ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಏರಿ ಬಿರುಕು: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಶಿಥಿಲಗೊಂಡಿರುವ ನಗರಂಗೆರೆ ಕೆರೆ ಏರಿಯನ್ನು ಮತ್ತೆ ದುರಸ್ತಿಗೊಳಿಸಲು ಆಗ್ರಹ
Last Updated 17 ಸೆಪ್ಟೆಂಬರ್ 2022, 4:31 IST
ಅಕ್ಷರ ಗಾತ್ರ

ಚಳ್ಳಕೆರೆ: ಸತತ ಮಳೆಯಿಂದಾಗಿ ಕೋಡಿ ಬಿದ್ದಿರುವ ತಾಲ್ಲೂಕಿನ ನಗರಂಗೆರೆ ಗ್ರಾಮದ ಕೆರೆಯ ಏರಿ ಬಿರುಕು ಬಿಟ್ಟಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಮೇ-ಜೂನ್ ತಿಂಗಳಲ್ಲಿ ಬಿದ್ದ ಮಳೆಗೆ ಕೆರೆಯಲ್ಲಿ ಮುಕ್ಕಾಲು ಭಾಗ ನೀರು ತುಂಬಿತ್ತು. ಆಗಲೇ ಏರಿ ಬಿರುಕು ಬಿಟ್ಟು ಸಣ್ಣ ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿತ್ತು. ಈ ವಿಷಯವನ್ನು ಗ್ರಾಮದ ಜನರು ಸಣ್ಣ ನೀರಾವರಿ ಇಲಾಖೆ ಗಮನಕ್ಕೆ ತಂದಿದ್ದರು.

ಕೆರೆ ಏರಿಯ ಬುಡದಲ್ಲಿ ಬೆಳೆದಿದ್ದ ಮುಳ್ಳು ಗಿಡಗಳನ್ನು ಕಡಿಸಿ, ಬಿರುಕುಬಿಟ್ಟಿದ್ದ 15-20 ಅಡಿ ಉದ್ದದ ಏರಿಯ ಜಾಗಕ್ಕೆ ಜೆಸಿಬಿ ಹಾಗೂ ಟ್ರ್ಯಾಕ್ಟರ್ ಮೂಲಕ ಮಣ್ಣು ಹಾಕಿಸಲಾಗಿತ್ತು.

ಸೆಪ್ಟೆಂಬರ್‌ ಮೊದಲ ವಾರದಲ್ಲಿ ಬಿದ್ದ ಸಸತ ಮಳೆಗೆ ದುರಸ್ತಿ ಮಾಡಿಸಿದ್ದ ಕೆರೆ ಏರಿ ಮತ್ತೆ ಬಿರುಕು ಬಿಟ್ಟಿದೆ. ಮುಂದಿನ ದಿನಗಳಲ್ಲಿ ಅಲ್ಪ ಮಳೆ ಬಂದರೂ ಬಿರುಕಿನ ಮೂಲಕ ಗ್ರಾಮಕ್ಕೆ ಮಳೆ ನೀರು ಹರಿದು, ಅಪಾಯ ಎದುರಾಗಲಿದೆ ಎಂದು ಗ್ರಾಮದ ಮುಖಂಡ ಓಬಣ್ಣ ತಿಳಿಸಿದರು.

ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವುದರಿಂದ ಬಿರುಗಾಳಿಗೆ ನೀರಿನ ಅಲೆಗಳು ಮೇಲೆಕ್ಕೆ ಚಿಮ್ಮುವುದರಿಂದ ಏರಿಯ ಮೇಲ್ಭಾಗದ ಮಣ್ಣು ನೆನೆದು ಸಡಿಲಗೊಳ್ಳುತ್ತದೆ. ಕೆರೆ ಏರಿ ಒಡೆದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನುಗ್ಗಿ ಅಡಿಕೆ, ತೆಂಗು ಸೇರಿ ನೂರಾರು ಎಕರೆ ಪ್ರದೇಶದಲ್ಲಿನ ಬೆಳೆ ಹಾನಿಗೀಡಾಗುತ್ತದೆ ಎಂದು ಗ್ರಾಮದ ಶ್ರೀನಿವಾಸ್ ಆತಂಕ ವ್ಯಕ್ತಪಡಿಸಿದರು.

ದಟ್ಟವಾಗಿ ಬೆಳೆದಿರುವ ಮುಳ್ಳುಗಿಡಗಳನ್ನು ಕಡಿಸಿ ಹಾಕಬೇಕು. ಶಿಥಿಲಗೊಂಡಿರುವ ಕೆರೆ ಏರಿಯನ್ನು ಮತ್ತೆ ದುರಸ್ತಿ ಮಾಡಿಸುವ ಮೂಲಕ ಕೆರೆಯನ್ನು ಸಂರಕ್ಷಣೆ ಮಾಡಬೇಕು ಎಂದು ಗ್ರಾಮದ ಮಂಜುನಾಥ್, ಪ್ರಕಾಶ್, ರಾಜಣ್ಣ, ರಾಘವೇಂದ್ರ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದಾರೆ.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ನಗರಂಗೆರೆ ಗ್ರಾಮದ ಕೆರೆಯಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಜಿನುಗುತ್ತಿದೆ. ಯಾವುದೇ ಅಪಾಯ ಇಲ್ಲ.

ಬಹುತೇಕ ಕಾಲುವೆಗಳು ಮುಚ್ಚಿಹೋಗಿರುವ ಪರಿಣಾಮ ಕೆರೆಯ ನೀರು ಜಿನುಗುತ್ತಿದೆ. ಪ್ರತಿದಿನವೂ ಕೆರೆ ಉಸ್ತುವಾರಿ ನೋಡಿಕೊಳ್ಳ
ಲಾಗುತ್ತಿದ್ದು, ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಸಣ್ಣ ನೀರಾವರಿ ಇಲಾಖೆ ಎಂಜನಿಯರ್ ರವಿಕುಮಾರ್
ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT