ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ: ಮಳೆಯಿಂದಾಗಿ ಕೋಡಿ ಬಿದ್ದ ಕೆರೆಗಳು

Last Updated 20 ನವೆಂಬರ್ 2021, 6:01 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನಾದ್ಯಂತ ಗುರುವಾರ ರಾತ್ರಿಯಿಂದ ಶುಕ್ರವಾರದವರೆಗೆ ಸುರಿದ ನಿರಂತರ ಮಳೆಯಿಂದ ಬುಹುತೇಕ ಎಲ್ಲಾ ಕೆರೆಗಳು ಭರ್ತಿಯಾಗಿದ್ದು, ಕೋಡಿ ಬಿದ್ದಿವೆ.

ತಾಲ್ಲೂಕಿನ ತಾಳ್ಯದ ಕೆರೆ ಕೋಡಿ ಬಿದ್ದಿದ್ದು, ಅಪಾರ ಪ್ರಮಾಣದ ನೀರು ಶಿವಗಂಗಾ ಕೆರೆಗೆ ಹರಿದಿದೆ. ಕೆರೆ ನೀರು ರಸ್ತೆಗೆ ನುಗ್ಗಿದ ಪರಿಣಾಮ ಶಿವಗಂಗಾ-ತಾಳ್ಯ ಮಧ್ಯದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ತಾಳ್ಯ ಹಾಗೂ ಟಿ. ಎಮ್ಮಿಗನೂರು ಕೆರೆಗಳ ಕೋಡಿ ನೀರು ರಾಷ್ಟ್ರೀಯ ಹೆದ್ದಾರಿ-13ರ ಮೇಲೆ ಹರಿದು ಸಂಚಾರಕ್ಕೆ ತೊಂದರೆಯಾಗಿತ್ತು.

ಪಟ್ಟಣದಲ್ಲಿಯೂ ಮಳೆ ಎಡಬಿಡದೆ ಸುರಿದಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಳ್ಳದ ನೀರು ಮುರುಗೇಶ್ ಪೆಟ್ರೋಲ್ ಬಂಕ್ ಹಾಗೂ ಹೌಸಿಂಗ್ ಬೋರ್ಡ್ ಕಾಲೊನಿಗಳಿಗೆ ನುಗ್ಗಿದೆ. ಶಿವಮೊಗ್ಗ ರಸ್ತೆಯ ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗದಿಂದ ಬಸವಾ ಲೇಔಟ್, ಹೀರೋ ಶೋರೂಂ ಪ್ರದೇಶದಲ್ಲಿ ಮುಖ್ಯರಸ್ತೆಗೆ ನೀರು ನುಗ್ಗಿದ್ದು, ವಾಹನ ಸವಾರರು ಪರದಾಡಿದರು. ಕುಡಿನೀರಕಟ್ಟೆ ಕೆರೆ ತುಂಬಿದ್ದು, ಕೋಡಿ ನೀರು ಹೊನ್ನೆಕೆರೆ ಮೂಲಕ ಹಿರೇಕೆರೆಗೆ ಹರಿಯುತ್ತಿದೆ.

ಪಟ್ಟಣದ ಅಯ್ಯನಕಟ್ಟೆ ಪ್ರದೇಶದಲ್ಲಿರುವ ಮನೆಗಳು ಶಿಥಿಲಗೊಂಡಿದ್ದು, ಇಲ್ಲಿನ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುಖ್ಯಾಧಿಕಾರಿ ಎ.ವಾಸಿಂ ಸೂಚನೆ ನೀಡಿದರು. ಈ ಪ್ರದೇಶದಲ್ಲಿ 50 ಜನರು ವಾಸಿಸುತ್ತಿದ್ದು, ಅಗತ್ಯ ಬಿದ್ದರೆ ಗಂಜಿಕೇಂದ್ರ ತೆರೆಯುವುದಾಗಿ ತಿಳಿಸಿದರು.

ಗಣಪತಿ ದೇವಾಲಯದ ಸುತ್ತಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜೆಸಿಬಿ ಮೂಲಕ ಹಿರೇಕೆರೆಗೆ ನೀರು ಹರಿಸಲಾಯಿತು. ಸತತ ಮಳೆ ಸುರಿಯುತ್ತಿರುವ ಕಾರಣ ಶಿಥಿಲಗೊಂಡ ಮನೆಗಳಲ್ಲಿ ವಾಸಿಸಬಾರದು ಎಂದು ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಲಾಯಿತು.

ತಾಲ್ಲೂಕಿನಲ್ಲಿರುವ ಬಹುತೇಕ ಎಲ್ಲಾ ಚೆಕ್ ಡ್ಯಾಂ, ಬ್ಯಾರೇಜ್, ಕೆರೆಗಳಲ್ಲಿ ನೀರು ತುಂಬಿದ್ದು, ಕೋಡಿ ಬಿದ್ದಿವೆ ಎಂದು ಸಣ್ಣ ನೀರಾವರಿ ಇಲಾಖೆಯ ಎಇಇ ವೆಂಕಟರಾಮನ್ ತಿಳಿಸಿದ್ದಾರೆ. ಮಳೆಯಿಂದ ಗಂಗಸಮುದ್ರ, ಮಲ್ಕಾಪುರ, ಕೆಂಚಾಪುರ, ಎಚ್.ಡಿ.ಪುರ, ಕೊಳಾಳು ಮತ್ತಿತರ ಗ್ರಾಮಗಳಲ್ಲಿ ಏಳು ಮನೆಗಳಿಗೆ ಹಾನಿಯಾಗಿದೆ ಎಂದು ತಹಶೀಲ್ದಾರ್ ರಮೇಶಾಚಾರಿ ತಿಳಿಸಿದ್ದಾರೆ.

‘ನಿರಂತರ ಮಳೆಯಿಂದ ಕಟಾವಿಗೆ ಬಂದಿದ್ದ ರಾಗಿ, ಮೆಕ್ಕೆಜೋಳದ ಬೆಳೆಗೆ ಹಾನಿಯಾಗಿದೆ. ತಾಲ್ಲೂಕಿನಲ್ಲಿ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಶೇ 50ರಷ್ಟು ಬೆಳೆ ಹಾನಿ ಆಗಿದೆ. ರಾಗಿ ಬೆಳೆಯೂ ಕಟಾವಿಗೆ ಬಂದಿದ್ದು, ಮಳೆಯಿಂದ ಹಾನಿಯಾಗಿದೆ. ಮಳೆ ಹೀಗೆಯೇ ಮುಂದುವರಿದರೆ ತೆನೆಗಳಲ್ಲೇ ಬೀಜಗಳು ಮೊಳಕೆಯೊಡೆಯುತ್ತವೆ. ಅಕ್ಕಡಿ ಬೆಳೆಗಳಾದ ಅವರೆ ಹಾಗೂ ತೊಗರಿ ಬೆಳೆಗಳು ಅಧಿಕ ತೇವಾಂಶದಿಂದ ಹಾಳಾಗುತ್ತಿವೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಪ್ರಕಾಶ್ತಿಳಿಸಿದ್ದಾರೆ.

ಸಹಾಯವಾಣಿ ಆರಂಭ: ಹೊಳಲ್ಕೆರೆ ಪಟ್ಟಣ ವ್ಯಾಪ್ತಿಯಲ್ಲಿ ಮಳೆಯಿಂದ ಯಾವುದೇ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ಪುರಸಭಾ ಕಾರ್ಯಾಲಯದಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ. ಸಾರ್ವಜನಿಕರು 08191-275102/200027 ಹಾಗೂ 7848808888 ಸಂಖ್ಯೆಗಳಿಗೆ ಕರೆ ಮಾಡಿ ಸಹಾಯ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT