ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡರಥ ಎಳೆದು ಪುನೀತರಾದ ಭಕ್ತರು

ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ಭಕ್ತರ ದಂಡು l ಭಕ್ತಿಯ ಪರಾಕಾಷ್ಠೆ ಮೆರೆದ ಭಕ್ತರು
Last Updated 21 ಮಾರ್ಚ್ 2022, 5:31 IST
ಅಕ್ಷರ ಗಾತ್ರ

ವಿ. ಧನಂಜಯ ನಾಯಕನಹಟ್ಟಿ

ನಾಯಕನಹಟ್ಟಿ: ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಮಧ್ಯ ಕರ್ನಾಟಕದ ಐತಿಹಾಸಿಕ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವ ಭಾನುವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಎರಡು ವರ್ಷಗಳಿಂದ ಕೋವಿಡ್‌ನಿಂದಾಗಿ ಭಕ್ತರ ಸಂಖ್ಯೆ ಕ್ಷೀಣಿಸಿದ್ದರಿಂದ ಜಾತ್ರೆ ಕಳೆಗುಂದಿತ್ತು. ಆದರೆ, ಭಾನುವಾರ ನಡೆದ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿ ಜಾತ್ರೆಯ ಮೆರುಗನ್ನು ಹೆಚ್ಚಿಸಿದರು. ಬೆಳಿಗ್ಗೆ 10 ಗಂಟೆಗೆ ಚಿಕ್ಕ ರಥೋತ್ಸವ ಜರುಗಿತು. ನಂತರ ದೊಡ್ಡ ರಥೋತ್ಸವಕ್ಕೆ ಸಿದ್ಧತೆಗಳು ಪ್ರಾರಂಭವಾದವು. ಮಧ್ಯಾಹ್ನ 3ಕ್ಕೆ ಅಲಂಕೃತ ಚಿನ್ನದ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿದ್ದ ಪಲ್ಲಕ್ಕಿಯೊಂದಿಗೆ ತರಲಾಯಿತು. ಗ್ರಾಮದ ಗೊಂಚಿಗಾರ ವಂಶಸ್ಥರು ಬಲಿ ಅನ್ನವನ್ನು ರಥದ ಮುಂಭಾಗಕ್ಕೆ ಹೊತ್ತುತಂದು ರಥದ ಚಕ್ರಗಳಿಗೆ ಎಡೆ ಹಾಕಿದರು.

ಬಾಬ್ತುದಾರರು ರಥದ ಗಾಲಿಗೆ ಬಲಿ ಅನ್ನ ಸಮರ್ಪಿಸಿದ ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಲಾಯಿತು. ರಥಕ್ಕೆ ಚಾಲನೆ ನೀಡುವ ಮುನ್ನ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ನಡೆಯಿತು. ನಂತರ ತಳಕು, ಮನ್ನೇಕೋಟೆ ಹಾಗೂ ನಾಯಕನಹಟ್ಟಿ ಗ್ರಾಮಸ್ಥರಿಂದ ತಿಪ್ಪೇರುದ್ರಸ್ವಾಮಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು. 11 ಸುತ್ತುಗಳ ವಿವಿಧ ಬಗೆಯ ಬಣ್ಣದ ಬಾವುಟ ಹಾಗೂ ದೊಡ್ಡ ದೊಡ್ಡ ಹೂವಿನ ಹಾರಗಳಿಂದ ಸಿಂಗರಿಸಿದ್ದ75 ಅಡಿ ಎತ್ತರ 80 ಟನ್ ತೂಕದ ಬೃಹತ್ ರಥಕ್ಕೆ ಮಧ್ಯಾಹ್ನ 3.30ಕ್ಕೆ ಹಸಿರು ಬಾವುಟ ತೋರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ರಥವು ತೇರು ಬೀದಿಯಿಂದ ಪಾದಗಟ್ಟೆಯವರೆಗೆ ಚಲಿಸುವಾಗ ಭಕ್ತರು ರಥಕ್ಕೆ ಬಾಳೆಹಣ್ಣು, ಕಾಳುಮೆಣಸು, ಧವನ, ಹೂವು, ಚೂರು ಬೆಲ್ಲವನ್ನು, ಎರಚಿ ತಮ್ಮ ಇಷಾರ್ಥವನ್ನು ಈಡೇರಿಸುವಂತೆ ಭಕ್ತಿ ಪೂರ್ವಕವಾಗಿ ಪ್ರಾರ್ಥಿಸುತ್ತಾ ‘ತಿಪ್ಪೇರುದ್ರಸ್ವಾಮಿಗೆ ಜಯವಾಗಲಿ’, ‘ಕಾಯಕ ಯೋಗಿಗೆ ಜಯವಾಗಲಿ’ ಎನ್ನುವ ಜಯಘೋಷಗಳನ್ನು ಕೂಗುತ್ತಾ ರಥದ ದೊಡ್ಡ ಗಾತ್ರದ ಹಗ್ಗವನ್ನು ಎಳೆದು ಧನ್ಯರಾದರು.

ರಥವನ್ನು ಮುನ್ನೆಡೆಸುವ ಸನ್ನೆಗಾರರು ರಥದ ಗಾಲಿಗೆ ಅಡ್ಡಲಾಗಿ ಮರದ ದಿಮ್ಮಿಗಳನ್ನು ಇಟ್ಟು
ರಥದ ಚಲನೆಯನ್ನು ನಿಯಂತ್ರಿಸುತ್ತಿದ್ದರು. ಆಗ ಸನ್ನೆ ನೀಡಿದಾಗ ರಥ ಅಲ್ಲಾಡುತ್ತಿದ್ದಂತೆ ಲಕ್ಷಾಂತರ ಭಕ್ತರು ಕೇಕೆ ಸಿಳ್ಳೆ ಹೊಡೆಯುತ್ತಿದ್ದ ದೃಶ್ಯ ರೋಮಾಂಚನಗೊಳಿಸುತ್ತಿತ್ತು.

ಮೋಡಕವಿದ ವಾತವರಣವಿದ್ದರೂ ಲಕ್ಷಾಂತರ ಭಕ್ತರು ತಮ್ಮ ಆರಾಧ್ಯ ದೈವ ತಿಪ್ಪೇರುದ್ರಸ್ವಾಮಿ ರಥೋತ್ಸವದಲ್ಲಿ ತಮ್ಮ ಭಕ್ತಿ ಭಾವ ಸಮರ್ಪಿಸಿದರು. ಬೆಳಗ್ಗೆಯಿಂದಲೇ ಒಳಮಠ ಹಾಗೂ ಹೊರಮಠ ದೇವಾಲಯಗಳಲ್ಲಿ ಲಕ್ಷಾಂತರ ಭಕ್ತರು ದೇವರ ದರ್ಶನ ಪಡೆಯಲು ಸರದಿ ಸಾಲಿನಲ್ಲಿ ನಿಂತಿದ್ದರು. ಇನ್ನೂ ಒಳಮಠದ ಮುಂಭಾಗದಲ್ಲಿ ನಿರ್ಮಿಸಿದ್ದ ಕೊಬ್ಬರಿ ಸುಡುವ ಸ್ಥಳದಲ್ಲಿ ಅಪಾರ ಪ್ರಮಾಣದ ಕೊಬ್ಬರಿಯನ್ನು ಸುಟ್ಟು ಭಕ್ತಿಯನ್ನು ಅರ್ಪಿಸಿದರು.

ರಥೋತ್ಸವದಲ್ಲಿ ರಾಜ್ಯ ಹಾಗೂ ನೆರೆಯ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಈ ವೇಳೆ ನೂತನ ದಂಪತಿ ಪರಸ್ಪರ ಕೈಹಿಡಿದು ಓಡಾಡುತ್ತಾ ವಿರಾಜಮಾನವಾಗಿದ್ದ ದೊಡ್ಡರಥದ ಮೇಲಿನ ಕಳಸಕ್ಕೆ ಕೈಗಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ರಥವು ಪಾದಗಟ್ಟೆ ಹತ್ತಿರ ಸಾಗಿದಾಗ ಅಲ್ಲಿನ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಪೂಜೆಯನ್ನು ಸಲ್ಲಿಸಿ ಮತ್ತೆ ರಥದಲ್ಲಿನ ಉತ್ಸವ ಮೂರ್ತಿಯನ್ನು ಹಿಮ್ಮುಖವಾಗಿ ಕೂರಿಸಿ ರಥಕ್ಕೆ ಚಾಲನೆ ನೀಡಿ ರಥ ನಿಲ್ಲುವ ಸ್ಥಳಕ್ಕೆ ಬಂದು ನೆಲೆ ನಿಂತಿತು. ನಂತರ ಉತ್ಸವ ಮೂರ್ತಿಯೂ ಪಲ್ಲಕ್ಕಿಯೊಂದಿಗೆ ಒಳಮಠದ ಪ್ರವೇಶಿಸಿತು.

ಸಂಚಾರ ದಟ್ಟಣೆ: ಸಂಚಾರ ದಟ್ಟಣೆಯಾಗದಂತೆ ಗ್ರಾಮದಿಂದ 2 ಕಿ.ಮೀ. ದೂರದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗಿತ್ತು. ಲಘು ವಾಹನಗಳಿಗೆ ಇನ್ನೂ ಹತ್ತಿರದ ಪ್ರದೇಶದಲ್ಲಿ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿತ್ತು. ಹಾಗಾಗಿ ಸುಗಮ ಸಂಚಾರವಿತ್ತು, ವೃದ್ಧರು, ಮಕ್ಕಳಿಗೆ ನೆರವಾಗಲು ಆಟೊ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಕೆ.ಎಸ್.ಆರ್.ಟಿ.ಸಿ ವತಿಯಿಂದ 150ಕ್ಕೂ ಹೆಚ್ಚು ಬಸ್ ಸೌಲಭ್ಯ ಒದಗಿಸಿದ್ದರೆ, 100ಕ್ಕೂ ಅಧಿಕ ಖಾಸಗಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು.

ವ್ಯಾಪಾರ ವಹಿವಾಟು ಜೋರು: ಜಾತ್ರೆಯ ನಿಮಿತ್ತ ಪಟ್ಟಣದ ತುಂಬೆಲ್ಲಾ ನೂರಾರು ಅಂಗಡಿಗಳು ಇದ್ದವು. ಜಾತ್ರೆಯಲ್ಲಿ ಬೆಂಡು–ಬತ್ತಾಸು, ಸಿಹಿ ತಿನಿಸುಗಳು, ಮಕ್ಕಳ ಆಟಿಕೆಗಳು, ಪೂಜಾ ಸಾಮಗ್ರಿಗಳ ವ್ಯಾಪಾರ ಜೋರಾಗಿತ್ತು.

ರಥೋತ್ಸವದ ವೇಳೆ ಸಾರಿಗೆ ಸಚಿವ ಬಿ. ಶ್ರೀರಾಮುಲು, ಮಾಜಿ ಶಾಸಕ ಡಿ. ಸುಧಾಕರ್, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ಉಪವಿಭಾಗಾಧಿಕಾರಿ ಚಂದ್ರಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ, ತಹಶೀಲ್ದಾರ್ ಎನ್. ರಘುಮೂರ್ತಿ, ದೇವಾಲಯ ಇಒ ಗಂಗಾಧರಪ್ಪ, ಮುಖ್ಯಾಧಿಕಾರಿ ಎನ್.ಟಿ. ಕೋಡಿ ಭೀಮರಾಯ, ಗ್ರಾಮಸ್ಥರಾದ ಜೆ.ಪಿ. ರವಿಶಂಕರ್, ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ, ದಳವಾಯಿ ತಿಪ್ಪೇಸ್ವಾಮಿ, ಕೆ.ಎನ್. ತಿಪ್ಪೇರುದ್ರಪ್ಪ, ಎನ್. ಮಹಾಂತಣ್ಣ, ಟಿ. ರುದ್ರಮುನಿ, ಉಮೇಶ, ಗೌಡ್ರು ರುದ್ರಣ್ಣ ಇದ್ದರು.

ರಥಕ್ಕೆ ಬಿಗಿ ಭದ್ರತೆ

ರಥದ ಸುತ್ತಲೂ ಕಬ್ಬಿಣದ ಗ್ಯಾಲರಿಯನ್ನು ನಿರ್ಮಿಸಲಾಗಿತ್ತು. ಭಕ್ತರು ಅಲ್ಪ ದೂರದಿಂದಲೇ ರಥದ ದರ್ಶನ ಪಡೆಯುತ್ತಿದ್ದರು. ಪ್ರಮುಖವಾಗಿ ರಥ ಎಳೆಯುವ (ಮೀಣಿ) ಹಗ್ಗವನ್ನು ರಥೋತ್ಸವದ ದಿನ ಸಿದ್ಧಪಡಿಸಲಾಗಿತ್ತು.

ಜಾತ್ರಾ ಮಹೋತ್ಸವದಲ್ಲಿ ನಂದಿ ಧ್ವಜ, 40 ಅಡಿ ಉದ್ದದ ಪಂಜು, ಚಂಡೆ ಮದ್ದಳೆ, ಗೊರವರ ಕುಣಿತ, ಬಸವನ ಕುಣಿತ, ಕರಡೆ ಮಜಲು, ಕಹಳೆ, ಮಹಿಳೆಯರ ವೀರಗಾಸೆ, ಕೋಲಾಟ ಜನಪದ ಕಲಾತಂಡಗಳು ಜಾತ್ರೆಯ ಮೆರಗು ಹೆಚ್ಚಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT