ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆ: ತಾರೀಕೆರೆ ಜಲಾವೃತ

ಹೊಸದುರ್ಗ: ಮನೆಯೊಳಗೆ ನುಗ್ಗಿದ ನೀರು;
Last Updated 25 ಅಕ್ಟೋಬರ್ 2021, 6:40 IST
ಅಕ್ಷರ ಗಾತ್ರ

ತಾರೀಕೆರೆ(ಹೊಸದುರ್ಗ): ತಾಲ್ಲೂಕಿನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾನೆವರೆಗೂ ಸುರಿದ ಭಾರಿ ಮಳೆಗೆ ಮತ್ತೋಡು ಹೋಬಳಿಯ ತಾರೀಕೆರೆ ಗ್ರಾಮ ಜಲಾವೃತವಾಗಿದೆ.

ತಾರೀಕೆರೆಗೆ ಹೊಂದಿಕೊಂಡಂತೆ 500 ಎಕರೆ ವಿಸ್ತೀರ್ಣದಲ್ಲಿ ಕೆರೆ ಇದೆ. 15 ದಿನಗಳ ಹಿಂದೆ ಸುರಿದ ಮಳೆಗೆ ಕೆರೆ ಭರ್ತಿಯಾಗಿ ಕೋಡಿಯಲ್ಲಿ ಸ್ವಲ್ಪಪ್ರಮಾಣದಲ್ಲಿ ನೀರು ಹೋಗುತ್ತಿತ್ತು. ಭಾನುವಾರ ನಸುಕಿನಲ್ಲಿ ಈ ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿದಿದ್ದರಿಂದ ಕೆರೆ ಸಂಪರ್ಕಿಸುವ ಜಿ.ಎನ್‌.ಕೆರೆ, ಸಿದ್ದಾಪುರ, ಬಾಲೇನಹಳ್ಳಿ ಹಳ್ಳಗಳು ತುಂಬಿಹರಿದವು. ಇದರಿಂದಾಗಿ ಕೆರೆಕೋಡಿಯಲ್ಲಿ ನೀರು ಹೆಚ್ಚಾಗಿದ್ದು, ಗ್ರಾಮದೊಳಗಿನ ಮನೆಗಳಿಗೆ ಸಾಕಷ್ಟು ನೀರು ನುಗ್ಗಿದೆ. ಇದರಿಂದ ಜನಜೀವನ ಅಸ್ತವ್ಯವಸ್ತವಾಗಿದೆ.

ಗ್ರಾಮದ ಶಾರದಮ್ಮ ಕೃಷ್ಣಪ್ಪ, ಚಂದ್ರಣ್ಣ ಅವರ ಮನೆ ಸಂಪೂರ್ಣ ಜಲಾವೃತಗೊಂಡಿವೆ. ಸಾಂಗ್ಲಿ ಹನುಮಂತಯ್ಯ ಅವರ ಮನೆಗೋಡೆ ಕುಸಿದಿದೆ. ಕೃಷಿ ಜಮೀನು ಇಲ್ಲದ ಶಾರದಮ್ಮ ಕೃಷ್ಣಪ್ಪ ಅವರ ಮನೆಗೆ ನಸುಕಿನಲ್ಲಿ ಇದ್ದಕ್ಕಿಂದ್ದಂತೆ ಪ್ರವಾಹದ ರೀತಿಯಲ್ಲಿ ನೀರು ನುಗ್ಗಿದ್ದರಿಂದ ಭಯಭೀತರಾಗಿ ನಿದ್ದೆಗಣ್ಣಿನಲ್ಲಿ ಎಲ್ಲರು ಮನೆಯಿಂದ ಹೊರಗೆ ಬಂದರು. ಮನೆಯ ತುಂಬ ನೀರು ನಿಂತಿದ್ದರಿಂದ ಸಾಮಗ್ರಿಗಳು ನೀರಿನಲ್ಲಿ ನೆನೆದವು. ಶಾರದಮ್ಮ ಕಣ್ಣೀರಿಡುತ್ತಲೇ ನೀರನ್ನು ಹೊರ ಹಾಕಿದರು. ಜಮೀನುಗಳು ಜಲಾವೃತ್ತವಾಗಿದ್ದು ಕಟಾವಿಗೆ ಬಂದಿದ್ದ ಬೆಳೆಗಳಿಗೆ ಹಾನಿಯಾಗಿದೆ.

ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಗ್ರಾಮಕ್ಕೆ ಭೇಟಿಕೊಟ್ಟ ತಹಶೀಲ್ದಾರ್‌ ವೈ.ತಿಪ್ಪೇಸ್ವಾಮಿ ಅವರು, ‘ಗ್ರಾಮದ ಮನೆಗಳತ್ತ ಕೆರೆಕೋಡಿ ನೀರು ನುಗ್ಗುವುದನ್ನು ತಪ್ಪಿಸಲು ಗ್ರಾಮ ಪಂಚಾಯಿತಿವರಿಂದ ಅಡ್ಡಲಾಗಿ
ಮಣ್ಣು ಹಾಕಿಸಿದ್ದಾರೆ. ಇದರಿಂದ ಗ್ರಾಮದೊಳಗೆ ನುಗ್ಗುತ್ತಿದ್ದ ನೀರು ಕಡಿಮೆಯಾಗಿದೆ. ಆದರೆ, ತೇವಾಂಶ ಹೆಚ್ಚಾಗಿರುವುದರಿಂದ ಕೆಲವು ಮನೆಗಳಲ್ಲಿ ನಿಲ್ಲಲು ಆಗುತ್ತಿಲ್ಲ. ಹಳೆಯದಾದ ಈ ಕೆರೆಯ ಏರಿ 3 ಕಡೆ ಶಿಥಿಲವಾಗಿದ್ದು ಒಡೆಯುವ ಭೀತಿ ಗ್ರಾಮಸ್ಥರಿಗೆ ಎದುರಾಗಿದೆ.

ಭಾನುವಾರ ಮಧ್ಯಾಹ್ನ ಪಟ್ಟಣ ಸೇರಿ ತಾಲ್ಲೂಕಿನ ಕೆಲವೆಡೆ ಮಳೆ ಸುರಿಯಿತು. ನಿರಂತರ ಮಳೆಯಿಂದಾಗಿ ಕೊಯ್ಲಿಗೆ ಬಂದಿದ್ದ ಈರುಳ್ಳಿ, ಮೆಕ್ಕೆಜೋಳ, ಬಾಳೆ, ಹತ್ತಿ, ಹೂವು, ಟೊಮೆಟೊ ಬೆಳೆಗಳಿಗೆ ಹಾನಿಯಾಗಿದೆ. ಹುಲುಸಾಗಿ ಬೆಳೆದು ತೆನೆ ಹೊಡೆದಿದ್ದ ರಾಗಿ ಕೆಲವೆಡೆ ನೆಲಕ್ಕಚ್ಚಿದ್ದು, ರೈತರಲ್ಲಿ ಆತಂಕ ಉಂಟಾಗಿದೆ.

15 ಮನೆಗಳಿಗೆ ಹಾನಿ: ‘ಹೊಸದುರ್ಗ ಪಟ್ಟಣದ ಜಯಮ್ಮ, ಮಂಜುಳಾ, ಗೌರಮ್ಮ, ನಾಗೇನಹಳ್ಳಿ ಕುಮಾರಪ್ಪ, ಸಾಣೇಹಳ್ಳಿ ಕರಿಯಪ್ಪ, ದೇವಿಗೆರೆ ಭಾಗ್ಯಮ್ಮ, ಲಕ್ಷ್ಮಮ್ಮ, ಲಂಬಾಣಿಹಟ್ಟಿ ಜಯನಾಯ್ಕ, ಕಂಗುವಳ್ಳಿ ಮಂಜುನಾಥ್‌, ಮತ್ತೋಡು ಹೋಬಳಿ ದೊಡ್ಡಬ್ಯಾಲದಕೆರೆ ದುರ್ಗಮ್ಮ, ಕಾರೇಹಳ್ಳಿ ನಿಂಗಮ್ಮ, ಮುತ್ತಾಗೊಂದಿ ಗಂಗಮ್ಮ, ಹಾಗಲಕೆರೆ ಈಶ್ವರಪ್ಪ, ಲಕ್ಷ್ಮೀದೇವರಹಳ್ಳಿ ರಾಮಯ್ಯ ಸೇರಿ 15 ವಾಸದ ಮನೆಗಳಿಗೆ ಭಾಗಶಃ ಹಾನಿಯಾಗಿದ್ದು ₹5.20 ಲಕ್ಷ ನಷ್ವವಾಗಿದೆ’ ಎಂದು ಕಂದಾಯ ಇಲಾಖೆ ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT