ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರ್‌ ಘರ್‌ ತಿರಂಗಾ ಅಭಿಯಾನ: ದ್ವಿಚಕ್ರ ವಾಹನ ಜಾಥಾದಲ್ಲಿ ರಾರಾಜಿಸಿದ ರಾಷ್ಟ್ರಧ್ವಜ

Last Updated 12 ಆಗಸ್ಟ್ 2022, 5:06 IST
ಅಕ್ಷರ ಗಾತ್ರ

ಚಿತ್ರದುರ್ಗ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ‘ಹರ್ ಘರ್ ತಿರಂಗಾ’ ಅಭಿಯಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಿಜೆಪಿ ವತಿಯಿಂದ ನಗರದಲ್ಲಿ ಗುರುವಾರ ದ್ವಿಚಕ್ರ ವಾಹನ ಜಾಥಾ ನಡೆಸಲಾಯಿತು.

ಚಂದ್ರವಳ್ಳಿಯಿಂದ ಆರಂಭವಾದ ಜಾಥಾ ಕನಕ ವೃತ್ತ, ಹೊಳಲ್ಕೆರೆ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ವೃತ್ತ, ಬಿ.ಡಿ. ರಸ್ತೆ, ಕೆಳಗೋಟೆ ಮಾರ್ಗವಾಗಿ ಹಳೆ ಮಾಧ್ಯಮಿಕ ಶಾಲಾ ಆವರಣ ತಲುಪಿತು. ತ್ರಿವರ್ಣ ಧ್ವಜ ಹಿಡಿದು ದ್ವಿಚಕ್ರ ವಾಹನದಲ್ಲಿ ಸಂಚರಿಸಿದ ಬಿಜೆಪಿ ಕಾರ್ಯಕರ್ತರು, ದೇಶಭಕ್ತಿ ಮೂಡಿಸುವ ಘೋಷಣೆ ಕೂಗಿದರು. ಸಾವಿರಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಜಾಥಾದಲ್ಲಿದ್ದವು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಈ ಸಂಭ್ರಮವನ್ನು ಪ್ರತಿ ಮನೆಯಲ್ಲಿ ಆಚರಿಸಬೇಕಿದೆ. ಪ್ರತಿಯೊಬ್ಬರು ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶಪ್ರೇಮ ಅಭಿವ್ಯಕ್ತಿಗೊಳಿಸಬೇಕು. ಅಮೃತ ಮಹೋತ್ಸವದಲ್ಲಿ ಪ್ರತಿಯೊಬ್ಬರು ಭಾಗಿಯಾಗಬೇಕು’ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕೋರಿಕೊಂಡರು.

‘ಸ್ವಾತಂತ್ರ್ಯದ ಸಂಭ್ರಮದಲ್ಲಿ ನಡೆದ ಕರಾಳ ನೆನಪುಗಳನ್ನು ಮೆಲುಕು ಹಾಕುವ ಅಗತ್ಯವಿದೆ. ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಘಟನೆಗಳನ್ನು ಮರೆಯಲು ಸಾಧ್ಯವಿಲ್ಲ. ಕ್ವಿಟ್‌ ಇಂಡಿಯಾ ಚಳವಳಿ, ಉಪ್ಪಿನ ಸತ್ಯಾಗ್ರಹ ನೆನಪು ಮಾಡಿಕೊಳ್ಳಬೇಕಿದೆ. ದೇಶದ ವಿಮೋಚನೆಗಾಗಿ ಹೋರಾಟ ಮಾಡಿದ ನಾಯಕರ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಬೇಕಿದೆ’ ಎಂದು ಹೇಳಿದರು.

‘ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾದ ಬಳಿಕ ದೇಶ ಅಭಿವೃದ್ಧಿ ಹಾದಿಗೆ ಬಂದಿತು. ಅದೂವರೆಗೆ ಹಲವು ಪ್ರಧಾನಿಗಳು ದೇಶವನ್ನು ಆಳಿದ್ದರು. ಆದರೆ, ವಾಜಪೇಯಿ ಅವರ ಅವಧಿಯಲ್ಲಿ ಇಡೀ ವಿಶ್ವ ಭಾರತದತ್ತ ತಿರುಗಿ ನೋಡುವಂತೆ ಆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಸ್ವಾಭಿಮಾನದ ಸಂಕೇತವಾಗಿರುವ ರಾಮಮಂದಿರ ನಿರ್ಮಾಣ ಮಾಡುವ ಮೂಲಕ ದೇಶದ ಬಹುತೇಕರ ಕನಸು ನನಸು ಮಾಡುತ್ತಿದ್ದಾರೆ’ ಎಂದು ಬಣ್ಣಿಸಿದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುರೇಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ ಪಾಲ್ಗೊಂಡಿದ್ದರು.

‘ಎಲ್ಲರಿಗೂ ಸಿಗಬೇಕು ಅವಕಾಶ’
ಅಧಿಕಾರ ನಡೆಸುವ ಅವಕಾಶ ಎಲ್ಲ ಸಮುದಾಯಕ್ಕೂ ಸಿಗಬೇಕು. ಬಿಜೆಪಿ ಇಂತಹ ಅವಕಾಶ ಕಲ್ಪಿಸುತ್ತದೆ. ಅಗತ್ಯ ಸೃಷ್ಟಿಯಾದಾಗ ದಲಿತ ನಾಯಕರನ್ನು ಬಿಜೆಪಿ ಮುಖ್ಯಮಂತ್ರಿ ಮಾಡಲಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

‘ದಲಿತ ಮುಖ್ಯಮಂತ್ರಿ’ ಹುದ್ದೆಗೆ ತಮ್ಮ ಹೆಸರು ಕೇಳಿಬರುತ್ತಿದೆ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅವರು ಹೀಗೆ ಪ್ರತಿಕ್ರಿಯಿಸಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವಧಿ ಪೂರ್ಣಗೊಳಿಸಲಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ನಾಯಕತ್ವದಲ್ಲಿಯೇ ಚುನಾವಣೆ ಎದುರಿಸಲಾಗುತ್ತದೆ. ಮುಖ್ಯಮಂತ್ರಿ ಬದಲಾವಣೆ ವಿರೋಧ ಪಕ್ಷದ ಕುತಂತ್ರ. ಇದು ಫಲಿಸುವುದಿಲ್ಲ’ ಎಂದು ಹೇಳಿದರು.

‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತ್ರಿವರ್ಣ ಧ್ವಜದ ವಿಚಾರದಲ್ಲಿಯೂ ರಾಜಕಾರಣ ಮಾಡುತ್ತಿದ್ದಾರೆ. ಬಣ್ಣದ ಹೆಸರನ್ನು ತಪ್ಪಾಗಿ ಹೇಳಿ ಅಜ್ಞಾನ ಪ್ರದರ್ಶಿಸಿದ್ದಾರೆ. ಅವರಿಂದ ಪಾಠ ಕಲಿಯುವ ಅನಿವಾರ್ಯತೆ ಬಿಜೆಪಿಗೆ ಇಲ್ಲ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT