ಸೋಮವಾರ, ಅಕ್ಟೋಬರ್ 21, 2019
22 °C
ಜಿಲ್ಲಾಡಳಿತದ ವಿನೂತನ ಪ್ರಯೋಗ ಯಶಸ್ವಿ

ಚಿತ್ರದುರ್ಗ ನಾಗರಿಕ ಸಮಸ್ಯೆಗೆ ‘ಹಿತೈಷಿ’ ಪರಿಹಾರ

Published:
Updated:
Prajavani

ಚಿತ್ರದುರ್ಗ: ನಾಗರಿಕ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಜಿಲ್ಲಾಡಳಿತ ‘ಹಿತೈಷಿ’ ಎಂಬ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಿದೆ. ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ದೂರು ನೀಡಲು ಆಯೋಗ ರೂಪಿಸಿದ್ದ ‘ಸಿ–ವಿಜಿಲ್‌’ ಆ್ಯಪ್‌ ಮಾದರಿಯಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ.

ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ದೂರು ನೀಡಲು ಆ್ಯಪ್‌ ನೆರವಾಗಲಿದೆ. 24 ಗಂಟೆಗಳಲ್ಲಿ ಸಮಸ್ಯೆ ಇತ್ಯರ್ಥವಾಗಲಿದೆ. ಇಲ್ಲದೇ ಇದ್ದರೆ ಹಿರಿಯ ಅಧಿಕಾರಿಗಳಿಗೆ ದೂರು ರವಾನೆಯಾಗಲಿದ್ದು, ಅದು ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸುವ ಅವಕಾಶವಿದೆ.

ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ನಗರಸಭೆ, ಹೊಸದುರ್ಗ ಪುರಸಭೆ, ಹೊಳಲ್ಕೆರೆ, ಮೊಳಕಾಲ್ಮುರು ಹಾಗೂ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಆ್ಯಪ್‌ ಕಾರ್ಯನಿರ್ವಹಿಸಲಿದೆ. ಚಿತ್ರದುರ್ಗ ಜಿಲ್ಲಾಡಳಿತದ ಅಂತರ್ಜಾಲ ತಾಣದಲ್ಲಿ (https://chitradurga.nic.in) ಆ್ಯಪ್‌ ಲಭ್ಯವಿದ್ದು, ‘ಗೂಗಲ್‌ ಪ್ಲೇಸ್ಟೋರ್‌’ನಿಂದ ಡೌನ್‌ಲೋಡ್‌ ಮಾಡಿಕೊಳ್ಳುವ ಅವಕಾಶ ಶೀಘ್ರ ಲಭಿಸಲಿದೆ.

ಕಸ, ಬೀದಿ ದೀಪ, ರಸ್ತೆ ಗುಂಡಿ, ಚರಂಡಿ, ನೀರಿನ ಸೋರಿಕೆ, ನೀರು ಪೂರೈಕೆ ವ್ಯತ್ಯಯ, ರಸ್ತೆ ಮತ್ತು ಚರಂಡಿ ಸ್ವಚ್ಛತೆ, ಮಳೆನೀರು ಚರಂಡಿ ಸಮಸ್ಯೆ, ಬೀದಿನಾಯಿ, ಹಂದಿ ಹಾಗೂ ಮಂಗನ ಹಾವಳಿ, ರಸ್ತೆ ದುರಸ್ತಿ, ಬೀಡಾಡಿ ದನ, ಪ್ರಾಣಿಗಳ ಮೃತದೇಹ ವಿಲೇವಾರಿ, ಚರಂಡಿಯ ಹೂಳು ತೆಗೆಯುವುದು ಸೇರಿ 14 ಬಗೆಯ ನಾಗರಿಕ ಸಮಸ್ಯೆಗಳ ಬಗ್ಗೆ ದೂರು ನೀಡಬಹುದು. ನಿತ್ಯ ಹಲವು ಬಗೆಯ ದೂರುಗಳನ್ನು ನಗರ ಸ್ಥಳೀಯ ಸಂಸ್ಥೆಯ ಸಿಬ್ಬಂದಿ ಪರಿಹರಿಸುತ್ತಿದ್ದಾರೆ.

ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡ ಬಳಿಕ ‘ಹಿತೈಷಿ’ ಬಗ್ಗೆ ವಿವರವಾದ ಮಾಹಿತಿ ಸಿಗುತ್ತದೆ. ಕೆಲ ಸೂಚನೆಗಳನ್ನು ಅನುಸರಿಸಿ ಸಮಸ್ಯೆಯ ಬಗ್ಗೆ ಚಿತ್ರ, ವಿಡಿಯೊ ಸಮೇತ ದೂರು ಸಲ್ಲಿಸಬಹುದು. ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ ಸೇರಿ ಹಲವು ಮಾಹಿತಿಯನ್ನು ಒದಗಿಸಬೇಕು. ಜಿಪಿಎಸ್‌ (ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಂ) ಆಧಾರದ ಮೇರೆಗೆ ಇದು ಕಾರ್ಯನಿರ್ವಹಿಸುವುದರಿಂದ ತಪ್ಪು ಮಾಹಿತಿ ನೀಡಲು ಸಾಧ್ಯವಿಲ್ಲ. ಆ್ಯಪ್‌ ಮೂಲಕವೇ ಚಿತ್ರ, ವಿಡಿಯೊ ಸೆರೆಹಿಡಿಯುವುದರಿಂದ ದಾರಿ ತಪ್ಪಿಸಲು ಆಗದು.

‘ವಿದ್ಯುತ್‌ಗೆ ಸಂಬಂಧಿಸಿದ ದೂರು ಎಲೆಕ್ಟ್ರಿಕಲ್‌ ಎಂಜಿನಿಯರ್‌, ಸ್ವಚ್ಛತೆಗೆ ಸಂಬಂಧಿಸಿದ ದೂರು ಪರಿಸರ ಎಂಜಿನಿಯರ್‌ಗೆ ರವಾನೆ ಆಗುವ ಸ್ವಯಂಚಾಲಿತ ವ್ಯವಸ್ಥೆ ಇದೆ. ಸ್ಥಳಕ್ಕೆ ತೆರಳುವ ಸಿಬ್ಬಂದಿ ಸಮಸ್ಯೆ ಪರಿಹರಿಸಿ ಚಿತ್ರ ಸಹಿತ ಆ್ಯಪ್‌ ಮೂಲಕ ಮಾಹಿತಿ ಒದಗಿಸಬೇಕು. ಅದು ಸಂಬಂಧಿಸಿದ ದೂರುದಾರರನ್ನು ತಲುಪುತ್ತದೆ. ನಿಗದಿತ ಕಾಲಮಿತಿಯಲ್ಲಿ ಸಮಸ್ಯೆ ಇತ್ಯರ್ಥವಾಗದೇ ಇದ್ದರೆ ಪೌರಾಯುಕ್ತರು ಹಾಗೂ ಜಿಲ್ಲಾಧಿಕಾರಿಗೆ ರವಾನೆಯಾಗುತ್ತದೆ’ ಎನ್ನುತ್ತಾರೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್‌.

**

‘ಹಿತೈಷಿ’ಗೆ ‘ಸಿ–ವಿಜಿಲ್‌’ ಆ್ಯಪ್‌ ಸ್ಫೂರ್ತಿ. 14 ಸೇವೆಗಳಿಗೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಹೊಣೆ ನಿಗದಿ ಮಾಡಲಾಗಿದೆ. ಶೀಘ್ರವೇ ‘ಗೂಗಲ್‌ ಪ್ಲೇಸ್ಟೋರ್‌’ನಲ್ಲಿ ಆ್ಯಪ್‌ ಸಿಗಲಿದೆ.
–ಆರ್‌.ವಿನೋತ್‌ ಪ್ರಿಯಾ, ಜಿಲ್ಲಾಧಿಕಾರಿ, ಚಿತ್ರದುರ್ಗ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)