ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಞಾನದಿಂದ ಇತಿಹಾಸದ ದಾಖಲೆ ನಾಶ: ಪ್ರೊ.ಎಂ.ವಿ.ಶ್ರೀನಿವಾಸ್

Last Updated 17 ಏಪ್ರಿಲ್ 2022, 12:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಜ್ಞಾನ, ಆಸಕ್ತಿ ಕೊರತೆಯ ಕಾರಣಕ್ಕೆ ಇತಿಹಾಸದ ದಾಖಲೆಗಳು ನಾಶವಾಗುತ್ತಿವೆ. ಪ್ರತಿಮೆ, ವಿಗ್ರಹ ವಿನಾಶದತ್ತ ಸಾಗುತ್ತಿವೆ. ಕರ್ನಾಟಕ ಹೀಗೆ ವಿರೂಪಗೊಳ್ಳುವುದನ್ನು ತಪ್ಪಿಸುವ ಅಗತ್ಯವಿದೆ ಎಂದು ಇತಿಹಾಸ ಸಂಶೋಧಕ ಪ್ರೊ.ಎಂ.ವಿ.ಶ್ರೀನಿವಾಸ್ ಸಲಹೆ ನೀಡಿದರು.

ಚಿತ್ರದುರ್ಗ ಇತಿಹಾಸ ಕೂಟ, ಇತಿಹಾಸ – ಸಂಸ್ಕೃತಿ – ಸಂಶೋಧನೆಗಳ ವಿಚಾರ ವೇದಿಕೆ ಹಾಗೂ ರೇಣುಕಾ ಪ್ರಕಾಶನದ ವತಿಯಿಂದ ಇಲ್ಲಿನ ಐಎಂಎ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ‘ಕರ್ನಾಟಕ ಇತಿಹಾಸ: ತಿ.ತಾ.ಶರ್ಮ ಅವರ ವಿಚಾರಗಳು’ ಎಂಬ ಕುರಿತು ಅವರು ಉಪನ್ಯಾಸ ನೀಡಿದರು.

‘ತಿರುಮಲೆ ತಾತಾಚಾರ್ಯ ಶರ್ಮರವರು ಕನ್ನಡ ನಾಡು, ನುಡಿಗೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಕರ್ನಾಟಕದ ಇತಿಹಾಸ, ಸಾಹಿತ್ಯ ಲೋಕದಲ್ಲಿ ಅವರು ಸಲ್ಲಿಸಿದ ಸೇವೆ ಇಂದಿನ ಅನೇಕರಿಗೆ ತಿಳಿದಿಲ್ಲ. ವೈಚಾರಿಕ, ವೈಜ್ಞಾನಿಕ, ವಿಶ್ಲೇಷಣಾತ್ಮಕ ಅಧ್ಯಯನ ಮಾಡಿದ್ದರು. ಇತಿಹಾಸ ಕೂಡ ವೈಚಾರಿಕವಾಗಿದ್ದು, ಅದರ ಆಧಾರದ ಮೇರೆಗೆ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. 60 ವರ್ಷಗಳ ಹಿಂದೆಯೇ ಸಾರ್ವಕಾಲಿಕ ಸತ್ಯಗಳನ್ನು ಅಭಿವ್ಯಕ್ತಿಗೊಳಿಸಿದ್ದರು’ ಎಂದು ಹೇಳಿದರು.

‘ಸ್ವಾತಂತ್ರ್ಯ ಹೋರಾಟಗಾರ, ಇತಿಹಾಸಕಾರ, ಶಾಸನತಜ್ಞ, ಪತ್ರಿಕೋದ್ಯಮಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ತಿ.ತಾ.ಶರ್ಮ ಸಾಂಸ್ಕೃತಿಕ ಲೋಕದಲ್ಲಿ ಉನ್ನತ ಸ್ಥಾನದಲ್ಲಿದ್ದರು. ಶತಮಾನದ ಹಿಂದೆ ಅವರು ಬರವಣಿಗೆ ಮಾಡಿದ್ದರು. ಅವರ ಬರಹಗಳು ಇತಿಹಾಸದತ್ತ ಸೆಳೆಯುತ್ತವೆ. ರಾಜಕೀಯದಲ್ಲಿ ನಡೆಯುವ ಸಂಗತಿಗಳನ್ನು ಆಧರಿಸಿ ಇತಿಹಾಸ ನಿರ್ಮಿಸಬೇಕು ಎಂಬುದು ಅವರ ಹಂಬಲವಾಗಿತ್ತು’ ಎಂದರು.

‘ಇತಿಹಾಸದ ಬಗೆಗೆ ಅಪಾರ ಕಳಕಳಿ, ಕಾಳಜಿ ಹೊಂದಿದ್ದರು. ಸುಂದರ, ಸಮಗ್ರ, ಸದೃಢವಾದ ಕರ್ನಾಟಕದ ಚಿತ್ರಣ ತೀರಾ ಆಸಕ್ತಿಯಿಂದ ಜನರ ಮುಂದಿಡುವ ಪ್ರಯತ್ನ ಮಾಡಿದರು. ಭಾಷೆ, ಸಾಹಿತ್ಯಕ್ಕೆ ಹೆಚ್ಚಿನ ಗಮನ ಕೊಡಬೇಕೆಂದು ಹೇಳಿದ್ದರು. ವಿಮರ್ಶಗೆ ಒತ್ತು ಕೊಟ್ಟಿದ್ದ ತಿ.ತಾ.ಶರ್ಮ, ಚರಿತ್ರೆಯಲ್ಲಿರುವ ನೂನ್ಯತೆಗಳನ್ನು ಸರಿಪಡಿಸಬೇಕೆಂದು ಪ್ರತಿಪಾದಿಸಿದ್ದರು’ ಎಂದು ಸ್ಮರಿಸಿದರು.

‘ಇತಿಹಾಸದ ಧರ್ಮ, ಸತ್ಯ ಪ್ರತಿಪಾದನೆ ಹಾಗೂ ಸತ್ಯದ ಅನ್ವೇಷಣೆ ಆಗಬೇಕು ಎಂಬುದು ತಿ.ತಾ.ಶರ್ಮ ಅವರ ಬಯಕೆಯಾಗಿತ್ತು. ಭಾಷೆಯ ಪ್ರಯೋಗದಿಂದ ಒಂದು ಜನಾಂಗದ ಮೂಲವನ್ನು ಗುರುತಿಸಬಹುದು ಎಂದಿದ್ದರು. ಆರ್ಯರು ಹೊರಗಿನಿಂದ ಬಂದವರಲ್ಲ, ಸ್ಥಳೀಯರು ಎಂದೇ ಪ್ರತಿಪಾದಿಸಿದ್ದರು. ಇತಿಹಾಸದ ಬಗೆಗೆ ಅವರಲ್ಲಿದ್ದ ಕಾಳಜಿ ಅಪರಿಮಿತ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎರಡು ವರ್ಷದ ಬಳಿಕ ಉಪನ್ಯಾಸ

ಚಿತ್ರದುರ್ಗ ಇತಿಹಾಸ ಕೂಟ ನಡೆಸುವ ಮಾಸಿಕ ಉಪನ್ಯಾಸ ಕೊರೊನಾ ಸೋಂಕಿನ ಕಾರಣಕ್ಕೆ ಎರಡು ವರ್ಷಗಳಿಂದ ಸ್ಥಗಿತಗೊಂಡಿತ್ತು. ಈಗ ಯಾವುದೇ ಆತಂಕವಿಲ್ಲದೇ ಪುನರಾರಂಭಿಸಲಾಗಿದೆ ಎಂದು ಕೂಟದ ನಿರ್ದೇಶಕ ಡಾ.ಲಕ್ಷ್ಮಣ್‌ ತೆಲಗಾವಿ ತಿಳಿಸಿದರು.

‘ಎರಡು ವರ್ಷದ ಬಳಿಕ ಉಪನ್ಯಾಸ ಮಾಲಿಕೆ ಆರಂಭವಾಗಿರುವುದು ಸಂತಸವುಂಟು ಮಾಡಿದೆ. ಈವರೆಗೆ ನೀಡಿದ ಉಪನ್ಯಾಸಗಳನ್ನು ಪುಸ್ತಕ ರೂಪದಲ್ಲಿ ಹೊರತರುವ ಪ್ರಯತ್ನ ನಡೆಯುತ್ತಿದೆ. ಸಂಶೋಧನಾ ಕ್ಷೇತ್ರ ಬರಡಾಗುತ್ತಿದ್ದು, ಬರೆದಿದ್ದನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ನಿರೀಕ್ಷಿತ ಪ್ರೋತ್ಸಾಹ ಸಿಗುತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT