ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ಗ್ರಾ.ಪಂ ಅಧಿಕಾರ ಮೊಟಕುಗೊಳಿಸುವ ಹುನ್ನಾರ: ಮಾಜಿ ಸಚಿವ ಎಚ್. ಆಂಜನೇಯ

Last Updated 28 ನವೆಂಬರ್ 2021, 7:26 IST
ಅಕ್ಷರ ಗಾತ್ರ

ಹಿರಿಯೂರು:‘ಬಿಜೆಪಿ ಮತ್ತು ಅದರಲ್ಲಿರುವ ಮುಖಂಡರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಸಂವಿಧಾನದಲ್ಲಿ ನಂಬಿಕೆ ಇಲ್ಲ. ಹೀಗಾಗಿ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿದಲ್ಲಿ ಪ್ರಸ್ತುತ ಇರುವ ಗ್ರಾಮ ಪಂಚಾಯಿತಿ ಅಧಿಕಾರವನ್ನು ಮೊಟಕುಗೊಳಿಸುತ್ತಾರೆ’ ಎಂದು ಮಾಜಿ ಸಚಿವ ಎಚ್. ಆಂಜನೇಯ ಆರೋಪಿಸಿದರು.

ತಾಲ್ಲೂಕಿನ ನಂಜಯ್ಯನಕೊಟ್ಟಿಗೆ ಬಡಾವಣೆಯಲ್ಲಿ ಶನಿವಾರ ವಿಧಾನಪರಿಷತ್ ಅಭ್ಯರ್ಥಿ ಬಿ. ಸೋಮಶೇಖರ್ ಪರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ವಸತಿ ಯೋಜನೆ ಒಳಗೊಂಡಂತೆ ಸರ್ಕಾರದ ಎಲ್ಲಾ ಯೋಜನೆಗಳಿಗೂ ಗ್ರಾಮಸಭೆ ನಡೆಸುವ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿತ್ತು. ಈಗ ಬಿಜೆಪಿಯವರು ಗ್ರಾಮ ಪಂಚಾಯಿತಿ ಅಧಿಕಾರ ಕಿತ್ತುಕೊಂಡು ಫಲಾನುಭವಿಗಳ ಆಯ್ಕೆ ಅಧಿಕಾರವನ್ನು ಶಾಸಕರಿಗೆ ಕೊಡುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳಿಗೆ ಇರುವ ಪರಮಾಧಿಕಾರವನ್ನು ಕಿತ್ತುಕೊಳ್ಳಲಾಗುತ್ತಿದೆ. ಬಿಜೆಪಿಗೆ ವಿಧಾನಪರಿಷತ್‌ನಲ್ಲಿ ಬಹಮತ ದೊರೆತಲ್ಲಿ ಜನವಿರೋಧಿ ಕಾನೂನುಗಳನ್ನು ತರಲು ಸಹಕಾರಿಯಾಗುತ್ತದೆ’ ಎಂದು ದೂರಿದರು.

‘ಉದ್ಯೋಗ ಖಾತರಿ ಯೋಜನೆ ಮೂಲಕ ಬಡವರ ಕೈಗಳಿಗೆ ಕೆಲಸ ಕೊಟ್ಟಿದ್ದು, ಬಡವರು ಹಸಿವಿನಿಂದ ಸಾಯುವುದನ್ನು ತಡೆಯಲು ಅನ್ನಭಾಗ್ಯ ಯೋಜನೆ, ಇಂದಿರಾ ಕ್ಯಾಂಟೀನ್ ಜಾರಿಗೆ ತಂದಿದ್ದು ಕಾಂಗ್ರೆಸ್. ದೇಶವನ್ನು ಸಮರ್ಥವಾಗಿ ಕಟ್ಟುವ ಕೆಲಸ ಮಾಡಿದ್ದು ನಾವಾದರೆ, ಸುಳ್ಳಿನ ಸರಮಾಲೆಯ ಮೂಲಕ ದೇಶದ ಜನರಿಗೆ ವಂಚಿಸಿದ್ದು ಬಿಜೆಪಿ. ಸುಧಾಕರ್ ಅಭಿವೃದ್ಧಿಯ ಹರಿಕಾರ. ಮುಂದಿನ ಚುನಾವಣೆಗೆ ಅವರದ್ದೇ ನಾಯಕತ್ವದಲ್ಲಿ ಹೋಗೋಣ’ ಎಂದು ಸಲಹೆ ನೀಡಿದರು.

ಮಾಜಿ ಸಚಿವ ಡಿ. ಸುಧಾಕರ್, ‘ಕ್ಷೇತ್ರದಲ್ಲಿ ಹಿಂದಿನ ಮೂರೂವರೆ ವರ್ಷದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ. ಕಾಂಗ್ರೆಸ್ ಅಧಿಕಾರ ಇದ್ದಾಗ ಬಿಡುಗಡೆ ಮಾಡಿಸಿದ್ದ ಅನುದಾನದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಸುಳ್ಳು ಆಶ್ವಾಸನೆಯಿಂದ ಅಭಿವೃದ್ಧಿ ಅಸಾಧ್ಯ. ಕೆಲಸ ಮಾಡುವ ಬದ್ಧತೆ ಬೇಕು. ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದಲ್ಲಿ ಇನ್ನಷ್ಟು ಜನಪರವಾಗಿ ಕಾರ್ಯನಿರ್ವಹಿಸುತ್ತೇವೆ’ ಎಂದು ಭರವಸೆ ನೀಡಿದರು.

ಶಾಸಕ ಟಿ. ರಘುಮೂರ್ತಿ, ರಾಜ್ಯ ಕಾರ್ಮಿಕ ವಿಭಾಗದ ಅಧ್ಯಕ್ಷ ಜಿ.ಎಸ್. ಮಂಜುನಾಥ್, ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಮಾತನಾಡಿದರು.

ಪರಿಷತ್ ಅಭ್ಯರ್ಥಿ ಬಿ. ಸೋಮಶೇಖರ್, ಶಶಿಕಲಾ ಸುರೇಶ್ ಬಾಬು, ಷಂಸುನ್ನೀಸಾ, ಬಿ.ಎನ್. ಪ್ರಕಾಶ್, ತಾಜ್ ಪೀರ್, ಖಾದಿ ರಮೇಶ್, ಆರ್. ಮಂಜುನಾಥ್, ಡಾ. ಜೆ.ಜೆ. ಹಟ್ಟಿ ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT