ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಕೋಡಿ ಬಿದ್ದ ಮಲ್ಲಾಪುರ ಕೆರೆ

ಸಿಹಿನೀರು ಹೊಂಡ, ಕೆಂಚಮಲ್ಲಪ್ಪನ ಬಾವಿ ಭರ್ತಿ * ಪುಷ್ಕರಣಿಗಳಲ್ಲಿ ನೀರಿನ ಪ್ರಮಾಣ ಏರಿಕೆ
Last Updated 23 ಜುಲೈ 2020, 11:46 IST
ಅಕ್ಷರ ಗಾತ್ರ

ಚಿತ್ರದುರ್ಗ:ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕೆರೆ – ಕಟ್ಟೆಗಳು ಭರ್ತಿಯಾಗಿವೆ. ಹಳ್ಳಗಳಲ್ಲಿ ಅಪಾರ ಪ್ರಮಾಣದ ನೀರು ಹರಿದಿದೆ. ನಗರದ ಹೊರವಲಯದ ಮಲ್ಲಾಪುರ ಕೆರೆ ಮಧ್ಯರಾತ್ರಿ ಕೋಡಿ ಬಿದ್ದಿದ್ದು, ಗೋನೂರು ಕೆರೆಯತ್ತ ನೀರು ಹರಿಯುತ್ತಿದೆ.

ಕೋಡಿಯ ನೀರಿನ ಜುಳು ಜುಳು ಶಬ್ದ, ಕೆರೆಯಿಂದ ಹೊರಗೆ ಧುಮ್ಮಿಕ್ಕುವ ಜಲಧಾರೆಯ ಸದ್ದನ್ನು ಕೇಳುತ್ತಾ ಮಲ್ಲಾಪುರ ಗ್ರಾಮದ ಜನರು ಸಂಭ್ರಮಿಸಿದರು. ರಭಸವಾಗಿ ಹರಿಯುತ್ತಿದ್ದ ನೀರಿನ ದೃಶ್ಯವನ್ನು ಅಚ್ಚರಿಯಿಂದ ನೋಡುತ್ತ ಮೊಬೈಲ್‌ನಲ್ಲಿ ಸೆರೆಹಿಡಿಯಲು ಮುಂದಾದರು. ತಿಮ್ಮಣ್ಣನಾಯಕನ ಕೆರೆ ಹಾಗೂ ವಡ್ಡುಗಳಿಗೂ ನೀರು ಹರಿದಿದೆ.

ಹೌದು, ಪುಷ್ಯಾ ಮಳೆ ಸುರಿದಿದ್ದರಿಂದ ನಗರದ ಅನೇಕ ಹೊಂಡಗಳಿಗೂ ನೀರು ಹರಿದು ಬಂದಿದೆ. ಇದೇ ರೀತಿ ಇನ್ನೆರಡು ಮಳೆ ಸುರಿದರೆ ಹೊಂಡಗಳಿಂದ ಕೋಡಿ ಹರಿಯುವ ಸಾಧ್ಯತೆ ಇದೆ.

ರಾತ್ರಿ 8.45ರ ಸುಮಾರಿಗೆ ಆರಂಭವಾದ ಮಳೆ ಸ್ವಲ್ಪ ಹೊತ್ತಿಗೆ ರಭಸ ಪಡೆದುಕೊಂಡಿತು. ಮಧ್ಯರಾತ್ರಿ 12ರ ವರೆಗೂ ಉತ್ತಮ ಮಳೆಯಾಯಿತು. ಇದರಿಂದಾಗಿ ರಾಜಕಾಲುವೆಗಳು, ಬೋರ್ಗರೆದು ಹರಿದವು. ಚರಂಡಿಗಳು ತುಂಬಿ ರಸ್ತೆಗಳ ಮೇಲೆ ನೀರು ಹರಿಯಿತು. ಮಳೆ ನೀರಿನ ಜತೆಗೆ ಕೊಚ್ಚೆ ನೀರು ಹರಿದು ಹೋಯಿತು.

ತುಂಬಿದ ಸಿಹಿನೀರು ಹೊಂಡ: ಐತಿಹಾಸಿಕ ಸಿಹಿನೀರು ಹೊಂಡಕ್ಕೆ ನೀರು ಹರಿದಿದೆ. ಕೋಡಿ ಬೀಳುವ ಹಂತ ತಲುಪಿದೆ. ಸಂತೆಹೊಂಡಕ್ಕೂ ಭಾರಿ ನೀರು ಬಂದಿದೆ. ಅಲ್ಲದೆ, ಎಲ್ಐಸಿ ಪಕ್ಕದ ಕೆಂಚಮಲ್ಲಪ್ಪನ ಬಾವಿ ಭರ್ತಿಯಾಗಿದೆ. ಮೇಲ್ಬಾಗದಲ್ಲಿ ಕಸ ಕಡ್ಡಿ ತುಂಬಿಕೊಂಡಿದೆ. ಚನ್ನಕೇಶವಸ್ವಾಮಿ ದೇಗುಲದ ಪಕ್ಕದ ಕಲ್ಯಾಣಿಯಲ್ಲಿ ಅರ್ಧ ಭಾಗದಷ್ಟು ಮಳೆ ನೀರು ತುಂಬಿಕೊಂಡಿದೆ.

ತಗ್ಗು ಪ್ರದೇಶಗಳಲ್ಲಿರುವ ಕೆಲ ಮನೆಗಳಿಗೂ ರಾತ್ರಿ ನೀರು ನುಗ್ಗಿದೆ. ಅಡುಗೆ ಮನೆ, ಬಚ್ಚಲು ಮನೆ, ಪಡಾಸಲೆಗಳಲ್ಲೆಲ್ಲಾ ನೀರು ಕಾಣಿಸಿಕೊಂಡು ಜನರ ನಿದ್ದೆಗೆಡಿಸಿದೆ. ಆದರೆ, ಹೆಚ್ಚಿನ ಮನೆಗಳಿಗೆ ತೊಂದರೆ ಆಗಿಲ್ಲ.

ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಲ್ಲಾಪುರ ಕೆರೆಯಿಂದ ನದಿ ನೀರಿನಂತೆ ಧಾರಾಕಾರವಾಗಿ ಹರಿಯುತ್ತಿರುವ ನೀರು ಗೋನೂರು ಕೆರೆ ತಲುಪುತ್ತಿದೆ. ಆ ಕೆರೆಗೂ ಮತ್ತಷ್ಟು ನೀರು ಹರಿಯುವ ಸಾಧ್ಯತೆ ಇದೆ. ನಗರದ ವೆಂಕಟೇಶ್ವರ ದೇಗುಲ ಸಮೀಪದ ಹೊಂಡ ಸೇರಿ ವಿವಿಧ ಪುಷ್ಕರಣಿಗಳಲ್ಲೂ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT