ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ನಗರಸಭೆ ನೂತನ ಕಟ್ಟಡ ಕಾರ್ಯಾರಂಭ

ವರ್ಷಮೊದಲೇ ಪೂರ್ಣಗೊಂಡಿದ್ದ ಹಿರಿಯೂರು ನಗರಸಭೆ ಕಟ್ಟಡ ಕಾಮಗಾರಿ
Last Updated 22 ಅಕ್ಟೋಬರ್ 2022, 4:45 IST
ಅಕ್ಷರ ಗಾತ್ರ

ಹಿರಿಯೂರು: ಇಲ್ಲಿನ ಪ್ರಧಾನ ರಸ್ತೆಗೆ ಹೊಂದಿಕೊಂಡಂತೆ ನಿರ್ಮಾಣ ವಾಗಿರುವ 3 ಅಂತಸ್ತಿನ ನಗರಸಭೆ ನೂತನ ಕಟ್ಟಡ ಗುರುವಾರ ಎಲ್ಲ ಶಿಷ್ಟಾಚಾರಗಳನ್ನು ಬದಿಗೊತ್ತಿ ಕಾರ್ಯಾ ರಂಭ ಮಾಡಿರುವುದು ಸಾರ್ವಜನಿಕರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಸುಮಾರು ಮೂರೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಟ್ಟಡ ಪೂರ್ಣಗೊಂಡು ವರ್ಷ ಗತಿಸಿದರೂ ಉದ್ಘಾಟನೆ ಆಗದಿರುವುದಕ್ಕೆ ಸ್ಥಳೀಯ ಶಾಸಕರು ಹಾಗೂ ಕಾಂಗ್ರೆಸ್ ನೇತೃತ್ವದ ನಗರಸಭೆ ಆಡಳಿತದ ನಡುವಿನ ಮುಸುಕಿನ ಗುದ್ದಾಟವೇ ಕಾರಣ ಎಂಬ ಟೀಕೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು.

ನೂತನ ಕಟ್ಟಡ ನಿರ್ಮಿಸಲು ಸ್ವಾತಂತ್ರ್ಯ ಪೂರ್ವದಲ್ಲಿ ಕಟ್ಟಿದ್ದ ಹಳೆಯ ಕಟ್ಟಡದ ಹಿಂಭಾಗವನ್ನು ನೆಲಸಮಗೊಳಿಸಲಾಗಿತ್ತು. ನಗರಸಭೆಗೆ ಹೊಂದಿಕೊಂಡಿದ್ದ ಲೋಕೋಪಯೋಗಿ ಇಲಾಖೆ ಕಚೇರಿ ಬೈಪಾಸ್ ರಸ್ತೆ ಹತ್ತಿರದಲ್ಲಿನ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದರಿಂದ, ಅಲ್ಲಿನ ಮೂರ್ನಾಲ್ಕು ಕೊಠಡಿಗಳನ್ನು ನಗರಸಭೆ ಕೊಠಡಿಗಳನ್ನಾಗಿ ಮಾಡಿಕೊಂಡು, ನಗರಸಭೆ ಆವರಣದ ಒಳಗಿನಿಂದ ಕಿರಿದಾದ ಓಣಿಯಂತಹ ರಸ್ತೆಯಲ್ಲಿ ಹೋಗಲು ವ್ಯವಸ್ಥೆ ಮಾಡಲಾಗಿತ್ತು.

ನೀರು, ಆಸ್ತಿ ತೆರಿಗೆ ಒಳಗೊಂಡಂತೆ ಬೇರೆ ಬೇರೆ ಕೆಲಸಗಳಿಗೆಂದು ನಗರಸಭೆಗೆ ಬಂದ ಸಾರ್ವಜನಿಕರು ವಿಭಾಗಕ್ಕಾಗಿ ಹುಡುಕಾಟ ನಡೆಸಬೇಕಿತ್ತು. ನೂತನ ಕಟ್ಟಡವನ್ನು ಗುತ್ತಿಗೆದಾರರು ನಗರಸಭೆಗೆ ಹಸ್ತಾಂತರಿಸಿದ್ದರೂ ಏಕೆ ಉದ್ಘಾಟನೆ ಮಾಡುತ್ತಿಲ್ಲ ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸುವವರೇ ಇಲ್ಲದಂತಾಗಿತ್ತು.

ಸೆ. 30ರಂದು ನಗರಸಭೆ ಅಧ್ಯಕ್ಷೆ ಶಿವರಂಜನಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್ ಕುಮಾರ್ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದು ‘ಆಡಳಿತಾತ್ಮಕ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ನಿಯಮಾನುಸಾರ ತುರ್ತಾಗಿ ಕಟ್ಟಡದ ಪ್ರಾರಂಭೋತ್ಸವ ಮಾಡಲು ಸಂಬಂಧಿಸಿದವರಿಗೆ ಸೂಚಿಸ ಬೇಕು’ ಎಂದು ಮನವಿ ಮಾಡಿದ್ದರು.

ಈ ನಡುವೆ ಗುರುವಾರ ನೂತನ ಕಟ್ಟಡದ ಮುಖ್ಯದ್ವಾರಕ್ಕೆ ಪೂಜೆ ಸಲ್ಲಿಸಿ ಕೊಠಡಿಯೊಂದರಲ್ಲಿ ನಗರಸಭೆ ಸಿಬ್ಬಂದಿ ಕೆಲಸ ಆರಂಭಿಸಿದ್ದಾರೆ.

ಒಂದು ಕೊಠಡಿಯಷ್ಟೇ ಆರಂಭ
‘ನೂತನ ಕಟ್ಟಡದ ಉದ್ಘಾಟನೆ ಆಗಿಲ್ಲ. ಆಸ್ತಿ ತೆರಿಗೆ ಪುಸ್ತಕದಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಪಾವತಿಸಿರುವುದನ್ನು ದಾಖಲು ಮಾಡಲು ಪ್ರತ್ಯೇಕ ಜಾಗ ಇಲ್ಲದ ಕಾರಣಕ್ಕೆ ಒಂದು ಕೊಠಡಿಯನ್ನು ಮಾತ್ರ ತಾತ್ಕಾಲಿಕವಾಗಿ ಬಳಸಲು ಆರಂಭಿಸಿದ್ದೇವೆ. ಈ ಬಗ್ಗೆ ಶಾಸಕರು ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ’ ಎಂದು ನಗರಸಭೆ ಪೌರಾಯುಕ್ತ ಡಿ.ಉಮೇಶ್ ಸ್ಪಷ್ಟಪಡಿಸಿದ್ದಾರೆ.

‘2002–03ರಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆ ನಿಯಮ ಜಾರಿಗೆ ಬಂದಿದ್ದು, ನಗರದಲ್ಲಿರುವ 15,560 ಮನೆ ಹಾಗೂ ಸುಮಾರು 15,000 ನಿವೇಶನಗಳ ಕಂದಾಯವನ್ನು ರಿಜಿಸ್ಟರ್‌ನಲ್ಲಿ ನೋಂದಾಯಿಸಬೇಕಿದೆ. ನಮ್ಮಲ್ಲಿ ಪ್ರಸ್ತುತ ಶೇ 50ರಷ್ಟು ಪ್ರಗತಿಯಾಗಿದೆ. ನ. 31ರ ಒಳಗೆ ಶೇ 100 ಪ್ರಗತಿ ಸಾಧಿಸಬೇಕು. ಹೀಗಾಗಿ ಆಸ್ತಿ ತೆರಿಗೆ ದಾಖಲು ಮಾಡಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಕೊಂಡಿದ್ದೇವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT