ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಗೂ ಮುನ್ನವೇ ಹೆಚ್ಚಿದ ಕಾಡ್ಗಿಚ್ಚು

ಹೊಸದುರ್ಗ: ಹಗಲು, ರಾತ್ರಿ ಹೊತ್ತಿ ಉರಿಯುವ ದೇವರಗುಡ್ಡ
Last Updated 15 ಫೆಬ್ರುವರಿ 2021, 5:02 IST
ಅಕ್ಷರ ಗಾತ್ರ

ಹೊಸದುರ್ಗ: ಈ ಬಾರಿ ಬೇಸಿಗೆಗೂ ಮುನ್ನವೇ ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ದೇವರಗುಡ್ಡ ಸೇರಿ ಇನ್ನಿತರ ಕಡೆ ಕಾಡ್ಗಿಚ್ಚು ಹೆಚ್ಚಾಗಿದೆ. ಗುಡ್ಡದ ತಪ್ಪಲಿನಲ್ಲಿರುವ ನಿವಾಸಿಗಳಿಗೆ ಭೀತಿ ಎದುರಾಗಿದೆ.

ಕಳೆದ ವರ್ಷ ಉತ್ತಮ ಮಳೆಯಾಗಿತ್ತು. ಡಿಸೆಂಬರ್‌ನಲ್ಲಿ ಸರಣಿ ವಾಯುಭಾರ ಕುಸಿತದಿಂದ ಹದ ಮಳೆಯಾಗಿತ್ತು. ಇದರಿಂದಾಗಿ ಅರಣ್ಯ ಪ್ರದೇಶ, ಗುಡ್ಡ–ಬೆಟ್ಟ, ಗೋಮಾಳ, ಕಾವಲು, ರಸ್ತೆ ಬದಿ ಸೇರಿ ಇನ್ನಿತರ ಕಡೆಗಳಲ್ಲಿ ಕಾಡುಜಾತಿಯ ಹಲವು ಬಗೆಯ ಗಿಡಗಳು, ಹುಲ್ಲು ಸಾಕಷ್ಟು ಬೆಳೆದಿತ್ತು. ಸುಮಾರು ಎರಡು ತಿಂಗಳಿನಿಂದ ಮಳೆ ಬರುವುದು ನಿಂತಿದೆ.

ಚಳಿಗಾಲ ಆರಂಭವಾದಾಗಿನಿಂದ ಹಲವು ಗಿಡಮರಗಳಲ್ಲಿ ಎಲೆಗಳು ಒಣಗಿ ಉದುರುತ್ತಿವೆ. ಹಾಗೆಯೇ ಹುಲ್ಲು ಸಹ ಒಣಗುತ್ತಿದೆ. ಅರಣ್ಯ, ಬೆಟ್ಟ–ಗುಡ್ಡಗಳಿಗೆ ಕುರಿ, ಮೇಕೆ ಮೇಯಿಸಲು ಹೋಗುವ ಕರಿಗಾಹಿಗಳು ಹಾಗೂ ಜಾನುವಾರು ಮೇಯಿಸಲು ಹೋಗುವವರು ಬೀಡಿ, ಸಿಗರೇಟ್‌ ಸೇದಿ ಎಸೆಯುತ್ತಿದ್ದಾರೆ. ಒಣಗಿರುವ ಬಾದೆಹುಲ್ಲು ಸುಟ್ಟುಹೋದರೆ ಮುಂಗಾರು ಹಂಗಾಮಿನ ಹೊತ್ತಿಗೆ ಹೊಸಚಿಗುರು ಚೆನ್ನಾಗಿ ಬರುತ್ತದೆ. ಹೊಸಚಿಗುರನ್ನು ಕುರಿ, ಮೇಕೆ, ಜಾನುವಾರು ತಿಂದರೆ ದಷ್ಟಪುಷ್ಟವಾಗಿ ಬೆಳೆಯುತ್ತವೆ ಎಂದು ಕೆಲವು ಬೆಂಕಿ ಇಡುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ದೇವರಗುಡ್ಡ ಪ್ರದೇಶದ ಸದ್ಗುರು ಆಶ್ರಮ, ಶಾಂತಿನಗರ ಸಮೀಪದಲ್ಲಿ ಹಗಲು ಹಾಗೂ ರಾತ್ರಿ ಹೊತ್ತು ಬೀಳುವ ಬೆಂಕಿಗೆ ಹುಲ್ಲು, ಕಾಡುಜಾತಿಯ ಗಿಡಗಂಟಿ, ಒಣಗಿದ ಮರಗಳು ಧಗಧಗನೆ ಉರಿಯುತ್ತಿವೆ. ದೇವರಗುಡ್ಡಕ್ಕೆ ಬೀಳುವ ಬೆಂಕಿಯ ಬೆಳಕು ಇಡೀ ಪಟ್ಟಣಕ್ಕೆ ಕಾಣಿಸುತ್ತದೆ. ಬೆಂಕಿ ಉರಿಯುವ ಸದ್ದು ಕೇಳಿಸುತ್ತಿರುತ್ತದೆ. ಕೆಲವೊಮ್ಮೆ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ದೇವರಗುಡ್ಡದ ಹಲವೆಡೆ ಬೆಂಕಿಯ ಜ್ವಾಲೆ ಕಾಣಿಸುತ್ತಿರುತ್ತದೆ. ಇದರಿಂದಾಗಿ ಪ್ರಕೃತಿಯ ಸೊಬಗು ಹಾಳಾಗುತ್ತಿದೆ. ಬೆಟ್ಟದಲ್ಲಿರುವ ಕಲ್ಲುಗಳು ಬೆಂಕಿಯ ಕಾವಿಗೆ ಸಿಡಿಯುತ್ತಿವೆ.

ಬೆಂಕಿ ನಂದಿಸಲು ತಕ್ಷಣಕ್ಕೆ ಅರಣ್ಯ ಇಲಾಖೆಯವರಾಗಲಿ, ಅಗ್ನಿ ಶಾಮಕ ಸಿಬ್ಬಂದಿಯಾಗಲಿ ಬರುವುದಿಲ್ಲ. ಬೆಂಕಿಯ ಜ್ವಾಲೆ ಬೆಟ್ಟದ ತಪ್ಪಲಿಗೆ ತಾಗಿದಾಗ ಸಮೀಪದ ಬಡಾವಣೆಗಳಿಗೆ ಅಪಾಯ ಉಂಟಾಗಬಹುದು. ಬೆಂಕಿ ನಂದಿಸಿ ಎಂದು ಅರಣ್ಯ ಹಾಗೂ ಅಗ್ನಿ ಶಾಮಕ ಠಾಣೆಗೆ ಸಾರ್ವಜನಿಕರು ತಿಳಿಸಿದಾಗ ಮಾತ್ರ ಬಂದು ಬೆಂಕಿ ನಂದಿಸುತ್ತಾರೆ. ಉಳಿದಂತೆ ಎಷ್ಟೇ ಬೆಂಕಿ ಹೊತ್ತಿ ಉರಿದರೂ ನಂದಿಸಲು ಯಾರೂ ಬರುವುದಿಲ್ಲ ಎಂದು ದೂರುತ್ತಾರೆ ಶಾಂತಿನಗರದ ನಿವಾಸಿ ಕುಮಾರ್‌, ನಾಗರಾಜು.

ದೇವರಗುಡ್ಡ ಅಷ್ಟೇ ಅಲ್ಲದೇ ತಾಲ್ಲೂಕಿನ ಲಕ್ಕಿಹಳ್ಳಿ, ಕುದುರೆ ಕಣಿವೆ, ಮೈಲಾರಪುರ, ಕೈನಡು ಕಾವಲು, ಗೋಮಾಳ, ರಸ್ತೆ ಬದಿ ಸೇರಿ ಇನ್ನಿತರ ಕಡೆಗಳಲ್ಲಿಯೂ ಬೇಸಿಗೆ ಆರಂಭ ಆಗುವ ಮೊದಲೇ ಬೆಂಕಿ ಕಾಣಿಸುತ್ತಿದೆ. ಇದರಿಂದಾಗಿ ಮಳೆಗಾಲದಲ್ಲಿ ಹುಟ್ಟಿದ್ದ ವಿವಿಧ
ತಳಿಯ ಚಿಕ್ಕಚಿಕ್ಕ ಸಸಿಗಳು ಸುಟ್ಟು ಹೋಗುತ್ತಿವೆ. ಪ್ರತಿವರ್ಷ ಬೇಸಿಗೆಯಲ್ಲಿ ಹೀಗೆ ಸುಟ್ಟರೆ ಅರಣ್ಯ ಪ್ರದೇಶದಲ್ಲಿ ಗಿಡಮರಗಳು ಉಳಿಯುವುದಾದರೂ ಹೇಗೆ? ಅರಣ್ಯದಲ್ಲಿ ಬೆಂಕಿ ಬೀಳುವುದರಿಂದ ಕಾಡುಪ್ರಾಣಿ, ಪಕ್ಷಿಗಳ ವಾಸಕ್ಕೂ ತೀವ್ರ ತೊಂದರೆಯಾಗುತ್ತದೆ. ಹಾಗಾಗಿ ಬೆಂಕಿಯಿಂದ ಪರಿಸರ ಮುಕ್ತಗೊಳಿಸಲು ಅರಣ್ಯ ಇಲಾಖೆಯವರು ಸದಾ ಶ್ರಮಿಸಬೇಕು ಎಂಬುದು ಪರಿಸರ ಪ್ರಿಯರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT