ಬುಧವಾರ, ಏಪ್ರಿಲ್ 1, 2020
19 °C

ಮುಖ್ಯಶಿಕ್ಷಕ ರಾಜಪ್ಪ ವರ್ಗಾವಣೆಗೆ ವಿದ್ಯಾರ್ಥಿಗಳ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ತಾಲ್ಲೂಕಿನ ರಾಮಗಿರಿಯ ಕರಿಸಿದ್ದೇಶ್ವರ ಗ್ರಾಮಾಂತರ ಪ್ರೌಢಶಾಲೆ ಮುಖ್ಯ ಶಿಕ್ಷಕ ರಾಜಪ್ಪ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.

‘ಮುಖ್ಯ ಶಿಕ್ಷಕ ರಾಜಪ್ಪ ಅವರು ಸರಿಯಾಗಿ ಶಾಲೆಗೆ ಬರುವುದಿಲ್ಲ. ಸರಿಯಾಗಿ ಪಾಠವನ್ನೂ ಮಾಡಿಲ್ಲ. ಹೀಗಿರುವಾಗ ನಾವು ಹೇಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಸಾಧ್ಯ? ಶಾಲೆಯಲ್ಲಿ ಕನ್ನಡ, ಇಂಗ್ಲಿಷ್, ಗಣಿತ ವಿಷಯಗಳಿಗೂ ಶಿಕ್ಷಕರಿಲ್ಲ. ಅತಿಥಿ ಶಿಕ್ಷಕರು ಬಂದರೂ ಅವರಿಗೆ ಸಂಬಳ ಕೊಡುವುದಿಲ್ಲ’ ಎಂದು ವಿದ್ಯಾರ್ಥಿಗಳು ದೂರಿದರು.

‘ಶಾಲೆಯಲ್ಲಿ ಬಿಸಿಯೂಟವನ್ನೂ ಸರಿಯಾಗಿ ನೀಡುವುದಿಲ್ಲ. ಸಾಂಬಾರಿಗೆ ತರಕಾರಿ ಹಾಕುವುದಿಲ್ಲ. ಈ ಬಗ್ಗೆ ಅಡುಗೆ ತಯಾರಕರನ್ನು ಕೇಳಿದರೆ ಮುಖ್ಯಶಿಕ್ಷಕರು ತಂದು ಕೊಟ್ಟಷ್ಟನ್ನು ಮಾಡುತ್ತೇವೆ ಎನ್ನುತ್ತಾರೆ. ವಿದ್ಯಾರ್ಥಿಗಳು ರಜೆ ಕೇಳಿದರೆ ₹ 10 ದಂಡ ವಸೂಲಿ ಮಾಡುತ್ತಾರೆ. ಊರಿಂದ ಬರುವಾಗ ತರಕಾರಿ ತರಲು ಹೇಳುತ್ತಾರೆ. ತರದಿದ್ದರೆ ಪರೀಕ್ಷೆಯಲ್ಲಿ ಫೇಲ್ ಮಾಡುವುದಾಗಿ ಹೆದರಿಸುತ್ತಾರೆ. ವಿದ್ಯಾರ್ಥಿನಿಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ’ ಎಂದು ಆರೋಪಿಸಿದರು.

‘ನಮಗೆ ಟಿ.ಸಿ ಕೊಟ್ಟರೆ ಬೇರೆ ಶಾಲೆಗೆ ಸೇರುತ್ತೇವೆ. ಮುಖ್ಯಶಿಕ್ಷಕ ರಾಜಪ್ಪ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಲೇಬೇಕು’ ಎಂದು ಪಟ್ಟುಹಿಡಿದರು.

ಗ್ರಾಮದ ಮುಖಂಡ ರಾಮಗಿರಿ ರಾಮಣ್ಣ, ‘ಮುಖ್ಯ ಶಿಕ್ಷಕ ರಾಜಪ್ಪ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿಸುತ್ತೇವೆ. ಮುಖ್ಯಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ಆಡಬಾರದು. ಮತ್ತೊಮ್ಮೆ ಇಂತಹ ಆರೋಪ ಬಂದರೆ ಶಾಲೆಗೆ ಬೀಗ ಹಾಕಲಾಗುವುದು’ ಎಂದು ಎಚ್ಚರಿಸಿದರು.

ಎಪಿಎಂಸಿ ಸದಸ್ಯ ಡಿ.ಬಿ.ಕುಮಾರ್, ಷಡಕ್ಷರಿ ದೇವ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಎನ್.ಜಯಣ್ಣ, ರುದ್ರಸ್ವಾಮಿ, ಪೋಷಕರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)