ಹೊಸದುರ್ಗ: ಅನಧಿಕೃತವಾಗಿ ಗ್ರಾಮ ಒನ್ ಐಡಿಗಳನ್ನು ಬಳಸಿಕೊಂಡು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡುತ್ತಿದ್ದ ಖಾಸಗಿ ಕಂಪ್ಯೂಟರ್ ಕೇಂದ್ರಗಳ ಮೇಲೆ ಶುಕ್ರವಾರ ತಹಶೀಲ್ದಾರ್ ಪಟ್ಟರಾಜಗೌಡ ನೇತೃತ್ವದ ತಂಡ ದಾಳಿ ನಡೆಸಿ, ಮೂರು ಜನರನ್ನು ವಶ ಪಡಿಸಿಕೊಂಡು, 6 ಕಂಪ್ಯೂಟರ್ ಕೇಂದ್ರಗಳನ್ನು ಬಂದ್ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಪಟ್ಟರಾಜಗೌಡ, ಸರ್ಕಾರ ಗ್ರಾಮೀಣ ಭಾಗದಲ್ಲಿ ಬಾಪೂಜಿ, ಗ್ರಾಮ ಒನ್ ಕೇಂದ್ರ ಹಾಗೂ ಪಟ್ಟಣದ ಕರ್ನಾಟಕ ಒನ್ ಕೇಂದ್ರಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಉಚಿತ ನೋಂದಣಿಗೆ ಅವಕಾಶ ಕಲ್ಪಿಸಿದೆ. ಆದರೆ, ಖಾಸಗಿ ಕಂಪ್ಯೂಟರ್ ಸೆಂಟರ್‌ಗಳಲ್ಲಿ ಅನಧಿಕೃತವಾಗಿ ಗ್ರಾಮ ಒನ್ ಐಡಿಗಳನ್ನು ಬಳಸಿಕೊಂಡು ಫಲಾನುಭವಿಗಳಿಂದ ಹಣ ಪಡೆದು ನೋಂದಣಿ ಮಾಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ’ ಎಂದು ತಿಳಿಸಿದರು.
‘ಈ ವೇಳೆ ನೋಂದಣಿ ಮಾಡುತ್ತಿದ್ದ 6 ಕೇಂದ್ರಗಳ ಪೈಕಿ 3 ಕೇಂದ್ರಗಳ ಮಾಲೀಕರು ದಾಳಿ ಮಾಹಿತಿ ತಿಳಿದು ಬಾಗಿಲು ಹಾಕಿಕೊಂಡು ಹೋಗಿದ್ದು, ಅಂತಹ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಸದ್ಯ ಮೂರು ಕೇಂದ್ರಗಳ ಮಾಲೀಕರನ್ನು ವಶಕ್ಕೆ ಪಡೆಯಲಾಗಿದೆ. ಸಾರ್ವಜನಿಕರು ಯಾರೂ ನೋಂದಣಿಗೆ ಹಣ ನೀಡಬಾರದು. ಅಲ್ಲದೆ ಅಧಿಕೃತ ಕಂಪ್ಯೂಟರ್ ಕೇಂದ್ರಗಳಲ್ಲಿ ಮಾತ್ರ ನೋಂದಣಿ ಮಾಡಿಸಿಕೊಳ್ಳಬೇಕು. ಒಂದು ವೇಳೆ ಅನಧಿಕೃತ ನೋಂದಣಿ ಕಂಡು ಬಂದರೆ ಕೂಡಲೇ ಮಾಹಿತಿ ನೀಡಿ, ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.