ಹಿರಿಯೂರು: ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ನಕಲಿ ದಾಖಲೆ ಸೃಷ್ಟಿಸಿ, ನಿಯಮಗಳನ್ನು ಉಲ್ಲಂಘಿಸುತ್ತಿರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ರೈತಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
‘ಕಂದಾಯ ಇಲಾಖೆಯಲ್ಲಿ ಹಣ ಕೊಟ್ಟರೆ ಮಾತ್ರ ಕೆಲಸ ಎಂಬಂತಾಗಿದೆ. ಖಾತೆ ಬದಲಾವಣೆ, ಪೌತಿ ಖಾತೆ ಮತ್ತಿತರೆ ದಾಖಲೆಗಳಿಗೆ ಗ್ರಾಮ ಲೆಕ್ಕಾಧಿಕಾರಿಗಳಿಗೆ, ಕಂದಾಯ ನಿರೀಕ್ಷಕರಿಗೆ ಹಣ ಕೊಡದಿದ್ದರೆ ಕೆಲಸಗಳೇ ಆಗುವುದಿಲ್ಲ. ದೊಡ್ಡದೊಡ್ಡ ಕೈಗಾರಿಕೆಗಳಿಗೆ, ವಾಣಿಜ್ಯ ಕಂಪನಿಗಳಿಗೆ ಸರ್ಕಾರದ ನಿಯಮಗಳನ್ನು ಮೀರಿ ಅನುಕೂಲ ಮಾಡಿಕೊಡುತ್ತಿದ್ದಾರೆ. ಮಧ್ಯವರ್ತಿಗಳ ಸಹಾಯ ಇಲ್ಲದೆ ಸಾರ್ವಜನಿಕರು ಯಾವುದೇ ಕೆಲಸ ಮಾಡಿಕೊಳ್ಳಲು ಆಗುತ್ತಿಲ್ಲ. ಹಣ ಸಂಗ್ರಹಣೆಗೆ ಮಧ್ಯವರ್ತಿಗಳನ್ನು ಬಳಸಿಕೊಳ್ಳುತ್ತಿರುವುದು ಗುಟ್ಟಿನ ಸಂಗತಿಯಾಗಿ ಉಳಿದಿಲ್ಲ. ಆದರೂ ಮೇಲಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ’ ಎಂದು ರೈತಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಆರೋಪಿಸಿದರು.
‘ಉಪನೋಂದಣಿ ಕಚೇರಿಯಲ್ಲಿ ಪತ್ರವೊಂದರ ನೋಂದಣಿಗೆ ಇಷ್ಟಿಷ್ಟು ಹಣ ಎಂದು ನಿಗದಿ ಮಾಡಲಾಗಿದೆ. ಪತ್ರವೊಂದಕ್ಕೆ ಹತ್ತು ಸಾವಿರ ರೂಪಾಯಿವರೆಗೆ ಲಂಚ ಇದೆ. ಕಚೇರಿಯಲ್ಲಿ ಜೆರಾಕ್ಸ್ ಯಂತ್ರ ಇಲ್ಲದ ಕಾರಣಕ್ಕೆ ನಕಲು ಪ್ರತಿ ಬೇಕಾದವರು ಹೊರಭಾಗದ ಅಂಗಡಿಗಳಲ್ಲಿ ಪ್ರತಿ ಮಾಡಿಸಿ ತರಬೇಕಿದೆ. ಈ ಸಂದರ್ಭದಲ್ಲಿ ಪತ್ರದಲ್ಲಿ ತಿದ್ದುಪಡಿ ಮಾಡಲಾಗುತ್ತಿದೆ. ಹಳೆಯ ಪತ್ರಗಳ ನಕಲು ಪ್ರತಿ ಪಡೆಯಲು ಒಂದರಿಂದ ಒಂದೂವರೆ ಸಾವಿರ ರೂಪಾಯಿ ಲಂಚ ಕೊಡಬೇಕಿದೆ’ ಎಂದು ಅವರು ಆರೋಪಿಸಿದರು.
‘ಸರ್ವೇ ಇಲಾಖೆಯಲ್ಲಿ ಜಮೀನಿನ ಅಳತೆ ಮಾಡಿಸಿ, ಹದ್ದುಬಸ್ತು ಮಾಡಿಸುವ ಶುಲ್ಕವನ್ನು ಸರ್ಕಾರ ಮಿತಿಮೀರಿ ಹೆಚ್ಚಿಸಿದೆ. ಇದು ಸಾಲದು ಎಂಬಂತೆ ಸರ್ವೆಗೆ ಬರುವ ನೌಕರರಿಗೆ 3 ರಿಂದ 4 ಸಾವಿರ ಲಂಚ ಕೊಡಲೇಬೇಕು.ಸರ್ವೇ ಅಧಿಕಾರಿ ಒಬ್ಬರೇ ಇರುವ ಕಾರಣ ತಿಂಗಳುಗಟ್ಟಲೆ ರೈತರು ಕಾಯಬೇಕಿದೆ. ಸರ್ವೇ ಇಲಾಖೆಗೆ ಇನ್ನಷ್ಟು ಸಿಬ್ಬಂದಿ ನೇಮಿಸಬೇಕು. ಈ ಬೇಡಿಕೆಗಳ ಬಗ್ಗೆ ಕ್ರಮಕ್ಕೆ ಒತ್ತಾಯಿಸಿ ಎರಡು ಬಾರಿ ಪ್ರತಿಭಟನೆ ನಡೆಸಿದ್ದೇವೆ. 10–15 ದಿನದಲ್ಲಿ ಕಂದಾಯ ಇಲಾಖೆಯಲ್ಲಿ ಸುಧಾರಣೆ ಕಾಣದೇ ಹೋದರೆ ಇಲಾಖೆಯ ಕಾರ್ಯದರ್ಶಿ ಅಥವಾ ಕಂದಾಯ ಸಚಿವರು ಸ್ಥಳಕ್ಕೆ ಬರುವವರೆಗೆ ಧರಣಿ ನಡೆಸಬೇಕಾಗುತ್ತದೆ’ ಎಂದು ತಿಪ್ಪೇಸ್ವಾಮಿ ಎಚ್ಚರಿಸಿದರು.
ಆಲೂರು ಸಿದ್ದರಾಮಣ್ಣ, ರಂಗಸ್ವಾಮಿ, ತಿಮ್ಮಾರೆಡ್ಡಿ, ಅರಳೀಕೆರೆ ತಿಪ್ಪೇಸ್ವಾಮಿ, ಹೊಸಕೆರೆ ಜಯಣ್ಣ, ಜಗನ್ನಾಥ್, ಶಿವಣ್ಣ, ನಾರಾಯಣಪ್ಪ, ರಾಮಕೃಷ್ಣ, ಬಾಲಕೃಷ್ಣ, ತಿಪ್ಪೇಸ್ವಾಮಿ, ಮಂಜುನಾಥ್, ಕೆಂಚಪ್ಪ, ರಾಜಣ್ಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.