ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಚಿಂತಕ ಬಂಜಗೆರೆ ಜಯಪ್ರಕಾಶ್

Last Updated 26 ಫೆಬ್ರುವರಿ 2023, 5:01 IST
ಅಕ್ಷರ ಗಾತ್ರ

ಹಿರಿಯೂರು: ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ವಾಣಿವಿಲಾಸ ಜಲಾಶಯ ನಿರ್ಮಿಸುವ ಮೂಲಕ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದು ಸಾಂಸ್ಕೃತಿಕ ಚಿಂತಕ ಬಂಜಗೆರೆ ಜಯಪ್ರಕಾಶ್ ತಿಳಿಸಿದರು.

ನಗರದ ನೆಹರೂ ಮೈದಾನದಲ್ಲಿ ಶನಿವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಥಮ ಬಾರಿಗೆ ಸರ್ವ ಸಮುದಾಯದವರಿಗೆ ಮೀಸಲಾತಿ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಒತ್ತು ಕೊಟ್ಟವರು ಮೈಸೂರಿನ ಒಡೆಯರು. ಹಿರಿಯೂರು ತಾಲ್ಲೂಕಿನ ಅವಧೂತರು, ಸಂತರು ಜಾತಿ–ಮತಗಳ ಭೇದವಿಲ್ಲದೆ ಏಕತೆಯನ್ನು ಸಾರುವ ಮೂಲಕ ಗ್ರಾಮೀಣ ಭಾಗದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಜಾಗೃತಿಗೆ ಕಾರಣರಾಗಿದ್ದರು ಎಂದು ಅವರು ತಿಳಿಸಿದರು.

ಸಾಹಿತಿಯಾದವನಿಗೆ ಮುಖ್ಯವಾಗಿ ಬೇಕಿರುವುದು ಸಂತ ಪ್ರಜ್ಞೆಯೇ ಹೊರತು ಇತರರನ್ನು ವಿಂಗಡಿಸುವ ಮನೋಭಾವವಲ್ಲ. ಸಾಹಿತಿಗೆ ಮೌಲ್ಯ ಪ್ರಜ್ಞೆಯ ಜೊತೆಗೆ ಸಂವೇದನೆ ಇರಬೇಕು. ಪ್ರಭುತ್ವ ಮತ್ತು ಸಾಹಿತ್ಯದ ನಡುವಿನ ಸಂಘರ್ಷ ಎಲ್ಲಾ ಕಾಲದಲ್ಲೂ ಇದೆ. ನಮಗೆ ಬೇಕಿರುವುದು ಸಾಮಾಜಿಕ ರಾಜಕೀಯ ಪ್ರಜಾಪ್ರಭುತ್ವ. ಆದರೆ, ಚಲನಶೀಲತೆ ಕಂಡರೆ ಪ್ರಭುತ್ವ ಕೋಪಗೊಳ್ಳುತ್ತದೆ. ವಿವೇಚನಾ ಪ್ರಜ್ಞೆಯಿಂದ ಮುನ್ನಡೆಯುವವರನ್ನು ದಮನ ಮಾಡಲು ಪ್ರಭುತ್ವ ಪ್ರಯತ್ನಿಸುತ್ತದೆ ಎಂದು ಜಯಪ್ರಕಾಶ್ ಟೀಕಿಸಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಪ್ರವರ್ಗ–1ರ ಜಾತಿಗಳ ಒಕ್ಕೂಟದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್, ‘ವಾಣಿವಿಲಾಸ ಜಲಾಶಯ ನಿರ್ಮಾಣಕ್ಕೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ರಾಜಮಾತೆ ಕೆಂಪನಂಜಮ್ಮಣ್ಣಿ ಅವರ ಪುತ್ಥಳಿಗಳನ್ನು ಸ್ವಂತ ಖರ್ಚಿನಲ್ಲಿ ಪ್ರತಿಷ್ಠಾಪಿಸುವ ಮೂಲಕ ಗೌರವ ಸಮರ್ಪಿಸುತ್ತೇನೆ’ ಎಂದು ಭರವಸೆ ನೀಡಿದರು.

ಸಮ್ಮೇಳನಾಧ್ಯಕ್ಷ ಕರಿಯಪ್ಪ ಮಾಳಿಗೆ, ‘ಕನ್ನಡಪರ ಸಂಘಟನೆಗಳು ಕನ್ನಡ ಭಾಷೆ, ಸಂಸ್ಕೃತಿ ಕುರಿತ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜಿಸುವ ಮೂಲಕ ನಾಡಿನಲ್ಲಿ ಕನ್ನಡದ ವಾತಾವರಣ ನಿರ್ಮಾಣ ಮಾಡಬೇಕು. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಆತ್ಮ ವಿಶ್ವಾಸ ತುಂಬುವ ಕೆಲಸ ನಡೆಯಬೇಕು’ ಎಂದು ಒತ್ತಾಯಿಸಿದರು. ತುಮಕೂರಿನ ಚಂದ್ರಯ್ಯ ಬೆಳವಾಡಿ, ಜಿ. ಶರಣಪ್ಪ ಮಾತನಾಡಿದರು. ಕಸಾಪ ಜಿಲ್ಲಾ ಅಧ್ಯಕ್ಷ ಶಿವಸ್ವಾಮಿ, ತಾಲ್ಲೂಕು ಅಧ್ಯಕ್ಷ ವಿ.ಎಂ. ನಾಗೇಶ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಮೂಡಲಗಿರಿಯಪ್ಪ, ಕೆ.ಟಿ. ತಿಪ್ಪೇಸ್ವಾಮಿ, ಹರಿಪ್ರಸಾದ್ ರೈ, ಚಂದ್ರಯ್ಯ, ಜಿ. ಧನಂಜಯಕುಮಾರ್, ಪದ್ಮನಾಭ್, ಎಂ.ವಿ. ಹರ್ಷ, ಮಹದೇವ್, ಮಹೇಶ್, ವಿಜಯ್, ರಂಗನಾಥ್, ಜಗದೀಶ್ ಯಾದವ್, ನಂದವರಿಕ್, ಯೋಗಾನಂದ್, ಅಂಬಿಕಾ, ಭಾಗ್ಯಲಕ್ಷ್ಮಿ, ಷೇಕ್ ಮೊಹಮ್ಮದ್ ಲಿ, ಶಿವಮೂರ್ತಿ, ನಿಜಲಿಂಗಪ್ಪ, ಅಸ್ಗರ್ ಅಹಮ್ಮದ್ ಅಬ್ಬಾಸ್, ಕೃಷ್ಣಮೂರ್ತಿ, ಸಕ್ಕರ ರಂಗಸ್ವಾಮಿ, ಮಹಸ್ವಾಮಿ ಅವರೂ ಉಪಸ್ಥಿತರಿದ್ದರು.

ಸಮಾರಂಭಕ್ಕೂ ಮೊದಲು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರಾಷ್ಟ್ರ ಧ್ವಜಾರೋಹಣ, ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ ಪರಿಷತ್ತಿನ ಧ್ವಜಾರೋಹಣ, ತಾಲ್ಲೂಕು ಅಧ್ಯಕ್ಷ ವಿ.ಎಂ. ನಾಗೇಶ್ ನಾಡ ಧ್ವಜಾರೋಹಣ ನೆರವೇರಿಸಿದರು. ಸಮ್ಮೇಳನಾಧ್ಯಕ್ಷ ಕರಿಯಪ್ಪ ಮಾಳಿಗೆ ಅವರನ್ನು ತೇರುಮಲ್ಲೇಶ್ವರ ದೇವಸ್ಥಾನದ ಆವರಣದಿಂದ ಮೆರವಣಿಗೆಯಲ್ಲಿ ಕರೆತರಲಾಯಿತು.

‘ಬೇರೆಯವರ ವಿಚಾರ–ಧರ್ಮಗಳನ್ನು ಒಪ್ಪಿಕೊಳ್ಳುವುದೇ ನಿಜವಾದ ಸಂಪತ್ತು’

ಹಿರಿಯೂರು: ಕವಿರಾಜಮಾರ್ಗ ಕೃತಿಯಲ್ಲಿ ಧರ್ಮ, ಕುಲ, ಮಾನವ ಸಂಬಂಧ ಕುರಿತಂತೆ ಬೇರೆಯವರ ವಿಚಾರ–ಧರ್ಮಗಳನ್ನು ಒಪ್ಪಿಕೊಳ್ಳುವುದೇ ನಿಜವಾದ ಸಂಪತ್ತು ಎಂಬ ಮಾತು ಇದ್ದು, ಇಂತಹ ವೈಚಾರಿಕತೆಯನ್ನು ಪ್ರಸ್ತುತ ಸಂದರ್ಭದಲ್ಲಿ ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಉಪನ್ಯಾಸಕ ನಾಗಭೂಷಣ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಸಮಕಾಲೀನ ಕನ್ನಡ ಸಾಹಿತ್ಯ ಸಂವೇದನೆ’ ಕುರಿತು ಅವರು ಉಪನ್ಯಾಸ ನೀಡಿದರು.

ಹತ್ತನೇ ಶತಮಾನದಲ್ಲಿ ಜೈನ ಧರ್ಮ ಹೆಚ್ಚು ಪ್ರಚಲಿತದಲ್ಲಿತ್ತು. ಅವರೆಲ್ಲ ಮಾನವ ಧರ್ಮವನ್ನು ಪ್ರಚುರಪಡಿಸಿದರು. ಕುವೆಂಪು ಅವರ ಸಾಹಿತ್ಯದಲ್ಲಿ ಸೃಜನಶೀಲತೆ, ವೈಚಾರಿಕತೆಯನ್ನು ಕಾಣಬಹುದು. ಅವರ ಮನುಜ ಮತ, ವಿಶ್ವಪಥ ಸಮಕಾಲೀನ ಸಾಹಿತ್ಯದ ಸಂವೇದನೆಯಾಗಿದೆ ಎಂದು ಹೇಳಿದರು.

ತುಮಕೂರಿನ ಡಾ.ಕೆ. ನಟರಾಜ್ ‘ಪ್ರಚಲಿತ ಶೈಕ್ಷಣಿಕ ವಿದ್ಯಮಾನಗಳು‘ ವಿಷಯ ಕುರಿತು ಉಪನ್ಯಾಸ ನೀಡಿದರು. ಪ್ರಾಂಶುಪಾಲ ಮಹೇಶ್ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT