ಹಸೆಮಣೆ ಏರಬೇಕಿದ್ದ ಹೋಮ್‌ಗಾರ್ಡ್‌ ಜೈಲಿಗೆ

7
ಕಲ್ಲಿನಿಂದ ಹೊಡೆದು ಸ್ನೇಹಿತನ ಕೊಲೆ, ಸ್ಕಾರ್ಪಿಯೊ ಸಮೇತ ಭಸ್ಮ

ಹಸೆಮಣೆ ಏರಬೇಕಿದ್ದ ಹೋಮ್‌ಗಾರ್ಡ್‌ ಜೈಲಿಗೆ

Published:
Updated:
Deccan Herald

ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕಿನ ಅರೇಹಳ್ಳಿಯ ನೆಹರೂ ಕಾಲೊನಿಯ ಸಮೀಪ ಸುಟ್ಟ ಸ್ಥಿತಿಯಲ್ಲಿ ಸ್ಕಾರ್ಪಿಯೊದಲ್ಲಿ ಪತ್ತೆಯಾದ ‘ಶೂರ’ ವಾರಪತ್ರಿಕೆಯ ಸಂಪಾದಕ ಮಂಜುನಾಥ್‌ (45) ಅವರನ್ನು ಕೊಲೆ ಮಾಡಿರುವುದು ತನಿಖೆಯಿಂದ ದೃಢಪಟ್ಟಿದ್ದು, ಆರೋಪಿ ಆರ್‌. ವಿಜಯಕುಮಾರ್‌ (30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕೆಳಗೋಟೆಯ ಬೇಡರ ಕಣ್ಣಪ್ಪ ದೇಗುಲ ರಸ್ತೆಯ ನಿವಾಸಿಯಾಗಿರುವ ಆರೋಪಿ ವೃತ್ತಿಯಲ್ಲಿ ಹೋಮ್‌ಗಾರ್ಡ್‌. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

‘ಮಂಜುನಾಥ್‌ ಹಾಗೂ ವಿಜಯಕುಮಾರ್‌ ಸ್ನೇಹಿತರು. ಇಬ್ಬರ ನಡುವೆ ಹಣಕಾಸಿನ ವ್ಯವಹಾರವಿತ್ತು. ಈ ವಿಚಾರವಾಗಿ ಉಂಟಾದ ಭಿನ್ನಾಭಿಪ್ರಾಯ ಕೊಲೆಯಲ್ಲಿ ಅಂತ್ಯವಾಗಿದೆ. ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿರುವುದು ಗೊತ್ತಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ್‌ ಎಂ.ಜೋಶಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮದುವೆಗೆ ಹಣ ಮರಳಿಸಲು ಹೇಳಿದ: ವಿಜಯಕುಮಾರ್‌ಗೆ ಇದೇ 25ಕ್ಕೆ ಮದುವೆ ನಿಗದಿಯಾಗಿತ್ತು. ಮದುವೆಗೆ ಹಣ ಹೊಂದಿಸಲು ಪರದಾಡುತ್ತಿದ್ದನು. ಮಂಜುನಾಥ್‌ ಪಡೆದಿದ್ದ ಸಾಲವನ್ನು ಮರಳಿ ಕೇಳಲು ನಿರ್ಧರಿಸಿದ್ದನು. ಆದರೆ, ಸ್ನೇಹಿತ ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದನು. ಆ.5ರಂದು ಸಂಜೆ ಮಂಜುನಾಥ್‌ ಭೇಟಿ ಮಾಡಿದ ಆರೋಪಿ, ಸ್ಕಾರ್ಪಿಯೊದಲ್ಲಿ ಲಾಂಗ್‌ ಡ್ರೈವ್‌ಗೆ ಕರೆದೊಯ್ದಿದ್ದನು. ತುರುವನೂರು– ದೊಡ್ಡಘಟ್ಟ ರಸ್ತೆಯ ಕೆರೆಯ ಬಳಿ ಇಬ್ಬರು ಕುಳಿತು ಹರಟೆ ಹೊಡೆದಿದ್ದರು.

‘ಆರೋಪಿ ಹಣ ಮರಳಿಸುವಂತೆ ಕೇಳಿದಾಗ ಮಂಜುನಾಥ್‌ ಕೆರಳಿದ್ದಾರೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ. ಅಂಗೈ ಗಾತ್ರದ ಕಲ್ಲನ್ನು ಹಿಡಿದ ಆರೋಪಿ ತಲೆಗೆ ಬಲವಾದ ಏಟು ಕೊಟ್ಟಿದ್ದಾನೆ. ನಾಲ್ಕು ಏಟಿಗೆ ಪ್ರಾಣಪಕ್ಷಿ ಹಾರಿಹೋಗಿದೆ’ ಎಂದು ಎಸ್‌ಪಿ ಜೋಶಿ ವಿವರಿಸಿದರು.

ಶವದೊಂದಿಗೆ ವಾಹನದಲ್ಲಿ ತಿರುಗಾಡಿದ: ಕೊಲೆಯಾದ ಬಳಿಕ ಗಾಬರಿಗೊಂಡ ವಿಜಯಕುಮಾರ್‌ಗೆ ದಿಕ್ಕು ತೋಚದಾಗಿದೆ. ಮೃತದೇಹವನ್ನು ವಾಹನಕ್ಕೆ ಹಾಕಿಕೊಂಡು ಚಿತ್ರದುರ್ಗಕ್ಕೆ ಬರಲು ಅಣಿಯಾಗಿದ್ದಾನೆ. ವಾಹನ ಸಮೇತ ಸುಟ್ಟು ಹಾಕುವ ಆಲೋಚನೆ ಆನಂತರ ಹುಟ್ಟಿಕೊಂಡಿದೆ. ಪೆಟ್ರೋಲ್‌ ಬಂಕ್‌ಗೆ ತೆರಳಿ 2 ಲೀಟರ್‌ ಪೆಟ್ರೋಲ್‌ ಖರೀದಿಸಿ ಹೊಳಲ್ಕೆರೆ ಮಾರ್ಗದಲ್ಲಿ ಸಾಗಿದ್ದಾನೆ. ರಾತ್ರಿ 9ರಿಂದ ನಸುಕಿನ 2 ಗಂಟೆಯವರೆಗೆ ಶವದೊಂದಿಗೆ ವಾಹನದಲ್ಲಿ ಸುತ್ತಿಡಿದ್ದಾನೆ. ಸುಟ್ಟು ಹಾಕಲು ಅರೇಹಳ್ಳಿಯಿಂದ ಮಾಲೇನಹಳ್ಳಿಗೆ ಸಾಗುವ ಮಾರ್ಗದ ನಿರ್ಜನ ಪ್ರದೇಶ ಆಯ್ಕೆ ಮಾಡಿಕೊಂಡಿದ್ದಾನೆ.

ಜಮೀನಿನಲ್ಲಿ ವಾಹನ ನಿಲ್ಲಿಸಿ ಶವವನ್ನು ಬಿಟ್ಟು ಕೆಳಗೆ ಇಳಿದಿದ್ದಾನೆ. ವಾಹನದ ಒಳಗೆ ಹಾಗೂ ಹೊರಗೆ ಪೆಟ್ರೋಲ್‌ ಎರಚಿದ್ದಾನೆ. ಚಾಲಕನ ಸೀಟಿನ ಪಕ್ಕದ ಕಿಟಕಿ ಬಿಟ್ಟು ಉಳಿದ ಕಿಟಕಿಗಳನ್ನು ಮುಚ್ಚಿ ಬೆಂಕಿ ಹಾಕಿದ್ದಾನೆ. ಕಿಟಕಿಯ ಮೂಲಕ ಹೊರಗೆ ಬಂದ ಬೆಂಕಿ ಆರೋಪಿಯ ಅಂಗಿಗೆ ಹೊತ್ತಿಕೊಂಡಿದೆ. ತಕ್ಷಣ ನೆಲಕ್ಕೆ ಬಿದ್ದು, ಮಣ್ಣಿನ ಸಹಾಯದಿಂದ ಬೆಂಕಿ ಆರಿಸಿಕೊಂಡಿದ್ದಾನೆ. ಬೆನ್ನಿನಲ್ಲಿ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೂ ಹೋಗದೆ ತಲೆಮರೆಸಿಕೊಂಡಿದ್ದನು.

ಸುಳಿವು ನೀಡಿದ ಉಂಗುರ: ಪತ್ರಕರ್ತ ಮಂಜುನಾಥ್‌ ಅವರ ದೇಹ ಸಂಪೂರ್ಣ ಭಸ್ಮವಾಗಿತ್ತು. ತಲೆಬುರುಡೆ, ಮೂಳೆ ಹಾಗೂ ಅರೆಬೆಂದ ದೇಹ ಮಾತ್ರ ಇತ್ತು. ಇದನ್ನು ಆಧರಿಸಿ ಗುರುತು ಪತ್ತೆ ಮಾಡುವುದು ಅಸಾಧ್ಯವಾಗಿತ್ತು. ಭಸ್ಮವಾದ ಕಾರು ಮಂಜುನಾಥ್‌ ಅವರಿಗೆ ಸೇರಿದ್ದರಿಂದ ಇವರ ಕುಟುಂಬಕ್ಕೆ ಪೊಲೀಸರು ಮಾಹಿತಿ ನೀಡಿದ್ದರು. ಅವರ ಪತ್ನಿ ಹಾಗೂ ತಂದೆ ಸೇರಿ ಯಾರೊಬ್ಬರಿಗೂ ದೇಹವನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ.

ಮಂಜುನಾಥ್ ಅವರಿಗೆ ಉಂಗುರ ಹಾಕುವ ಅಭ್ಯಾಸವಿತ್ತು. ಭಸ್ಮವಾದ ದೇಹದ ಬಳಿ ಉಂಗುರ ಪತ್ತೆಯಾಗಿದ್ದವು. ಮಾಂಸದ ಮುದ್ದೆಯಂತಿದ್ದ ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದ ಪೊಲೀಸರು ಸ್ಕ್ಯಾನಿಂಗ್‌ ಮಾಡಿಸಿದ್ದರು. ಈಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಂಜುನಾಥ್‌ ಅವರ ದೇಹದಲ್ಲಿ ಪೈಪ್‌ ಇರುವುದು ಗೊತ್ತಾಯಿತು. ವಾಹನದಲ್ಲಿ ಸಿಕ್ಕ ಬಟ್ಟೆಯ ತುಣುಕು ಸೇರಿ ಇತರ ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇರೆಗೆ ಮೃತದೇಹ ಮಂಜುನಾಥ್‌ ಅವರದು ಎಂಬುದು ಖಚಿತವಾಗಿದೆ.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಮ್‌ ಲಕ್ಷ್ಮಣ್‌ ಅರೆಸಿದ್ದಿ, ಡಿವೈಎಸ್‌ಪಿ ವಿಜಯ್‌ಕುಮಾರ್‌ ಎಂ. ಸಂತೋಷ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ ಮಧುಸೂದನ್‌ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !