ನವದುರ್ಗೆಯರ ಕೋಟೆನಾಡಲ್ಲಿ ಸಂಭ್ರಮದ ‘ಹೋಳಿಗೆ ಅಮ್ಮ’

7
* ಆಷಾಢ ಮಾಸದ ಕೊನೆ ಮಂಗಳವಾರ ವಿಶೇಷ ಪೂಜೆ * ಶಕ್ತಿದೇವತೆಗಳನ್ನು ಶ್ರದ್ಧಾಭಕ್ತಿಯಿಂದ ಆರಾಧಿಸುವ ಭಕ್ತರು

ನವದುರ್ಗೆಯರ ಕೋಟೆನಾಡಲ್ಲಿ ಸಂಭ್ರಮದ ‘ಹೋಳಿಗೆ ಅಮ್ಮ’

Published:
Updated:
Deccan Herald

ಚಿತ್ರದುರ್ಗ: ಕೋಟೆನಾಡಿನ ಪ್ರಸಿದ್ಧ ವೃತ್ತವೊಂದು ಪ್ರತಿ ವರ್ಷ ಆಷಾಢ ಮಾಸದ ಕೊನೆ ಮಂಗಳವಾರ ಪೂರ್ತಿಯಾಗಿ ಗಮಗಮಿಸುವ ಹೋಳಿಗೆಯಿಂದ ಆವೃತ್ತವಾಗುತ್ತದೆ. ಅದಕ್ಕೆ ಕಾರಣ ಶತಮಾನಗಳಿಂದ ಆಚರಣೆಯಲ್ಲಿರುವ ‘ಹೋಳಿಗೆ ಅಮ್ಮ’ನ ಹಬ್ಬ.

ಆ ವೃತ್ತವೂ ಕರುವಿನಕಟ್ಟೆ ಎಂಬ ಖ್ಯಾತಿ ಪಡೆದಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದನ, ಕರುಗಳಿದಿದ್ದರಿಂದ ಈ ಹೆಸರು ಬಂದಿದೆ ಎಂಬ ಪ್ರತೀತಿಯೂ ಇದೆ. ಅದಕ್ಕಾಗಿಯೇ ವೃತ್ತದೊಳಗೆ ಹಸುವಿನ ಹಾಲನ್ನು ಕುಡಿಯುತ್ತಿರುವ ಕರುವಿನ ಪುತ್ಥಳಿಯನ್ನು ನಿರ್ಮಿಸಲಾಗಿದ್ದು, ತಾಯಿ ಮತ್ತು ಮಕ್ಕಳ ನಡುವಿನ ಮಮಕಾರಕ್ಕೆ ವೃತ್ತ ಸಾಕ್ಷಿಯಾಗಿದೆ. ಅದೇ ರೀತಿ ಹೋಳಿಗೆ ಅಮ್ಮನ ಹಬ್ಬಕ್ಕೂ ಅವಿನಾಭಾವ ಸಂಬಂಧವಿದೆ ಎನ್ನಲಾಗಿದೆ.

ನವದುರ್ಗೆಯರು ಚಿತ್ರದುರ್ಗದ ರಕ್ಷಕ ದೇವತೆಗಳೆಂದು ಪ್ರತೀತಿ ಇರುವ ಹಿನ್ನೆಲೆಯಲ್ಲಿ ಇಲ್ಲಿರುವ ಶಕ್ತಿದೇವತೆಗಳನ್ನು ಶ್ರದ್ಧಾಭಕ್ತಿಯಿಂದ ಆರಾಧಿಸುವ ಪರಂಪರೆ ಪಾಳೆಗಾರರ ಆಳ್ವಿಕೆಗಿಂತಲೂ ಮುಂಚಿನಿಂದಲೇ ನಡೆದುಕೊಂಡು ಬಂದಿದೆ.

ಹೋಳಿಗೆ ಅಮ್ಮ ಹಬ್ಬದ ವಿಶೇಷ: ಈ ಹಬ್ಬದಂದು ಮಹಿಳೆಯರು ಆಹಾರ ಸೇವಿಸದೆ ಮನೆಯಲ್ಲಿ ಮಡಿಯಿಂದ ಸಿದ್ಧಪಡಿಸಿದ ಹೋಳಿಗೆಗಳನ್ನು ಮೊರದಲ್ಲಿ ತಂದು ವೃತ್ತದ ಮುಂಭಾಗದಲ್ಲಿ ಸಾಲಾಗಿ ಇಡುತ್ತಾರೆ. ಹೋಳಿಗೆ ಜತೆಗೆ ಅರಿಶಿಣ, ಕುಂಕುಮ, ಬಳೆ, ಬೇವಿನ ಸೊಪ್ಪು, ತೆಂಗಿನಕಾಯಿ ಹೋಳು ಇರುತ್ತದೆ. ಪೂಜಿಸಿದ ಮೊರಗಳನ್ನು ಶಕ್ತಿದೇವತೆಯ ಜತೆಗೆ ಕರೆದೊಯ್ದು ಊರಿನ ಗಡಿ ದಾಟಿಸುತ್ತಾರೆ. ಮುಂದಿನ ಗ್ರಾಮದವರು ಇದೇ ರೀತಿ ಆಚರಣೆ ನಡೆಸುತ್ತಾರೆ.

ಸರ್ವರ ಹಬ್ಬ: ಕರುವಿನಕಟ್ಟೆ ವೃತ್ತ, ದೊಡ್ಡಗರಡಿ, ಸಣ್ಣಗರಡಿ, ಜೋಗಿಮಟ್ಟಿ ರಸ್ತೆ, ಸುಣ್ಣದ ಗುಮ್ಮಿ, ಜಿಲ್ಲಾ ಕ್ರೀಡಾಂಗಣ ರಸ್ತೆಯ ಭಕ್ತರು ಐತಿಹಾಸಿಕ ನಗರದೇವತೆ ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇವತೆಗೆ ಹೋಳಿಗೆ ಹಬ್ಬದ ಹೆಸರಿನಲ್ಲಿ ಎಡೆ ಇಟ್ಟು ಸಂಭ್ರಮದಿಂದ ಆಚರಿಸುತ್ತಾರೆ. ಅದೇ ರೀತಿ ನಗರದ ವಿವಿಧ ಬಡಾವಣೆಗಳಲ್ಲಿನ ದೇವಿಯರ ಹೆಸರಿನಲ್ಲಿ ಆಯಾ ಭಾಗದವರು ಈ ಹಬ್ಬವನ್ನು ಆಚರಿಸುತ್ತಿದ್ದಾರೆ.

ಹೋಳಿಗೆ ಅಮ್ಮನ ಆಚರಣೆ ಯಾವುದೇ ಜಾತಿ, ಜನಾಂಗಕ್ಕೆ ಸೀಮಿತವಲ್ಲ. ಹೋಳಿಗೆ ಎಲ್ಲರ ಆಹಾರ ಆಗಿರುವುದರಿಂದ ಹಿಂದೂ ಧರ್ಮೀಯರೇ ಹೆಚ್ಚಾಗಿ ಆಚರಿಸುತ್ತ ಬಂದಿದ್ದಾರೆ. ದೇವಿಯರೂ ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುತ್ತಾರೆ ಎಂಬ ನಂಬಿಕೆ ಕೂಡ ಈ ಆಚರಣೆಯಲ್ಲಿದೆ.

ಚಿತ್ರದುರ್ಗ ಜಿಲ್ಲೆ ಬುಡಕಟ್ಟು ಸಂಸ್ಕೃತಿಯ ತವರು. ಪ್ರತಿಯೊಂದು ಹಬ್ಬ, ಆಚರಣೆಗೆ ಇಲ್ಲಿ ಅದರದೇ ಆದ ನಂಬಿಕೆ ಇದೆ. ಸಂಪ್ರದಾಯ ಹಾಗೂ ಸಂಸ್ಕೃತಿಯ ನೆಲೆಯಿದೆ. ಅದರ ಒಂದು ಭಾಗವೇ ಹೋಳಿಗೆ ಅಮ್ಮ. ಅಮ್ಮನ ಹೆಸರಲ್ಲಿ ಹೋಳಿಗೆ ಮೀಸಲಿಡಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !