ಕೃಷಿ ಉಪಕರಣ ಬೆಲೆ ಏರಿಕೆಗೆ ರೈತ ಕಂಗಾಲು

7
ಜಿಎಸ್‌ಟಿ ಜಾರಿಯಾದ ವರ್ಷದ ಬಳಿಕ ರೈತರಿಗೆ ತಟ್ಟುತ್ತಿದೆ ಬಿಸಿ

ಕೃಷಿ ಉಪಕರಣ ಬೆಲೆ ಏರಿಕೆಗೆ ರೈತ ಕಂಗಾಲು

Published:
Updated:
Deccan Herald

ಚಿತ್ರದುರ್ಗ: ತೆರಿಗೆ ಆಡಳಿತ ವ್ಯವಸ್ಥೆಯನ್ನು ಸರಳೀಕರಿಸುವ ಉದ್ದೇಶದಿಂದ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೃಷಿ ಉಪಕರಣಗಳ ಬೆಲೆ ಹೆಚ್ಚಿಸಿದೆ. ಇದರಿಂದ ಕೃಷಿ ಉತ್ಪಾದನಾ ವೆಚ್ಚದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಜಿಲ್ಲೆಯ ರೈತರನ್ನು ಇನ್ನಷ್ಟು ಹೈರಾಣ ಮಾಡಿದೆ.

ಕೃಷಿ ಉಪಕರಣಗಳ ಬೆಲೆ ಏರಿಕೆಯನ್ನು ಆರಂಭದಲ್ಲಿ ಪ್ರಶ್ನಿಸುತ್ತಿದ್ದ ರೈತರು ಈಗೀಗ ವ್ಯಾಪಾರಸ್ಥರೊಂದಿಗೆ ಗಲಾಟೆ ನಡೆಸುತ್ತಿದ್ದಾರೆ. ಜಿಎಸ್‌ಟಿ ಜಾರಿಯಾದ ಬಳಿಕ ಉಪಕರಣಗಳ ಬೆಲೆಯಲ್ಲಿ ಉಂಟಾಗಿರುವ ವ್ಯತ್ಯಾಸವನ್ನು ರೈತರಿಗೆ ಮನವರಿಕೆ ಮಾಡಿಕೊಡಲು ಕೆಲ ವ್ಯಾಪಾರಸ್ಥರು ಮಾದರಿಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದಾರೆ. ಬಿತ್ತನೆ ಬೀಜವನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಇಡಲಾಗಿದೆ.

ರಸಗೊಬ್ಬರ, ಕೀಟನಾಶಕ, ಕಳೆನಾಶಕಗಳಿಗೆ 2017ರ ಜುಲೈಗೂ ಮೊದಲು ಶೇ 5ರಷ್ಟು ತೆರಿಗೆ ಇತ್ತು. ಕೃಷಿ ಯಂತ್ರೋಪಕರಣ, ನೀರಾವರಿಗೆ ಬೇಕಾಗಿರುವ ಸಲಕರಣೆಗಳಿಗೆ ಶೇ 6ರಷ್ಟು ತೆರಿಗೆ ನಿಗದಿ ಮಾಡಲಾಗಿತ್ತು. ಜಿಎಸ್‌ಟಿ ಜಾರಿಯಾದ ಬಳಿಕ ಈ ತೆರಿಗೆ ಪ್ರಮಾಣದಲ್ಲಿ ಬದಲಾವಣೆಯಾಗಿದೆ. ಇದರ ಬಿಸಿ ನೇರವಾಗಿ ರೈತರಿಗೆ ತಟ್ಟುತ್ತಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಯಾಶ್ರಿತ ಕೃಷಿ ಪ್ರದೇಶ ಹೆಚ್ಚಾಗಿದೆ. ಈರುಳ್ಳಿ, ಮೆಕ್ಕೆಜೋಳ, ಸೂರ್ಯಕಾಂತಿ, ಶೇಂಗಾ ಬೆಳೆಯಲು ಅನೇಕ ರೈತರು ಕೊಳವೆ ಬಾವಿ ನಿರ್ಮಿಕೊಂಡಿದ್ದಾರೆ. ಹನಿ ಹಾಗೂ ತುಂತುರು ನೀರಾವರಿ ಮೂಲಕ ಮಿತ ನೀರು ಬಳಕೆಗೆ ರೈತರು ಒತ್ತು ನೀಡುತ್ತಿದ್ದಾರೆ. ಆದರೆ, ಈ ಉಪಕರಣಗಳ ಬೆಲೆ ಗಗನಮುಖಿ ಆಗಿರುವುದು ರೈತರ ಆಸಕ್ತಿಗೆ ತಣ್ಣೀರು ಎರಚಿದೆ.

ಕೊಳವೆ ಬಾವಿಗೆ ಅಗತ್ಯವಿರುವ ವಿದ್ಯುತ್‌ ಚಾಲಿತ ಯಂತ್ರೋಪಕರಣಗಳಾದ ಮೋಟಾರು, ಸ್ಟಾಟರ್‌ ಸೇರಿದಂತೆ ಮ್ಯಾಟಿಕ್‌ ಉಪಕರಣಗಳ ಬೆಲೆಯೂ ಹೆಚ್ಚಾಗಿದೆ. ಪೈಪುಗಳ ಬೆಲೆಯೂ ಹೆಚ್ಚಾಗಿರುವುದರಿಂದ ಕೊಳವೆ ಬಾವಿಯ ಕನಸು ಬಡ ರೈತರಿಗೆ ಗಗನ ಕುಸುಮವಾಗಿ ಪರಿಣಮಿಸಿದೆ.

ವೃತ್ತಿಯಲ್ಲಿ ಸಿವಿಲ್‌ ಎಂಜಿನಿಯರ್‌ ಆಗಿರುವ ಚಿತ್ರದುರ್ಗ ತಾಲ್ಲೂಕಿನ ಕ್ಯಾದಿಗೇರಿಯ ಕಿರಣ್‌ ಅವರದು ಕೃಷಿ ಕುಟುಂಬ. ಐದು ಕೊಳವೆ ಬಾವಿಗೆ ಅಗತ್ಯವಿರುವ ಎಲ್ಲ ಉಪಕರಣಗಳನ್ನು ಖರೀದಿಸುವ ಹೊಣೆ ಇವರದು. ಕೊಳವೆ ಬಾವಿಯ ಸ್ಟಾಟರ್‌ ಖರೀದಿಸಲು ಮೆದೆಹಳ್ಳಿ ರಸ್ತೆಯ ಗಣೇಶ್‌ ಪೈಪ್ಸ್‌ ಅಂಗಡಿಗೆ ಬಂದಿದ್ದ ಅವರು ಬೆಲೆಯಲ್ಲಿ ಆಗಿರುವ ಏರಿಕೆಯ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಮಳೆ ಸರಿಯಾಗಿ ಬೀಳುವುದಿಲ್ಲ. ಬಹುತೇಕ ರೈತರು ಕೊಳವೆ ಬಾವಿಗಳನ್ನು ಆಶ್ರಯಿಸಿದ್ದಾರೆ. ನೀರನ್ನು ಮಿತವಾಗಿ ಬಳಕೆ ಮಾಡುವ ಉದ್ದೇಶದಿಂದ ಹನಿ ಹಾಗೂ ತುಂತುರು ನೀರಾವರಿ ಅಳವಡಿಸಿಕೊಳ್ಳುತ್ತಾರೆ. ಇಂತಹ ಉಪಕರಣಗಳಿಗೆ ತೆರಿಗೆ ವಿನಾಯಿತಿ ನೀಡುವುದನ್ನು ಬಿಟ್ಟು ಜಿಎಸ್‌ಟಿ ವ್ಯಾಪ್ತಿಗೆ ತಂದಿದ್ದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಕಿರಣ್‌.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !