ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷದಿಂದ ಯಾರನ್ನೂ ಗೆಲ್ಲಲು ಆಗದು: ಮಹಮ್ಮದ್‌ ಕುಂಞಿ

ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪ್ರವಚನಕಾರ ಮಹಮ್ಮದ್‌ ಕುಂಞಿ ಅಭಿಮತ
Last Updated 15 ಆಗಸ್ಟ್ 2022, 4:27 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಾತಿ, ಧರ್ಮಕ್ಕಿಂತ ಮನುಷ್ಯರನ್ನು ಪ್ರೀತಿಸುವ ಪಾಠವನ್ನು ಚಿಕ್ಕಂದಿನಿಂದಲೇ ಮಕ್ಕಳಿಗೆ ಹೇಳಿಕೊಡಬೇಕು. ಹಗೆತನ, ದ್ವೇಷದಿಂದ ಯಾರನ್ನೂ ಗೆಲ್ಲಲು ಆಗುವುದಿಲ್ಲ. ಪ್ರೀತಿ, ಸಹಬಾಳ್ವೆ, ಸಹೋದರತ್ವಕ್ಕಿಂತ ದೊಡ್ಡ ಮಾನವೀಯತೆ ಬೇರೊಂದಿಲ್ಲ ಎಂದು ಪ್ರವಚನಕಾರ ಮಹಮ್ಮದ್‌ ಕುಂಞಿ ಅಭಿಪ್ರಾಯಪಟ್ಟರು.

ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಹಾಗೂ ಭಾರತೀಯ ಸುನ್ನಿ ಸೂಫಿ ಸಂತರ ಮಹಾವೇದಿಕೆಯಿಂದ ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮನೆಯಲ್ಲಿ ಉತ್ತಮ ವಾತಾವರಣವಿದ್ದರೆ ಜೀವನದಲ್ಲಿ ಮಕ್ಕಳು ಸಾಧನೆ ಮಾಡಲು ಸಾಧ್ಯವಿದೆ. ಮಕ್ಕಳ ಸಮಸ್ಯೆಗಳನ್ನು ದೊಡ್ಡವರು ಕೇಳಿ ಪರಿಹರಿಸಬೇಕು. ಅವರಿಗೆ ಪ್ರೋತ್ಸಾಹ ನೀಡಿದಾಗ ಮಾತ್ರ ನಿಜವಾದ ಪ್ರತಿಭೆಯನ್ನು ಹೊರತರಬಹುದು’ ಎಂದರು.

‘ಇಸ್ಲಾಂ ಧರ್ಮ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಲಿಂಗ ತಾರತಮ್ಯವಿಲ್ಲದೆ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಸಮುದಾಯ ಅಭಿವೃದ್ದಿ ಹೊಂದಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣದ ಜೊತೆ ಬುದ್ದಿ, ಚಿಂತನೆ, ಆಲೋಚನೆ, ಅರಿವು ತುಂಬಾ ಮುಖ್ಯವಾಗಿರಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಎಂಬುದು ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಪ್ರತಿಭಾವಂತರಿಗೆ ಬಡತನ ಅಡ್ಡಿಯಾಗುತ್ತಿದೆ’ ಎಂದು ಹೇಳಿದರು.

‘ಧರ್ಮದ ಜತೆಗೆ ವೈಚಾರಿಕತೆ ರೂಢಿಸಿಕೊಂಡಾಗ ಮಾತ್ರ ಸಮಾಜದಲ್ಲಿ ರಚನಾತ್ಮಕ ಕಾರ್ಯ ಸಾಧ್ಯವಾಗುತ್ತದೆ. ಜಗತ್ತಿಗೆ ಕುರಾನ್ ಉತ್ತಮ ಸಂದೇಶ ನೀಡಿದೆ. ಪ್ರತಿಯೊಬ್ಬರೂ ಬದುಕು ಹೇಗೆ ಕಟ್ಟಿಕೊಳ್ಳಬೇಕು ಎನ್ನುವುದನ್ನು ಹೇಳುತ್ತದೆ. ಬಸವಣ್ಣ ಹಾಗೂ ಮಹಮ್ಮದ್ ಪೈಗಂಬರ್ ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದುಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರುಸಲಹೆ ನೀಡಿದರು.

ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಎಂ. ಹನೀಫ್, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಇಕ್ಬಾಲ್ ಹುಸೇನ್, ಸೂಫಿ ಸೈಯದ್ ಮಹಮ್ಮದ್ ಮಕ್ಸೂದ್ ಖಲೀಲ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಇ. ಜಗದೀಶ್, ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್, ವಕೀಲ ಬಿ.ಕೆ. ರಹಮತ್‌ವುಲ್ಲಾ, ಟಿಪ್ಪುಖಾಸಿಂ ಆಲಿ ಇದ್ದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT