ಗೂಳಿಹಟ್ಟಿ ಶೇಖರ್‌ ಆತ್ಮಹತ್ಯೆ ಯತ್ನ ನಾಟಕ: ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ

7
ಹೊಸದುರ್ಗ:

ಗೂಳಿಹಟ್ಟಿ ಶೇಖರ್‌ ಆತ್ಮಹತ್ಯೆ ಯತ್ನ ನಾಟಕ: ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ

Published:
Updated:
Prajavani

ಹೊಸದುರ್ಗ: ‘ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ವಿನಾ ಕಾರಣ ನನ್ನನ್ನು ಹಾಗೂ ಪೊಲೀಸರನ್ನು ಆರೋಪಿಸಿ, ಅವರು ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ನಾಟಕ’ ಎಂದು ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿದರು.

‘ಶಾಸಕರ ಬೆಂಬಲದಿಂದ ಮಧುರೆ ಗ್ರಾಮದ ಪ್ರವೀಣ 500 ಲೋಡು ಮರಳು ಸಂಗ್ರಹಿಸಿದ್ದರು. ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ಹಿಡಿದಾಗ ಶಾಸಕರಿಗೆ ಬಿಡಿಸುವಂತೆ ಕೇಳಿದ್ದಾನೆ. ಬಿಡಿಸದಿದ್ದರೆ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪೊಲೀಸ್‌ ಠಾಣೆ ಎದುರು ಹೆದರಿಸಿದ್ದಾನೆ. ಆಗ ಆತನ ಕೈಯಲ್ಲಿದ್ದ ಪೆಟ್ರೋಲ್‌ ಬಾಟಲಿಯನ್ನು ಕಿತ್ತುಕೊಂಡು ಗೂಳಿಹಟ್ಟಿ ಶೇಖರ್‌ ಅವರೇ ಸುರಿದುಕೊಂಡಿದ್ದಾರೆ. ಈಗ ಪೊಲೀಸರ ದೌರ್ಜನ್ಯದಿಂದ ಆತ್ಮಹತ್ಯೆಗೆ ಯತ್ನಿಸಿದೆ’ ಎಂದು ಹೇಳಿಕೆ ನೀಡಿರುವುದು ಶುದ್ಧ ಸುಳ್ಳು ಎಂದು ಆರೋಪಿಸಿದರು.

‘ಯಾವುದೇ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡಿಲ್ಲ. ಮರಳು ನೀತಿಯಲ್ಲಿ ಮೂಗು ತೂರಿಸಿಲ್ಲ. ಪೊಲೀಸ್‌ ಇಲಾಖೆಯ ಯಾವುದೇ ಅಧಿಕಾರಿಯನ್ನು ವರ್ಗಾವಣೆ ಮಾಡಿಸಿಲ್ಲ. ಅಧಿಕಾರಿಗಳ ವರ್ಗಾವಣೆಯಲ್ಲಿ ರಾಜ್ಯ ಮಟ್ಟದ ಸಮಿತಿಯ ನಿರ್ಧಾರವೇ ಅಂತಿಮ. ಇಂತಹ ನಿಯಮವನ್ನು ಕ್ಷೇತ್ರದ ಶಾಸಕ ತಿಳಿದುಕೊಳ್ಳದೇ, ನನ್ನ ಮೇಲೆ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದ ಮಾತು’ ಎಂದು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.

‘ಗೂಳಿಹಟ್ಟಿ ಮರಳು ದಂಧೆ, ಅಕ್ರಮ ಮದ್ಯ ಮಾರಾಟ, ಜೂಜು ದಂಧೆ ನಿಲ್ಲಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇಂತಹ ಅಕ್ರಮಗಳನ್ನು ನಿಲ್ಲಿಸುತ್ತೇವೆ ಎಂಬ ನೆಪದಲ್ಲಿ ಅಧಿಕಾರಿಗಳ ಸಭೆ ನಡೆಸಿ, ವಸೂಲಾತಿ ಮಾಡುವ ದಂಧೆ ಮಾಡುತ್ತಿದ್ದಾರೆ. ಶಾಸಕರ ಬೆಂಬಲಿಗರು ಬಾರ್‌ಗಳಿಗೆ ಹೋಗಿ ಅಲ್ಲಿನ ಮಾಲೀಕರನ್ನು ಬೆದರಿಸಿ ಮದ್ಯ ಎತ್ತಿಕೊಂಡು ಬರುತ್ತಿದ್ದಾರೆ. ಜೂಜಾಟಕ್ಕೆ ಅವಕಾಶ ಮಾಡಿಕೊಟ್ಟು ಜೂಜುಕೋರರಿಂದಲೂ ಹಣ ಸುಲಿಗೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಅಕ್ರಮ ಮರಳು ದಂಧೆಗೆ ಶಾಸಕರೇ ಅವಕಾಶ ಮಾಡಿಕೊಟ್ಟಿದ್ದಾರೆ. ಕಳೆದ ಚುನಾವಣೆ ಸಂದರ್ಭದಲ್ಲಿ ಮರಳು ದಂಧೆಕೋರರಿಂದ ಪಡೆದಿರುವ ₹ 10 ಲಕ್ಷವನ್ನು ತಾಲ್ಲೂಕಿನ ಹಲವು ಗ್ರಾಮಗಳ ಜನರಿಗೆ ದಾನ ಮಾಡಿದ್ದಾರೆ. ಈ ವಾಸ್ತವ ಮರೆಮಾಚಿ ಚುನಾವಣೆಯಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡಿದರು’ ಎಂದು ಕಿಡಿಕಾರಿದರು.

ಮಾಜಿ ಶಾಸಕ ಇಲ್ಕಲ್‌ ವಿಜಯಕುಮಾರ್‌, ತಾಲ್ಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಇಸ್ಮಾಯಿಲ್‌, ಮುಖಂಡರಾದ ಗೋ. ತಿಪ್ಪೇಶ್‌, ಆಗ್ರೋಶಿವಣ್ಣ, ಬಸವರಾಜು, ವೆಂಕಟೇಶಮೂರ್ತಿ, ಕೆ.ಸಿ. ನಿಂಗಣ್ಣ, ಅಲ್ತಾಫ್‌ ಪಾಷಾ, ಕಿರಣ್‌ಕುಮಾರ್‌, ಚಂದ್ರಶೇಖರ್‌, ಎಸ್‌.ಆರ್‌. ದೇವಿರಪ್ಪ, ಲೋಕಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !