ಗುರುವಾರ , ಸೆಪ್ಟೆಂಬರ್ 24, 2020
24 °C
ದೇವಸ್ಥಾನ, ಮನೆಯ ಮಹಡಿ ಮೇಲೆ ಉಚಿತ ಬೋಧನೆ

ಮಕ್ಕಳಿಗೆ ಮನೆಪಾಠ ಮಾಡುವ ಪದವೀಧರ

ಸಾಂತೇನಹಳ್ಳಿ ಸಂದೇಶ್ ಗೌಡ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ಕೋವಿಡ್ ಸಂಕಷ್ಟದಿಂದ ಶಾಲೆಗಳು ಮುಚ್ಚಿದ್ದು, ವಿದ್ಯಾರ್ಥಿಗಳು ಮನೆಯಲ್ಲಿಯೇ ಉಳಿದಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಿದ್ದರೂ ಪಾಠ ಮಾಡುವಂತಿಲ್ಲ. ಸರ್ಕಾರ ಈಗ ‘ವಿದ್ಯಾಗಮ’ ಕಾರ್ಯಕ್ರಮ ಜಾರಿಗೊಳಿಸಿದೆಯಾದರೂ ಅದರಲ್ಲಿ ಹಲವು ಗೊಂದಲಗಳಿವೆ. ಇದರ ನಡುವೆ ಇಲ್ಲೊಬ್ಬ ಪದವೀಧರ ಒಂದು ತಿಂಗಳಿನಿಂದ ತಮ್ಮ ಗ್ರಾಮದ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಬೋಧನೆ ಮಾಡುತ್ತಿದ್ದಾರೆ.

ಶಿಕ್ಷಕರು ಭೌಗೋಳಿಕ ಪ್ರದೇಶದ ಆಧಾರದಲ್ಲಿ ಕಾಲ್ಪನಿಕ ಬೋಧನಾ ಕೊಠಡಿ ಮಾಡಿಕೊಂಡು ಮಕ್ಕಳನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಕಲಿಕೆಗೆ ಹಚ್ಚುವುದು, ನೆರೆಹೊರೆ ಮಕ್ಕಳನ್ನು ಒಂದೆಡೆ ಸೇರಿಸಿ ಜಗಲಿಕಟ್ಟೆಯಲ್ಲಿ ಕೂತು ಮಕ್ಕಳ ಕಲಿಕೆ ಪರಿಶೀಲಿಸುವುದು, ಗೃಹಪಾಠ ಕೊಡುವುದು ‘ವಿದ್ಯಾಗಮ’ ಯೋಜನೆಯ ಉದ್ದೇಶ. ಆದರೆ, ಇದರ ಸಮರ್ಪಕ ಅನುಷ್ಠಾನ ಕಷ್ಟವಾಗಿದೆ.

ಇದರ ನಡುವೆಯೇ ತಾಲ್ಲೂಕಿನ ಕಾಮನಹಳ್ಳಿಯ ಪದವೀಧರ ಡಿ.ಪವನ್ ಕುಮಾರ್, ಸುಮಾರು 40 ವಿದ್ಯಾರ್ಥಿಗಳಿಗೆ ಭಾಷೆ, ಪರಿಸರ ಅಧ್ಯಯನ, ಸಮಾಜ ವಿಜ್ಞಾನ, ಗಣಿತ ವಿಷಯಗಳನ್ನು ಬೋಧಿಸುತ್ತಿದ್ದಾರೆ. ಗ್ರಾಮದ ದೇವಾಲಯದ ಆವರಣ, ಜಗಲಿ ಕಟ್ಟೆ, ಆರ್.ಸಿ.ಸಿ. ಮನೆಗಳ ಮಹಡಿ ಮೇಲೆ ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡುತ್ತಿದ್ದಾರೆ. ಕೋವಿಡ್ ಇರುವುದರಿಂದ ಒಂದೆಡೆಯೇ ಎಲ್ಲರನ್ನು ಕೂರಿಸದೆ, ಗ್ರಾಮದ ನಾಲ್ಕೈದು ಸ್ಥಳಗಳಲ್ಲಿ ಅಕ್ಕ–ಪಕ್ಕದ ಮನೆಗಳ ಮಕ್ಕಳನ್ನು ಕೂರಿಸಿ ಪಾಠ ಮಾಡುತ್ತಿದ್ದಾರೆ. ಬೆಳಿಗ್ಗೆ 10ರಿಂದ 2.30ರ
ವರೆಗೆ ಪಾಳಿಯಂತೆ ಬೋಧಿಸುತ್ತಿದ್ದಾರೆ.

‘ಪೋಷಕರ ಒಪ್ಪಿಗೆ ಪಡೆದು ಒಂದರಿಂದ ಏಳನೇ ತರಗತಿಯ ಮಕ್ಕಳಿಗೆ ಪಾಠ ಮಾಡುತ್ತಿದ್ದೇನೆ. ಕೋವಿಡ್ ನಿಯಮದಂತೆ ಅಂತರ
ಕಾಯ್ದುಕೊಳ್ಳಲಾಗುತ್ತಿದೆ. ನಾನುವಿದ್ಯಾರ್ಥಿಗಳಿಂದ ಹಣ ಪಡೆಯುವುದಿಲ್ಲ. ನಾನು ಬಿಎ ಪದವೀಧರನಾದರೂ ಕೂಲಿ ಕೆಲಸ ಮಾಡುತ್ತೇನೆ. ಅದರಿಂದ ಬಂದ ಹಣದಲ್ಲೇ ಮಕ್ಕಳಿಗೆ ಮಾಸ್ಕ್, ಸ್ಯಾನಿಟೈಸರ್ ಕೊಡಿಸಿದ್ದೇನೆ. ಕೆಲವು ಪೋಷಕರು ಹಣ ಕೊಡಲು ಬರುತ್ತಾರೆ. ನನಗೆ ಹಣ ಬೇಡ, ಬೇಕಾದರೆ ಬೋಧನೆಗೆ ಬೇಕಾಗುವ ಚಾಕ್ ಪೀಸ್, ಡಸ್ಟರ್, ಪಾಠೋಪಕರಣ ಕೊಡಿಸಿ ಎಂದು ಹೇಳಿದ್ದೇನೆ’ ಎನ್ನುತ್ತಾರೆ ಪವನ್ ಕುಮಾರ್.

‘ಶಾಲೆಗಳು ಆರಂಭ ಆಗುವವರೆಗೆ ಮಕ್ಕಳ ಕಲಿಕೆಯ ಕೊಂಡಿ ಕಳಚಬಾರದು ಎಂಬ ಉದ್ದೇಶದಿಂದ ಈ ಕಾರ್ಯ ಮಾಡುತ್ತಿದ್ದೇನೆ. ಪಕ್ಕದ ಹಿರೇ ಎಮ್ಮಿಗನೂರು ಗ್ರಾಮದ ಪೋಷಕರೂ ಮಕ್ಕಳಿಗೆ ಪಾಠ ಮಾಡುವಂತೆ ಕೇಳಿಕೊಂಡಿದ್ದಾರೆ. ನಾಳೆಯಿಂದ ಅಲ್ಲಿನ ಮಕ್ಕಳಿಗೂ ಪಾಠ ಮಾಡುತ್ತೇನೆ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.