ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರ್ತಿಯಾದ ಎಚ್.ಡಿ. ಪುರದ ಕಲ್ಯಾಣಿ

ಸತತ ಮಳೆಯಿಂದ 100 ಅಡಿ ಆಳದ ಹೊಂಡದಲ್ಲಿ ಉಕ್ಕಿದ ನೀರು
Last Updated 8 ಆಗಸ್ಟ್ 2022, 5:27 IST
ಅಕ್ಷರ ಗಾತ್ರ

ಹೊಳಲ್ಕೆರೆ: ಸತತ ಮಳೆಯಿಂದ ತಾಲ್ಲೂಕಿನ ಐತಿಹಾಸಿಕ ಹೊರಕೆರೆದೇವರಪುರದ ಲಕ್ಷ್ಮೀ ನರಸಿಂಹ ಸ್ವಾಮಿಯ ಕಲ್ಯಾಣಿ ತುಂಬಿ ತುಳುಕುತ್ತಿದೆ.

ಕಲ್ಯಾಣಿಯು ಸುಮಾರು 100 ಅಡಿ ಆಳವಿದ್ದು, ನೀರು ಸ್ಫಟಿಕದಂತೆ ಕಂಗೊಳಿಸುತ್ತಿದೆ. ಕಲ್ಯಾಣಿ ಸ್ವಚ್ಛವಾಗಿರುವುದರಿಂದ ನೀರು ಪರಿಶುದ್ಧವಾಗಿದೆ.

‘ಕಲ್ಯಾಣಿಗೆ ಹೊರಗಿನಿಂದ ನೀರು ಹರಿದು ಬರುವುದಿಲ್ಲ. ಅಂತರ್ಜಲದಿಂದಲೇ ತುಂಬಿದ್ದು, ಶುದ್ಧ ನೀರು ಸಂಗ್ರಹವಾಗಿದೆ. ತಾಳ್ಯ ಹಾಗೂ ನಮ್ಮೂರಿನ ಕೆರೆಯಲ್ಲಿ ನೀರು ಬಂದರೆ ಕಲ್ಯಾಣಿಗೂ ನೀರು ಬರುತ್ತದೆ. ಅಲ್ಲದೆ ಈ ವರ್ಷ ವಾಣಿ ವಿಲಾಸ ಸಾಗರದಲ್ಲಿಯೂ 125 ಅಡಿ ನೀರಿದ್ದು, ಅಲ್ಲಿನ ನೀರೂ ಅಂತರ್ಜಲದ ಮೂಲಕ ಬಂದಿರಬಹುದು. ಈಗ ಕಲ್ಯಾಣಿಯಲ್ಲಿ ನೆಲಮಟ್ಟದವರೆಗೆ ನೀರಿದ್ದು, ಸುತ್ತಲಿನ ಅಂತರ್ಜಲ ಹೆಚ್ಚಾಗಿದೆ’ ಎನ್ನುತ್ತಾರೆ ಗ್ರಾಮದ ಆನಂದ್, ಟಿ. ಮಹಾಂತೇಶ್ ಹಾಗೂ ಶ್ರೀನಿಧಿ.

‘800 ವರ್ಷಗಳ ಹಿಂದೆ ಇಲ್ಲಿಯ ಲಕ್ಷ್ಮೀ ನರಸಿಂಹ ಸ್ವಾಮಿಯ ದೇವಸ್ಥಾನ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಆ ಕಾಲದಲ್ಲಿ ದೇವಾಲಯ ನಿರ್ಮಿಸುವ ಕಾರ್ಮಿಕರು, ಶಿಲ್ಪಿಗಳಿಗೆ ಕುಡಿಯುವ ನೀರಿಗಾಗಿ ಕಲ್ಯಾಣಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಅಲ್ಲದೆ ದೇವಾಲಯದ ಮುಂದೆ ಎತ್ತರವಾದ ಕಲ್ಲಿನ ರಾಜಗೋಪುರ ನಿರ್ಮಿಸಲಾಗಿದೆ. ಕಲ್ಯಾಣಿಯ ಮಣ್ಣನ್ನು ಬಳಸಿ ಗೋಪುರದ ಮೇಲ್ಭಾಗಕ್ಕೆ ಬೃಹತ್ ಕಲ್ಲುಗಳನ್ನು ಸಾಗಿಸಲಾಗಿದೆ’ ಎಂದು ದೇವಸ್ಥಾನದ ಅರ್ಚಕ ಕೃಷ್ಣ ಭಟ್ ಹೇಳುತ್ತಾರೆ.

‘10 ವರ್ಷಗಳ ಹಿಂದೆ ಕಲ್ಯಾಣಿ ತುಂಬಿತ್ತು. ಆಗ ಕಲ್ಯಾಣಿಯಲ್ಲಿ ಲಕ್ಷ್ಮೀ ನರಸಿಂಹ ಸ್ವಾಮಿಯ ತೆಪ್ಪೋತ್ಸವ ನಡೆಸಲಾಗಿತ್ತು. ಈ ವರ್ಷ ಮತ್ತೆ ಕಲ್ಯಾಣಿ ತುಂಬಿದೆ. ಆದರೆ ತೆಪ್ಪೋತ್ಸವ ನಡೆಸುವುದಕ್ಕಿಂತ ಪ್ರಮುಖವಾಗಿ ಗುಂಡಿನ ಸೇವೆ ಮಾಡಬೇಕು. 2006ರಲ್ಲಿ ಗುಂಡಿನ ಸೇವೆ ನಡೆದಿದ್ದು, ಮತ್ತೆ ನಡೆದಿಲ್ಲ’ ಎನ್ನುತ್ತಾರೆ
ಕೃಷ್ಣ ಭಟ್.

ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ನಿರ್ಮಸಿದಾಗಲೇ ಕಲ್ಯಾಣಿಯನ್ನೂ ನಿರ್ಮಿಸಲಾಗಿದೆ. ಹಿಂದೆ ಈ ಕಲ್ಯಾಣಿ ತುಂಬಿದಾಗ ಭತ್ತ ಬೆಳೆಯುತ್ತಿದ್ದರು ಎಂದು ಹಿರಿಯರು ಹೇಳುತ್ತಾರೆ.

- ಕೃಷ್ಣಭಟ್, ದೇವಸ್ಥಾನದ ಅರ್ಚಕ

ವಿಜಯ ನಗರದ ಅರಸ ಅಚ್ಯುತ ರಾಯನ ಆದೇಶದಂತೆ ಇಲ್ಲಿಯ ದೇವಸ್ಥಾನ ಹಾಗೂ ಕಲ್ಯಾಣಿ ನಿರ್ಮಿಸಲಾಗಿದೆ ಎಂದು ಐತಿಹ್ಯವಿದೆ. ಕಲ್ಯಾಣಿ ತುಂಬಿರುವುದರಿಂದ ಸುತ್ತಲಿನ ಪ್ರದೇಶದಲ್ಲಿ ನೀರು ಉಕ್ಕುತ್ತಿದೆ.

- ಎಚ್.ಡಿ.ರಂಗಯ್ಯ, ಲಕ್ಷ್ಮೀ ನರಸಿಂಹ ಸ್ವಾಮಿ ಟ್ರಸ್ಟ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT