ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಈರುಳ್ಳಿ ಜಮೀನಿಗೆ ವರ್ತಕರ ಲಗ್ಗೆ

ಹೊಸದುರ್ಗ: ದರ ಏರಿಕೆ; ಮನೆ ಬಾಗಿಲಲ್ಲೇ ಮಾರಾಟ
Published : 24 ಸೆಪ್ಟೆಂಬರ್ 2024, 15:37 IST
Last Updated : 24 ಸೆಪ್ಟೆಂಬರ್ 2024, 15:37 IST
ಫಾಲೋ ಮಾಡಿ
Comments

ಹೊಸದುರ್ಗ: ತಾಲ್ಲೂಕಿನ ಈರುಳ್ಳಿ ಬೆಳೆಗಾರರು ತಮ್ಮ ಫಸಲನ್ನು ಮನೆ ಬಾಗಿಲಲ್ಲೇ ಮಾರಾಟ ಮಾಡುತ್ತಿದ್ದಾರೆ. ಕಸಬಾ ಹೋಬಳಿಯಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆಯಲಾಗುತ್ತಿದ್ದು, ಬೆಲೆ ಹೆಚ್ಚಳವಾಗಿರುವ ಪರಿಣಾಮ, ವರ್ತಕರು, ದಲ್ಲಾಳಗಳು ರೈತರ ಜಮೀನು, ಮನೆಗಳಿಗೇ ತೆರಳಿ ಖರೀದಿ ಮಾಡುತ್ತಿದ್ದಾರೆ. 

ಈ ಬಾರಿ ಈರುಳ್ಳಿಗೆ ಆರಂಭಿಕ ಹಂತದಲ್ಲಿ ನಿರಂತರ ಸೋನೆ ಮಳೆ ಎದುರಾಯಿತು. ತೇವಾಂಶ ಅಧಿಕವಾದ ಪರಿಣಾಮ ಕೊಳೆರೋಗ ಆವರಿಸಿ, ನಿರೀಕ್ಷಿತ ಫಸಲು ಸಿಗಲಿಲ್ಲ. ಅಳಿದುಳಿದ ಫಸಲು ಈಗ ರೈತರ ಕೈಹಿಡಿದಿದೆ.  

ಕಳೆದ 15 ದಿನಗಳಿಂದ ತಾಲ್ಲೂಕಿನಾದ್ಯಂತ 100ಕ್ಕೂ ಹೆಚ್ಚು ವರ್ತಕರು ಜಮೀನುಗಳಿಗೆ ಭೇಟಿ ನೀಡಿ, ಈರುಳ್ಳಿ ಪರೀಶೀಲಿಸಿ ಖರೀದಿಸುತ್ತಿದ್ದಾರೆ. ಹಾಸನ, ಮೈಸೂರು, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆಯಿಂದ ಬಂದಿರುವ ವರ್ತಕರು, ತಾಲ್ಲೂಕಿನ ನಾಗೇನಹಳ್ಳಿ, ಹೊನ್ನೆಕೆರೆ, ಐಲಾಪುರ, ಬಾಗೂರು, ಶ್ರೀರಂಗಾಪುರ, ಆನಿವಾಳ, ಎಂ.ಜಿ. ದಿಬ್ಬ, ಮಾಚೇನಹಳ್ಳಿ, ಮಳಲಿ, ಕಂಗುವಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಖರೀದಿಗೆ ಮುಂದಾಗಿದ್ದಾರೆ. 

ಬೆಂಗಳೂರಿನ ಮಾರುಕಟ್ಟೆಯಲ್ಲಿ 50 ಕೆ.ಜಿ. ಚೀಲಕ್ಕೆ ₹1,300 ದರ ಇದೆ. ಗಾತ್ರದ ಮೇಲೆ ಈರುಳ್ಳಿಯ ದರದಲ್ಲಿ ಕೊಂಚ ವ್ಯತ್ಯಾಸವಾಗುತ್ತದೆ. ಆದರೆ ಇಲ್ಲಿ ಖರೀದಿಗೆ ಬಂದಿರುವ ವರ್ತಕರು ಪ್ರತೀ ಚೀಲಕ್ಕೆ ₹1,600 ರಿಂದ ₹1,800 ದರ ನಿಗದಿ ಮಾಡುತ್ತಿದ್ದಾರೆ.

‘ಬೆಂಗಳೂರಿಗೆ ಕೊಂಡೊಯ್ದರೂ ಅಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಬೇಕು. ಸಾರಿಗೆ, ಹಮಾಲಿ ವೆಚ್ಚವನ್ನೂ ಭರಿಸಬೇಕು. ಜಮೀನಿನಲ್ಲೇ ಮಾರಾಟ ಮಾಡಿದ್ದರಿಂದ ಈ ವೆಚ್ಚಗಳು ಉಳಿದಂತಾಯಿತು. ಹೀಗಾಗಿ 80 ಚೀಲ ಈರುಳ್ಳಿ ನೀಡಿದ್ದೇನೆ’ ಎನ್ನುತ್ತಾರೆ ಬಾಗೂರಿನ ಪ್ರಗತಿಪರ ರೈತ ವೆಂಕಟೇಶ್. 

'ಎಕರೆಗೆ ₹1.10 ಲಕ್ಷ ವ್ಯಾಪಾರ ಆಗಿದೆ. ಜಮೀನಿನಲ್ಲಿನ ಈರುಳ್ಳಿ ಅವರೇ ಹಸನು ಮಾಡಿಕೊಂಡು ಮಾರುಕಟ್ಟೆಗೆ ಒಯ್ಯುವರು, ನಮ್ಮ ಹೊರೆ ತಪ್ಪಿತು ಎನ್ನುತ್ತಾರೆ ರೈತ ರಂಗನಾಥ್.'

ಹೊಸದುರ್ಗದ ಬಾಗೂರಿನ ಜಮೀನೊಂದರಲ್ಲಿ ವರ್ತಕರು ಈರುಳ್ಳಿ ಬೆಳೆಗೆ ದರ ನಿಗದಿ ಮಾಡುತ್ತಿರುವುದು
ಹೊಸದುರ್ಗದ ಬಾಗೂರಿನ ಜಮೀನೊಂದರಲ್ಲಿ ವರ್ತಕರು ಈರುಳ್ಳಿ ಬೆಳೆಗೆ ದರ ನಿಗದಿ ಮಾಡುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT