ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ ಹೊಳಲ್ಕೆರೆ ಪಟ್ಟಣ

ಪಟ್ಟಣ ಪಂಚಾಯಿತಿಯಿಂದ ಬಡ್ತಿ ಪಡೆದ ನಗರ, ನಾಗರಿಕರಲ್ಲಿ ಅಭಿವೃದ್ಧಿಯ ನಿರೀಕ್ಷೆ
Last Updated 1 ಜನವರಿ 2021, 2:29 IST
ಅಕ್ಷರ ಗಾತ್ರ

ಹೊಳಲ್ಕೆರೆ: ಇಲ್ಲಿನ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ್ದು, ನಾಗರಿಕರ ಬಹುದಿನಗಳ ಕನಸು ನನಸಾಗಿದೆ.

ಹೋಬಳಿ ಕೇಂದ್ರಗಳೆಲ್ಲ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿದರೂ ತಾಲ್ಲೂಕು ಕೇಂದ್ರವಾಗಿದ್ದ ಹೊಳಲ್ಕೆರೆ ಪಟ್ಟಣ ಪಂಚಾಯಿತಿಯಾಗಿಯೇ ಉಳಿದಿತ್ತು. ಈಗ ಪಟ್ಟಣವು ಪುರಸಭೆಯಾಗಿ ಬಡ್ತಿ ಪಡೆದಿರುವುದರಿಂದ ನಾಗರಿಕರು ಹರ್ಷಗೊಂಡಿದ್ದಾರೆ.

2011ರ ಜನಗಣತಿಯಂತೆ ಪಟ್ಟಣದ ಜನಸಂಖ್ಯೆ 15,783 ಇದೆ. ಸುತ್ತಲಿನ ಹಳ್ಳಿಗಳನ್ನು ಸೇರಿಸಿ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಪಟ್ಟಣದ ಸಮೀಪ ಇರುವ ಕುಡಿನೀರ ಕಟ್ಟೆ, ಕುಡಿನೀರ ಕಟ್ಟೆ ಲಂಬಾಣಿ ಹಟ್ಟಿ, ಹಳೇಹಳ್ಳಿ ಲಂಬಾಣಿ ಹಟ್ಟಿ, ಜಯಂತಿ ನಗರ, ಜೈಪುರ, ಗುಂಡೇರಿ ಕಾವಲು, ಹೊಳಲ್ಕೆರೆ ಲಂಬಾಣಿ ಹಟ್ಟಿ, ಚೀರನ ಹಳ್ಳಿ, ಕಂಬದ ದೇವರ ಹಟ್ಟಿ ಗ್ರಾಮಗಳನ್ನು
ಪುರಸಭಾ ವ್ಯಾಪ್ತಿಗೆ ಸೇರಿಸಲಾಗಿದೆ. ಇದರಿಂದ ಜನಸಂಖ್ಯೆ 21,746ಕ್ಕೆ ಏರಿಕೆಯಾಗಿದ್ದು, ಪುರಸಭೆಯಾಗಿ ಉನ್ನತೀಕರಿಸಲಾಗಿದೆ. 14.437 ಚದರ ಕಿ.ಮೀ. ಪ್ರದೇಶ ಪುರಸಭೆ ಸುಪರ್ದಿಗೆ ಸೇರಿದೆ.

‘ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತ ಬಂದರೂ ತಾಲ್ಲೂಕು ಕೇಂದ್ರ ಪಟ್ಟಣ ಪಂಚಾಯಿತಿಯಾಗಿ ಉಳಿದಿದ್ದು ದುರಂತ. ಜನಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿ ಇದ್ದರೆ ಮಾತ್ರ ಬದಲಾವಣೆ ಸಾಧ್ಯ. ಹಳ್ಳಿಯಂತಿದ್ದ ತಾಲ್ಲೂಕು ಕೇಂದ್ರ 2008ರಲ್ಲಿ ಎಂ.ಚಂದ್ರಪ್ಪ ಶಾಸಕರಾದಾಗ ಬದಲಾವಣೆ ಕಂಡಿತು. ಶಾಲಾ, ಕಾಲೇಜುಗಳು, ವಾಣಿಜ್ಯ ಮಳಿಗೆಗಳು, ಪಟ್ಟಣಕ್ಕೆ ಹೊಂದಿಕೊಂಡಿರುವ ಎರಡೂ ಕೆರೆಗಳ ಏರಿ ಮೇಲೆ ವಿಶಾಲ ರಸ್ತೆ ನಿರ್ಮಿಸಿದ್ದರಿಂದ ಪಟ್ಟಣದ ಸೌಂದರ್ಯ ಹೆಚ್ಚಿತ್ತು. ಮುಂದೆ ಇನ್ನೂ ಹೆಚ್ಚಿನ ಅಭಿವೃದ್ಧಿ ನಿರೀಕ್ಷಿಸುತ್ತೇವೆ’ ಎಂದು ಪಟ್ಟಣದ ನಾಗರಿಕ ಸಾಮಿಲ್ ಕಿಶೋರ್ ಹೇಳಿದರು.

‘ಶಾಸಕ ಎಂ.ಚಂದ್ರಪ್ಪ ಹೆಚ್ಚು ಶ್ರಮವಹಿಸಿ ನಮ್ಮ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಿದ್ದು, ಅವರ ಹೆಸರು ಅಜರಾಮರವಾಗಿ ಉಳಿಯಲಿದೆ. ಚಂದ್ರಪ್ಪ ಶಾಸಕರಾದ ನಂತರ ಪಟ್ಟಣ ಹೆಚ್ಚು ಅಭಿವೃದ್ಧಿ ಕಂಡಿದೆ. ಈಗ ₹ 10 ಕೋಟಿ ವೆಚ್ಚದಲ್ಲಿ ಪುರಸಭೆ ಕಟ್ಟಡ ನಿರ್ಮಿಸಲಾಗುತ್ತಿದೆ. ಮುಂದೆ ಶಾಸಕರ ನೇತೃತ್ವದಲ್ಲಿ ಪಟ್ಟಣವನ್ನು ಮತ್ತಷ್ಟು ಅಭಿವೃದ್ಧಿ ಮಾಡಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಶೋಕ್ ತಿಳಿಸಿದರು.

‘ಪಂಚಾಯಿತಿಯು ಪುರಸಭೆಯಾಗಿ ಮೇಲ್ದರ್ಜೆಗೆ ಏರಿರುವುದರಿಂದ ಹೆಚ್ಚು ಅನುದಾನ ಸಿಗುತ್ತದೆ. ಇದರಿಂದ ಪುರಸಭೆ ವ್ಯಾಪ್ತಿಗೆ ಸೇರಿರುವ ಪ್ರದೇಶಗಳನ್ನು ಅಭಿವೃದ್ಧಿ ಮಾಡಬಹುದು’ ಎಂದು ಮುಖ್ಯಾಧಿಕಾರಿ ವಾಸಿಂ ಹೇಳಿದರು.

***

ನಾಲ್ಕೇ ದಿನಗಳಲ್ಲಿ ಆದೇಶ!

‘ನಾಲ್ಕೇ ದಿನಗಳಲ್ಲಿ ಇಲ್ಲಿನ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸುವ ಆದೇಶ ಹೊರಡಿಸಿದ್ದೇನೆ’ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದ್ದಾರೆ.

‘ಜ.1ರಿಂದ ದೇಶದ ಜನಗಣತಿ ಆರಂಭವಾಗುತ್ತದೆ. ಈ ಪ್ರಕ್ರಿಯೆ ಮುಗಿಯಲು ಮೂರು ವರ್ಷ ಬೇಕು. ಅಲ್ಲಿಯವರೆಗೆ ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವಂತಿಲ್ಲ. ಆದ್ದರಿಂದ ಜರೂರಾಗಿ ಆದೇಶ ಮಾಡಿಸಿದ್ದೇನೆ. ಡಿ.28ರಂದು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು, ಡಿ.29ಕ್ಕೆ ರಾಜ್ಯಪಾಲರಿಗೆ ಕಳುಹಿಸಲಾಯಿತು. ಡಿ.30ಕ್ಕೆ ಆದೇಶ ಹೊರಡಿಸಿದ್ದು, ಡಿ.31ರಂದು ಗೆಜೆಟ್ ಪತ್ರದಲ್ಲಿ ಪ್ರಕಟಿಸಲಾಗಿದೆ’ ಎಂದು ಅವರು ತಿಳಿಸಿದರು.

***

ಮತಕ್ಕಾಗಿ ಕೆಲಸ ಮಾಡಬಾರದು

ಒಬ್ಬ ರಾಜಕಾರಣಿ ಮುಂದಿನ ಚುನಾವಣೆಯನ್ನು ಗಮನದಲ್ಲಿ ಟ್ಟುಕೊಂಡು ಕೆಲಸ ಮಾಡುತ್ತಾನೆ. ಆದರೆ, ಒಬ್ಬ ರಾಜನೀತಿಜ್ಞ ಮುಂದಿನ ಪೀಳಿಗೆಯ ದೃಷ್ಟಿಕೋನದಲ್ಲಿ ಕಾರ್ಯ ನಿರ್ವಹಿಸುತ್ತಾನೆ ಎಂದು ಗ್ರೀಕ್ ತತ್ವಜ್ಞಾನಿ ಹೇಳಿದ್ದಾರೆ. ನಾವು ಮತಕ್ಕಾಗಿ ಮಾತ್ರ ಕೆಲಸ ಮಾಡಬಾರದು ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT