬೆಳೆಗಾರರು ಕಂಗಾಲಾಗಿದ್ದಾರೆ.

ಮುಂಗಾರು ಹಂಗಾಮಿಗೆ ತಾಲ್ಲೂಕಿನಲ್ಲಿ ಕಸಬಾ ಹೋಬಳಿಯಲ್ಲಿ 850 ಹೆಕ್ಟೇರ್, ಧರ್ಮಪುರ ಹೋಬಳಿಯಲ್ಲಿ 20,485 ಹೆಕ್ಟೇರ್, ಐಮಂಗಲ ಹೋಬಳಿಯಲ್ಲಿ 2,400 ಹೆಕ್ಟೇರ್, ಜವನಗೊಂಡನಹಳ್ಳಿ ಹೋಬಳಿಯಲ್ಲಿ 690 ಹೆಕ್ಟೇರ್ ಶೇಂಗಾ ಬಿತ್ತನೆಯಾಗಿದೆ. ಜೂನ್–ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದ ಕಾರಣ ನಿರೀಕ್ಷೆಗೆ ಮೀರಿ ರೈತರು ಶೇಂಗಾ ಬಿತ್ತನೆ ಮಾಡಿದ್ದರು. ಪ್ರಸ್ತುತ ಶೇಂಗಾ ಕಾಯಿ ಕಟ್ಟುವ ಹಂತದಲ್ಲಿದ್ದು, ಒಂದೂವರೆ ತಿಂಗಳಿಂದ ಹದ ಮಳೆಯಾಗದ ಕಾರಣ ಬಹುತೇಕ ಕಡೆ ಬೆಳೆ ಒಣಗುತ್ತಿದೆ. ಮುಂದಿನ ಎಂಟ್ಹತ್ತು ದಿನಗಳಲ್ಲಿ ಮಳೆ ಬರದೇ ಹೋದರೆ ತೇವಾಂಶ ಕೊರತೆಯಿಂದ ಶೇ 50ಕ್ಕೂ ಹೆಚ್ಚು ಇಳುವರಿ ಕಡಿಮೆ ಆಗಲಿದೆ ಎಂದು ಕೃಷಿ ಇಲಾಖೆ ಆತಂಕ ವ್ಯಕ್ತಪಡಿಸಿದೆ.

ಮೇವು ಸಂರಕ್ಷಣೆಗೆ ಹೊರಟ ರೈತರು: ಜೂನ್ ತಿಂಗಳ ಮೊದಲ ವಾರದಲ್ಲಿ ಬಿತ್ತನೆ ಮಾಡಿರುವ ರೈತರು ಇಳುವರಿ ನಿರೀಕ್ಷೆ ಮಾಡದೇ, ಕನಿಷ್ಠ ಮೇವಾದರೂ ಸಿಗಲಿ ಎಂದು ಟ್ರ್ಯಾಕ್ಟರ್ ಕುಂಟೆ ಬಳಸಿ ಕಟಾವು ಮಾಡುತ್ತಿದ್ದಾರೆ. ಇದು ಸಾಲದು ಎಂಬಂತೆ ಧರ್ಮಪುರ ಹೋಬಳಿಯ ಬಹುತೇಕ ಕಡೆ ಶೇಂಗಾ ಬೆಳೆಗೆ ಸುರುಳಿಪೂಚಿ ರೋಗ ಕಾಣಿಸಿಕೊಂಡಿದೆ. ಹೀಗಾಗಿ ಇಳುವರಿ ಮತ್ತಷ್ಟು ಕುಂಠಿತವಾಗಲಿದೆ.

ಕೃಷಿ ಇಲಾಖೆ ಸಲಹೆ: ಶೇಂಗಾ ಬೆಳೆಯಲ್ಲಿ ಕಾಣಿಸಿಕೊಂಡಿರುವ ಸುರುಳಿ ಪೂಚಿ ಕೀಟ ಬಾಧೆ ಹತೋಟಿಗೆ, ಪ್ರತಿ ಲೀಟರ್ ನೀರಿಗೆ 2 ಮಿ.ಲೀಟರ್ ಪ್ರಪೋನಾಫಾಸ್ ಅಥವಾ 1.5 ಮಿ.ಲೀ. ಲ್ಯಾಮ್ಡ್ ಸೈಯಾಲಿತ್ರಿನ್ ಬೆರೆಸಿ ಸಿಂಪರಣೆ ಮಾಡುವಂತೆ ಸಹಾಯಕ ಕೃಷಿ ನಿರ್ದೇಶಕಿ ಉಲ್ಫತ್ ಜೈಬಾ
ತಿಳಿಸಿದ್ದಾರೆ.

ಪ್ರಗತಿಯಲ್ಲಿ ಬೆಳೆ ಸಮೀಕ್ಷೆ: ‘2021–22ನೇ ಸಾಲಿನ ಮುಂಗಾರು ಹಂಗಾಮಿಗೆ ಖಾಸಗಿ ನಿವಾಸಿಗಳ ಮೂಲಕ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ. ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಿ, ಪ್ರಸ್ತುತ ಕೃಷಿ ಬೆಳೆಗಳ ಪರಿಸ್ಥಿತಿಯನ್ನು ಕೃಷಿ ಮತ್ತು ಕಂದಾಯ ಇಲಾಖೆಯ ಸಹಯೋಗದಲ್ಲಿ ವರದಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು’ ಎಂದು ಉಲ್ಫತ್ ಜೈಬಾ
ಹೇಳಿದ್ದಾರೆ.

ಒತ್ತಾಯ: ‘ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನ ಶೇಂಗಾ ಬೆಳೆ ಸಂಪೂರ್ಣ ವಿಫಲವಾಗಿದೆ. ಎಕರೆಗೆ ಐದಾರು ಕ್ವಿಂಟಲ್ ಇಳುವರಿ ನಿರೀಕ್ಷೆ ಮಾಡಿದ್ದ ರೈತರಿಗೆ ಒಂದೆರಡು ಕ್ವಿಂಟಲ್ ಇಳುವರಿ ಸಿಗುವುದೂ ಕಷ್ಟವಾಗಿದೆ. ಅದರಲ್ಲೂ ಜೊಳ್ಳ ಕಾಳು ಹೆಚ್ಚಿರುವ ಸಾಧ್ಯತೆ ಇದೆ. ಕೃಷಿ ಇಲಾಖೆ ಬೆಳೆ ಸಮೀಕ್ಷೆಯನ್ನು ಸಕಾಲದಲ್ಲಿ ಮುಗಿಸಿ, ಎಲ್ಲ ರೈತರಿಗೆ ಬೆಳೆ ವಿಮೆ ಸಿಗುವಂತೆ ಮಾಡಬೇಕು. ವರ್ಷಗಟ್ಟಲೆ ವಿಮಾ ಪರಿಹಾರಕ್ಕಾಗಿ ರೈತರು ಅಲೆದಾಡುವಂತೆ ಮಾಡಬಾರದು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಜಿ.ಪಿ. ಯಶವಂತರಾಜು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT