ಹಿರಿಯೂರು: ‘ಅಡಿಕೆ ತೋಟ ಇಲ್ಲವೆಂದರೆ ಪ್ರತಿಷ್ಠೆಗೆ ಕುಂದು. ಹೆಣ್ಣು ಕೊಡುವವರು ಮೊದಲು ಕೇಳುವುದೇ ‘ನಿಮ್ಮ ತೋಟ ಎಷ್ಟಿದೆ? ಅಡಿಕೆ ಎಷ್ಟು? ತೆಂಗು ಎಷ್ಟು?’ ಎಂದು. ಊರಲ್ಲಿ ಅವರು ಅಷ್ಟು ಎಕರೆ ಅಡಿಕೆ ತೋಟ ಮಾಡಿದ್ದು, ನಾವು ಅವರ ಅರ್ಧದಷ್ಟಾದರೂ ಮಾಡಬಾರದೆ? ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಕೆರೆಗಳನ್ನು ತುಂಬಿಸುತ್ತಾರೆ. ಕೆರೆಗಳು ತುಂಬಿದರೆ ಅಂತರ್ಜಲ ವೃದ್ಧಿಯಾಗುತ್ತದೆ. ಕೊಳವೆ ಬಾವಿಗಳಲ್ಲಿ ಭರಪೂರ ನೀರು ಬರುತ್ತದೆ. ಇರುವ ಜಮೀನಿಗೆಲ್ಲ ಅಡಿಕೆ ಸಸಿ ಕೂರಿಸೋಣ’....

ಆರೇಳು ವರ್ಷಗಳ ಹಿಂದೆ ತಾಲ್ಲೂಕಿನ ಬಹುತೇಕ ಹಳ್ಳಿಗಳ ಜಗಲಿ ಕಟ್ಟೆಯ ಮೇಲೆ ಕೇಳಿ ಬರುತ್ತಿದ್ದ ಮಾತುಗಳಿವು. ಲಾಭ ಹಾಗೂ ಪ್ರತಿಷ್ಠೆಯ ಕಾರಣಕ್ಕೆ ಅಡಿಕೆ ತೋಟ ಮಾಡಿದ್ದ ರೈತರು ಈಗ ಚಿಂತಾಕ್ರಾಂತರಾಗಿದ್ದಾರೆ.

ವಾಣಿವಿಲಾಸ ಅಣೆಕಟ್ಟೆಯ ಅಚ್ಚುಕಟ್ಟು ಪ್ರದೇಶ 29,985 ಎಕರೆ ಇದ್ದು, ಊಹೆಗೂ ಮೀರಿ ಅಚ್ಚುಕಟ್ಟು ಪ್ರದೇಶವನ್ನು ರೈತರು ವಿಸ್ತೀರ್ಣ ಮಾಡಿಕೊಂಡಿದ್ದಾರೆ. ಆದರೂ ಪ್ರಸ್ತುತ ಅಣೆಕಟ್ಟೆಯಲ್ಲಿ ಸಾಕಷ್ಟು ನೀರು ಇರುವ ಕಾರಣ ಬೆಳೆಗಳಿಗೆ ತೊಂದರೆ ಆಗುತ್ತಿಲ್ಲ.

2019ರಲ್ಲಿ ಮೊದಲ ಬಾರಿಗೆ ಅಣೆಕಟ್ಟೆ ಡೆಡ್ ಸ್ಟೋರೇಜ್ ಹಂತ ತಲುಪಿದ್ದರಿಂದ ಅಚ್ಚುಕಟ್ಟು ಪ್ರದೇಶದಲ್ಲಿನ 17 ಸಾವಿರ ಎಕರೆಗೂ ಹೆಚ್ಚು ಅಡಿಕೆ, ತೆಂಗಿನ ತೋಟಗಳು ಒಣಗಿ ಹೋಗಿದ್ದವು. ವಾಣಿವಿಲಾಸ ಅಣೆಕಟ್ಟೆ 2022 ರಿಂದ 2025ರ ನಡುವೆ 3 ಬಾರಿ ಕೋಡಿ ಹರಿದಿದ್ದರೂ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಅಂತರ್ಜಲ ವೃದ್ಧಿಸಿಲ್ಲ. ಇದಕ್ಕೆ ಕಾರಣ ಅಣೆಕಟ್ಟೆಯ ತಳಭಾಗದಲ್ಲಿ ಹಾಸುಬಂಡೆ ಇರುವುದು. ಹೀಗಾಗಿ ಕೆರೆಗಳಿಗೆ ನೀರು ಹರಿಸಿದರೆ ಮಾತ್ರ ಅಂತರ್ಜಲ ವೃದ್ಧಿಸುತ್ತದೆ ಎಂದು ಭೂಗರ್ಭ ತಜ್ಞರು ಹೇಳುತ್ತಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವಿನಿಂದ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಂಡರೆ ಕೆರೆಗಳು ತುಂಬುತ್ತವೆ. ಅಂತರ್ಜಲ ವೃದ್ಧಿಸುತ್ತದೆ ಎಂಬ ಭರವಸೆಯಲ್ಲಿ ರೈತರು ಇದ್ದ ಹೊಲದ ತುಂಬ ಅಡಿಕೆ ನಾಟಿ ಮಾಡಿದ್ದಾರೆ. ಈಗ ಯೋಜನೆಯೂ ಪೂರ್ಣಗೊಳ್ಳದೆ, ಕೊಳವೆ ಬಾವಿಗಳು ಬತ್ತಿರುವ ಕಾರಣಕ್ಕೆ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

ವಾಣಿವಿಲಾಸ ಅಣೆಕಟ್ಟೆಗೆ ಕೂಗಳತೆ ದೂರದಲ್ಲಿರುವ ಬಳಗಟ್ಟ, ಭರಮಗಿರಿ, ಕುಂಟಪ್ಪನಹಟ್ಟಿ, ಅಗಳೇರಹಟ್ಟಿ, ಗೌನಹಳ್ಳಿ, ಗುಡಿಹಳ್ಳಿ, ಬೀರೇನಹಳ್ಳಿ, ಎವಿ ಕೊಟ್ಟಿಗೆ, ಜವನಗೊಂಡನಹಳ್ಳಿ ಹೋಬಳಿಯ ಆರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 160ಕ್ಕೂ ಹೆಚ್ಚು ಹಳ್ಳಿಗಳು ತೋಟಗಳಿಗೆ ಮಾತ್ರವಲ್ಲ, ಕುಡಿಯುವ ನೀರಿಗೂ ಹಾಹಾಕಾರ ಅನುಭವಿಸುತ್ತಿವೆ.

ಏಳೆಂಟು ವರ್ಷಗಳ ಹಿಂದೆ ಹಿರಿಯೂರಿನಲ್ಲಿ ಎಲ್ಲೆಂದರಲ್ಲಿ ಕೊಳವೆ ಬಾವಿ ಕೊರೆಯುವ ಲಾರಿಗಳು ಕಾಣುತ್ತಿದ್ದವು. ಆಗ ಅಂತರ್ಜಲ ಸಮೃದ್ಧವಾಗಿತ್ತು. ಈಗ ಒಂದು ಸಾವಿರ ಅಡಿ ಕೊರೆಸಿದರೂ ನೀರು ಸಿಗದ ಕಾರಣ ರೈತರು ಬೋರ್ ಕೊರೆಸಲು ಭಯ ಪಡುತ್ತಿದ್ದು, ಟ್ಯಾಂಕರ್ ಮೊರೆ ಹೋಗಿದ್ದಾರೆ.

ಟ್ಯಾಂಕರ್ ಮೂಲಕ ನೀರು ಹಾಯಿಸಲು ನಿತ್ಯ ₹5,000 ದಿಂದ ₹6,000 ಮೊತ್ತ ಹೊಂದಿಸಲು ಆಗದವರು ಅಡಿಕೆ ತೋಟಗಳನ್ನು ಒಣಗಲು ಬಿಟ್ಟಿದ್ದಾರೆ. ಮತ್ತೆ ಕೆಲವರು ಸಾಲ ಮಾಡಿ ತೋಟಗಳನ್ನು ಉಳಿಸಿಕೊಳ್ಳಲು ಹಗಲು–ರಾತ್ರಿ ಶ್ರಮಿಸುತ್ತಿದ್ದಾರೆ.

ಆಸೆಯಿಂದ ತೋಟ ಮಾಡಿರುವ ಬಳಗಟ್ಟದ ಸಿದ್ಧರಾಮಕ್ಕನಂತಹ ರೈತ ಮಹಿಳೆಯರು ಇನ್ನೇನು ಅಡಿಕೆ ಫಸಲು ಕೈಗೆ ಬಂದೇ ಬಿಟ್ಟಿತು ಎಂಬ ಆಸೆ ಕಂಗಳಲ್ಲಿ ಇರುವಾಗಲೇ ಒಣಗುತ್ತಿರುವ ತೋಟ ನೋಡುತ್ತ ಕಣ್ಣಾಲಿಗಳನ್ನು ಒದ್ದೆ ಮಾಡಿಕೊಳ್ಳುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-44-120211642

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.