ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು| ನಾಳೆ ಬ್ರಹ್ಮ ರಥೋತ್ಸವ: ಭಕ್ತರಿಂದ ಹರಕೆ ಸಲ್ಲಿಕೆ

ಹಿರಿಯೂರು ನಗರದಲ್ಲಿರುವ ದಕ್ಷಿಣ ಕಾಶಿ ಖ್ಯಾತಿಯ ತೇರುಮಲ್ಲೇಶ್ವರ ಸ್ವಾಮಿ
Last Updated 6 ಫೆಬ್ರುವರಿ 2023, 5:30 IST
ಅಕ್ಷರ ಗಾತ್ರ

ಹಿರಿಯೂರು: ದಕ್ಷಿಣದ ಕಾಶಿ ಎಂದು ಖ್ಯಾತಿ ಪಡೆದಿರುವ ನಗರದ ತೇರುಮಲ್ಲೇಶ್ವರಸ್ವಾಮಿ ಬ್ರಹ್ಮರಥೋತ್ಸವ ಫೆ. 7ರಂದು ಮಧ್ಯಾಹ್ನ 12ಕ್ಕೆ ಜರುಗಲಿದೆ.

ಬೀರೇನಹಳ್ಳಿ ಮಜುರೆ ಕರಿಯಣ್ಣನಹಟ್ಟಿ ಗ್ರಾಮದ ವೀರಕರಿಯಣ್ಣ ದೇವರ ನೇತೃತ್ವದಲ್ಲಿ ಬೆಳಿಗ್ಗೆ 11 ಗಂಟೆಗೆ ಶಿವಧನುಸ್ಸನ್ನು ಸಮೀಪದ ವೇದಾವತಿ ನದಿಗೆ ಒಯ್ದು ಗಂಗಾಸ್ನಾನ ಮಾಡಿಸಿ ಮರಳಿ ದೇಗುಲಕ್ಕೆ ತರಲಾಗುತ್ತದೆ. ನಂತರ ಮುಜರಾಯಿ ಅಧಿಕಾರಿಗಳ ಸಮಕ್ಷಮದಲ್ಲಿ ತೇರುಮಲ್ಲೇಶ್ವರ, ಚಂದ್ರಮೌಳೇಶ್ವರ ಹಾಗೂ ಉಮಾಮಹೇಶ್ವರ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ.

ತದನಂತರ ಜಾನಪದ ವಾದ್ಯಗಳ ನಡುವೆ ದೇವರುಗಳನ್ನು ವಿಶೇಷ ರೀತಿಯಲ್ಲಿ ಅಲಂಕರಿಸಿದ ರಥಕ್ಕೆ ಕರೆತಂದು ಪ್ರತಿಷ್ಠಾಪಿಸಿದ ಮೇಲೆ ರಥೋತ್ಸವಕ್ಕೆ ಚಾಲನೆ ದೊರೆಯುತ್ತದೆ. ದೇವಸ್ಥಾನದ ಮುಂಭಾಗದಿಂದ ಸಿದ್ಧನಾಯಕ ವೃತ್ತದವರೆಗೆ ರಥಬೀದಿಯಲ್ಲಿ ರಥೋತ್ಸವ ಸಾಗಲಿದೆ.

ಇತಿಹಾಸ: ಪಾಳೆಯಗಾರರ ವಂಶಸ್ಥ ರಾಜಾಕೆಂಚಪ್ಪ ನಾಯಕ 1446ರಲ್ಲಿ ನಿರ್ಮಿಸಿರುವ ತೇರುಮಲ್ಲೇಶ್ವರಸ್ವಾಮಿ ದೇಗುಲದ ಮೂಲವಿಗ್ರಹ ಕಾಶಿಯಲ್ಲಿರುವಂತೆ ದಕ್ಷಿಣ ದಿಕ್ಕಿಗೆ ಮುಖ ಮಾಡಿರುವ ಕಾರಣಕ್ಕೆ ಈ ದೇಗುಲವನ್ನು ದಕ್ಷಿಣ ಕಾಶಿ ಎಂದು ಕರೆಯಲಾಗುತ್ತಿದೆ.

ಶ್ರೀ ಶೈಲ ಮಲ್ಲಿಕಾರ್ಜುನನ ಭಕ್ತೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮ ಇಳಿ ವಯಸ್ಸಿನಲ್ಲಿ ಶ್ರೀ ಶೈಲಕ್ಕೆ ನಡೆದುಕೊಂಡು ಹೋಗಿ ದರ್ಶನ ಮಾಡಿ ಬರುವುದು ಕಷ್ಟವಾಗುತ್ತದೆ ಎಂದು ಆಕೆಯ ಕನಸಿನಲ್ಲಿ ಕಾಣಿಸಿಕೊಂಡು ‘ನಾನು ನೀನಿದ್ದಲ್ಲಿಯೇ ನೆಲೆಸುತ್ತೇನೆ’ ಎಂದು ಮಲ್ಲಿಕಾರ್ಜುನ ಮಾತುಕೊಟ್ಟಿದ್ದರಿಂದ ಮಲ್ಲೇಶ್ವರಸ್ವಾಮಿ ದೇಗುಲ ನಿರ್ಮಾಣವಾಯಿತು ಎಂಬುದು ಈ ಭಾಗದ ಜನರ ನಂಬಿಕೆಯಾಗಿದೆ. ದೇಗುಲದಲ್ಲಿರುವ ಲಿಂಗವನ್ನು ಮಲ್ಲಮ್ಮ ಅವರು ಪ್ರತಿಷ್ಠಾಪಿಸಿರುವ ಕುರಿತಂತೆ ಹಲವು ಜಾನಪದ ಕತೆಗಳಿವೆ.

ಮಲ್ಲೇಶ್ವರ ದೇಗುಲ ಉದ್ಭವವಾದ ಕೆಲವು ವರ್ಷಗಳ ಬಳಿಕ ನೆರೆಯ ಹೊಸದುರ್ಗ ತಾಲ್ಲೂಕಿನ ಯಗಟಿ ಎಂಬಲ್ಲಿ ಮಲ್ಲೇಶ್ವರಸ್ವಾಮಿಯ ರಥೋತ್ಸವ ನಡೆಯುತ್ತಿದ್ದಾಗ ಭೀಕರ ಗಾಳಿ-ಮಳೆ ಆರಂಭವಾಗಿ ವೇದಾವತಿ ನದಿಯಲ್ಲಿ ಪ್ರವಾಹ ಬಂದು, ಆ ಪ್ರವಾಹದಲ್ಲಿ ಕೊಚ್ಚಿ ಹೋದ ಮಲ್ಲೇಶ್ವರನ ರಥ ಹಿರಿಯೂರಿನ ಮಲ್ಲೇಶ್ವರ ದೇವಸ್ಥಾನದ ಹತ್ತಿರ ನಿಂತಾಗ
ಭಕ್ತರು ರಥವನ್ನು ಎತ್ತಿ ದೇವಸ್ಥಾನದ ಹತ್ತಿರಕ್ಕೆ ತಂದರು. ಅಂದಿನಿಂದ ಇಲ್ಲಿಯ ಮಲ್ಲೇಶ್ವರನನ್ನು ತೇರುಮಲ್ಲೇಶ್ವರ ಎಂದು ಕರೆಯಲಾಗುತ್ತಿದೆ ಎಂಬ
ಪ್ರತೀತಿ ಇದೆ.

ಅಂದಿನಿಂದ ಪ್ರತಿ ವರ್ಷ ಸ್ವಾಮಿಯ ರಥೋತ್ಸವ, ಸಂಜೆ ಚಂದ್ರಮೌಳೇಶ್ವರ-ಉಮಾಮಹೇಶ್ವರ ಸ್ವಾಮಿಗಳ ರಥೋತ್ಸವ ಜರುಗಲಿದೆ. ನೆರೆಯ ತುಮಕೂರು, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಲ್ಲದೇ ಆಂಧ್ರಪ್ರದೇಶ, ತಮಿಳುನಾಡುಗಳಿಂದಲೂ ಸಾವಿರಾರು ಭಕ್ತರು ರಥೋತ್ಸವಕ್ಕೆ ಬಂದು ಹರಕೆ ತೀರಿಸುವುದು ನಡೆದುಬಂದಿರುವ ವಾಡಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT