ಚಳ್ಳಕೆರೆ: ತಾಲ್ಲೂಕಿನ ಗಡಿ ಭಾಗದ ಗ್ರಾಮಗಳಲ್ಲಿ ಆರೋಗ್ಯ ಸೇವೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸಂಚಾರ ಆರೋಗ್ಯ ಘಟಕಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ತಾಲ್ಲೂಕಿನಲ್ಲಿ ಸೌಲಭ್ಯ ವಂಚಿತ 32 ಗ್ರಾಮಗಳನ್ನು ಗುರುತಿಸಲಾಗಿದ್ದು, ತಿಂಗಳಲ್ಲಿ ಎರಡು ದಿನ ತಪ್ಪದೇ ಗ್ರಾಮಕ್ಕೆ ಭೇಟಿ ನೀಡಬೇಕು. ಸಂಚಾರ ಘಟಕದಿಂದ ತಿಂಗಳಲ್ಲಿ ಕನಿಷ್ಠ 24 ದಿನ ಜನರಿಗೆ ಆರೋಗ್ಯ ಸೇವೆ ಒದಗಿಸಬೇಕು ಎಂದು ಸೂಚಿಸಿದರು.
ಸಂಚಾರ ಆರೋಗ್ಯ ಘಟಕಕ್ಕೆ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕು ಎಂದು ಆರೋಗ್ಯ ಇಲಾಖೆಯ ತಾಲ್ಲೂಕು ಆಡಳಿತಾಧಿಕಾರಿ ಡಾ. ಕಾಶಿ ಮನವಿ ಮಾಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮದ ಜನರನ್ನು ಹೊರತುಪಡಿಸಿ ಇನ್ನುಳಿದ ಗ್ರಾಮದ ಜನರು ಸರ್ಕಾರ ಕಲ್ಪಿಸಿರುವ ಸಂಚಾರ ಆರೋಗ್ಯ ಸೇವೆಯ ಪ್ರಯೋಜನವನ್ನು ತಪ್ಪದೆ ಪಡೆದುಕೊಳ್ಳಬೇಕು ಎಂದು ಹಿರಿಯ ಆರೋಗ್ಯಾಧಿಕಾರಿ ಎಸ್.ಬಿ.ತಿಪ್ಪೇಸ್ವಾಮಿ ಹೇಳಿದರು.
ಬ್ಲಾಕ್ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಕೆ.ವೀರಭದ್ರಯ್ಯ, ಮುಖಂಡ ನೇರಲಗುಂಟೆ ಎಸ್. ರಾಮಪ್ಪ, ಪರಶುರಾಂಪುರ ಚನ್ನಕೇಶವ, ತಿಪ್ಪೇಸ್ವಾಮಿ, ನಗರಸಭೆ ಪೌರಾಯುಕ್ತೆ ಲೀಲಾವತಿ ಮಾತನಾಡಿದರು.
ನಗರಸಭೆ ಸದಸ್ಯ ರಾಘವೇಂದ್ರ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಮೇಶ್‍ಗೌಡ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರುದ್ರಮುನಿ, ಮಂಜುನಾಥ್, ನಾಗರಾಜ, ಮಹೇಶ್, ಶ್ರೀಧರ ಇದ್ದರು.