ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ತೇರುಮಲ್ಲೇಶ್ವರ ಕರ್ಪೂರದ ಆರತಿ ಇಂದು

ತೇರುಮಲ್ಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಸಡಗರ; ವಿಶಿಷ್ಟವಾಗಿ ಆಚರಿಸುವ ಕಾರ್ಯಕ್ರಮ
Last Updated 19 ಫೆಬ್ರುವರಿ 2022, 4:07 IST
ಅಕ್ಷರ ಗಾತ್ರ

ಹಿರಿಯೂರು:ನಗರದ ತೇರುಮಲ್ಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಸಂಭ್ರಮ ಮನೆ ಮಾಡಿದ್ದು, ಜಾತ್ರೆ ಪ್ರಯುಕ್ತ ಫೆ.19ರಂದು ರಾತ್ರಿ 9ಕ್ಕೆ ದಕ್ಷಿಣ ಭಾರತದಲ್ಲೇ ವಿಶಿಷ್ಟವಾಗಿ ಆಚರಿಸುವ ಕಾರ್ಯಕ್ರಮ ಎಂದು ಪ್ರಸಿದ್ಧಿ ಪಡೆದಿರುವ ಕರ್ಪೂರದ ಆರತಿ ಪೂಜೆ ನಡೆಯಲಿದೆ.

ತೇರುಮಲ್ಲೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಮುಗಿದ ಎರಡು ದಿನಗಳ ನಂತರ ನಡೆಯುವ ಕರ್ಪೂರದಾರತಿ ಕಾರ್ಯಕ್ರಮ ನಡೆಯುತ್ತದೆ. ಇದು ಮಹಿಳೆಯರಿಗೆ ವಿಶೇಷ ಹಬ್ಬ. ದೇಗುಲದ ಒಳ ಆವರಣದಲ್ಲಿ ಗರ್ಭಗುಡಿಯ ಮುಂಭಾಗ 48 ಅಡಿಯ ಕಲ್ಲುಕಂಬವಿದ್ದು, ಕಂಬದ ಮೇಲೆ 8 ಅಡಿ ಎತ್ತರದ ಬಸವಮಂಟಪ ಇದೆ. ಮಂಟಪದ ಒಳಗೆ ಕೆತ್ತನೆಯಿಂದ ಕೂಡಿದ ಚಿಕ್ಕ ನಂದಿ ವಿಗ್ರಹವಿದೆ. ಇದಕ್ಕೆ 6 ಅಡಿ ಉದ್ದವಿರುವ 8 ಕಬ್ಬಿಣದ ಸೌಟು (ಉದ್ದನೆಯ ಹಿಡಿ ಇರುವ ದೀಪ)ಗಳನ್ನು ಜೋಡಿಸಲಾಗಿದ್ದು, ಕರ್ಪೂರದ ಆರತಿಯ ದಿನ ಒಟ್ಟು 56 ಅಡಿ ಎತ್ತರದ ನುಣುಪಾದ ಕೆತ್ತನೆಯಿಂದ ಕೂಡಿರುವ ದೀಪಸ್ತಂಭದ ಮೇಲೆ ಏರಿ ಬತ್ತಿ, ಎಣ್ಣೆ ಹಾಕಿ, ಕರ್ಪೂರ ಬಳಸಿ ದೀಪ ಹಚ್ಚುವ ದೃಶ್ಯ ಭಕ್ತರನ್ನು ಮೈಜುಮ್ಮೆನ್ನಿಸುವಂತೆ ಮಾಡುತ್ತದೆ.

ಆಂಧ್ರದಿಂದ ತರಿಸಿದ ದೀಪಸ್ತಂಭ:ದೇವಾಲಯ ಎದುರು ಈಗ ಇರುವ 56 ಅಡಿ ಎತ್ತರವಿರುವ ಸ್ತಂಭದ ಕಲ್ಲು 100 ಅಡಿಗೂ ಹೆಚ್ಚು ಉದ್ದವಿತ್ತು. ಆಂಧ್ರಪ್ರದೇಶದಿಂದ ತರುವಾಗ ತಾಲ್ಲೂಕಿನ ಅಂಬಲಗೆರೆ ಗ್ರಾಮದ ಬಳಿ ಬಿದ್ದು ಎರಡು ಭಾಗವಾಯಿತು. ಅದರಲ್ಲಿ ಉದ್ದವಿದ್ದ ದೀಪಸ್ತಂಭದ ಭಾಗವನ್ನು ಹಿರಿಯೂರಿಗೆ ತಂದು ತೇರುಮಲ್ಲೇಶ್ವರನ ಎದುರು ನಿಲ್ಲಿಸಲಾಯಿತು. ಮತ್ತೊಂದು ಭಾಗವನ್ನು ಅಂಬಲಗೆರೆ ಗ್ರಾಮದ ರಂಗನಾಥಸ್ವಾಮಿ ದೇಗುಲದ ಮುಂದೆ ಸ್ಥಾಪಿಸಲಾಗಿದೆ ಎಂದು ಹಿರಿಯರು ಹೇಳುತ್ತಾರೆ.

ಶೌರ್ಯದ ಪ್ರತೀಕ:ಹಿಂದೆ ನಾಡನ್ನು ಆಳುತ್ತಿದ್ದ ದೊರೆಗಳು ಕರ್ಪೂರದ ಆರತಿ ಕಾರ್ಯಕ್ರಮವನ್ನು ಪುರುಷರ ಶೌರ್ಯದ ಪ್ರತೀಕವನ್ನಾಗಿ ಪರಿಗಣಿಸಿದ್ದರು. ಧೀರ ಪುರುಷರು 56 ಅಡಿ ಎತ್ತರದ ದೀಪಸ್ತಂಭವನ್ನು ಚಕಚಕನೆ ಏರಿ ಕರ್ಪೂರ ಹಚ್ಚಿ ನೆರೆದಿದ್ದ ಹೆಂಗಳೆಯರ ಮನಗೆಲ್ಲುವುದು ವಾಡಿಕೆ ಆಗಿತ್ತು. ಕಾರ್ತಿಕ ಮಾಸ ಹಾಗೂ ಜಾತ್ರೆಯ ಸಂದರ್ಭದಲ್ಲಿ ಈ ಸೌಟುಗಳಲ್ಲಿ ದೀಪ ಹಚ್ಚುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ. ದೀಪದ ಬೆಳಕು ರಾತ್ರಿ ವೇಳೆ 3 ಕಿ.ಮೀ. ದೂರದವರೆಗೂ ಕಾಣುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಸಾವಿರಾರು ಮಹಿಳೆಯರು ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ವಿಶೇಷ. ಕರ್ಪೂರದ ಆರತಿಯ ಮೊದಲ ಸೇವೆಯನ್ನು ಯಾರು ಮಾಡಬೇಕೆನ್ನುವುದನ್ನು ಹರಾಜಿನ ಮೂಲಕ ನಿರ್ಧರಿಸಲಾಗುತ್ತದೆ. ಚಿತ್ರದುರ್ಗ, ಚಳ್ಳಕೆರೆ, ದಾವಣಗೆರೆ ಮೊದಲಾದ ನಗರಗಳಿಂದ ಭಕ್ತರು ಕರ್ಪೂರದ ಆರತಿ ನೋಡಲು ಬರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT