ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐನಲ್ಲಿ ಗ್ರಾಹಕರ ಪರದಾಟ

ಹೊಸದುರ್ಗ: ಬ್ಯಾಂಕ್ ನೌಕರರ ನೇಮಕಾತಿಗೆ ಒತ್ತಾಯ
Last Updated 24 ಜೂನ್ 2019, 20:00 IST
ಅಕ್ಷರ ಗಾತ್ರ

ಹೊಸದುರ್ಗ: ಇಲ್ಲಿನ ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ (ಎಸ್‌ಬಿಐ) ಸಕಾಲಕ್ಕೆ ಸೇವೆಗಳು ಸಿಗದೇ ಸೋಮವಾರ ನೂರಾರು ಗ್ರಾಹಕರು ಪರದಾಡುವಂತಾಯಿತು.

ಹೊಸದಾಗಿ ಬ್ಯಾಂಕ್‌ ಖಾತೆ ತೆರೆಯುವವರು, ಖಾತೆಗೆ ಹಣ ಪಾವತಿಸುವವರು, ಹಣ ಬಿಡಿಸಿಕೊಳ್ಳುವವರು, ಡಿ.ಡಿ ತೆಗೆಸುವವರು, ಎಟಿಎಂ ಕಾರ್ಡ್‌ ಪಡೆಯುವವರು ಹೀಗೆ ನಾನಾ ಕೆಲಸಗಳಿಗೆ ಸಾವಿರಕ್ಕೂ ಹೆಚ್ಚು ಜನ ಬರುತ್ತಾರೆ. ಪ್ರತಿ ದಿನವೂ ಬ್ಯಾಂಕ್‌ ಒಳಗೆ ಕಾಲಿಡಲು ಸಾಧ್ಯವಾಗದಷ್ಟು ಜನ ಕಿಕ್ಕಿರಿದಿರುತ್ತಾರೆ.

ಆದರೆ, ಬ್ಯಾಂಕ್‌ ಸೇವೆ ಮಾತ್ರ ಗ್ರಾಹಕರಿಗೆ ಸಕಾಲಕ್ಕೆ ಸಿಗುತ್ತಿಲ್ಲ. ಉದ್ದನೆಯ ಸರತಿ ಸಾಲಿನಲ್ಲಿ ಎರಡು ತಾಸಿಗೂ ಹೆಚ್ಚು ಹೊತ್ತು ನಿಲ್ಲಬೇಕು. ನಿಂತರೂ ಕೌಂಟರ್‌ಗಳಲ್ಲಿ ಸಿಬ್ಬಂದಿ ಇರುವುದಿಲ್ಲ. ಇನ್ನು ಕೆಲ ಸಿಬ್ಬಂದಿಗೆ ಕನ್ನಡ ಮಾತನಾಡಲು ಬರುತ್ತಿಲ್ಲ. ಹಿಂದಿ, ಇಂಗ್ಲಿಷ್‌ನಲ್ಲಿ ಸಿಬ್ಬಂದಿ ಕೇಳುವ ಮಾಹಿತಿ ತಮಗೆ ತಿಳಿಯುತ್ತಿಲ್ಲ ಎಂದು ಗ್ರಾಮೀಣ ಭಾಗದ ಗ್ರಾಹಕರು ಅಳಲು ತೋಡಿಕೊಳ್ಳುತ್ತಾರೆ.

‘ಹೊಸ ಖಾತೆ ಮಾಡಿಸಲು ಬಂದರೆ, ಡಿ.ಡಿ ತೆಗೆಸಲು ಚಲನ್‌ ತುಂಬಿದರೆ ಇಂದು ಆಗಲ್ಲ ಎನ್ನುತ್ತಾರೆ. ಪರಿಸ್ಥಿತಿ ಹೀಗಾಗಬಾರದು. ಜನರ ಸೇವೆಗೆ ಬ್ಯಾಂಕ್‌ ಸದಾ ಸಿದ್ಧ ಇರಬೇಕು. ಮುಗ್ಧ ಜನರಿಗೆ ಬ್ಯಾಂಕ್‌ ಸೇವೆ ಸರಿಯಾಗಿ ಸಿಗಬೇಕಾದರೆ ಪ್ರಾದೇಶಿಕ ಭಾಷೆ ಮಾತನಾಡುವ ಹೆಚ್ಚು ಸಿಬ್ಬಂದಿ ನೇಮಕ ಮಾಡಬೇಕು. ಹಣ ಪಾವತಿಸುವ ಹಾಗೂ ಬಿಡಿಸಿಕೊಳ್ಳಲು ತಲಾ ಎರಡು ಕೌಂಟರ್‌ ತೆರೆಯಬೇಕು. ನಮ್ಮಂತಹ ವೃದ್ಧರಿಗೆ ತಕ್ಷಣವೇ ಸೇವೆ ಒದಗಿಸಬೇಕು’ ಎನ್ನುತ್ತಾರೆ ವೃದ್ಧರಾದ ಚಿಕ್ಕಣ್ಣ, ಹನುಮಂತಪ್ಪ.

ಸರ್ಕಾರದ ವಿವಿಧ ಸೌಲಭ್ಯವನ್ನು ಎಸ್‌ಬಿಐನಲ್ಲಿ ಪಡೆಯಬೇಕಾಗಿರುವುದರಿಂದ ಗ್ರಾಹಕರು ಹೆಚ್ಚಾಗುತ್ತಿದ್ದಾರೆ. ಅಷ್ಟೆ ಅಲ್ಲದೆ, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಅನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಜೊತೆ ಸೇರ್ಪಡೆ ಮಾಡಿದಾಗಿನಿಂದಲೂ ಈ ಬ್ಯಾಂಕ್‌ನಲ್ಲಿ ಗ್ರಾಹಕರ ನೂಕುನುಗ್ಗಲು ಹೆಚ್ಚಾಗಿದೆ. ಗ್ರಾಹಕರಿಗೆ ತುರ್ತು ಸೇವೆ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

*
6 ಮಂದಿ ಸಿಬ್ಬಂದಿ ಕೊರತೆ ಇರುವುದರಿಂದ ಸೇವೆ ಸ್ವಲ್ಪ ತಡವಾಗುತ್ತಿರಬಹುದು. ಡಿ.ಡಿ. ಫಾರಂ ಕಳಿಸಲು ಬೆಂಗಳೂರು ಕಚೇರಿಗೆ ತಿಳಿಸಿದರೂ ಕಳಿಸಿಲ್ಲ. ಹೀಗಾಗಿ ಡಿ.ಡಿ. ತಗೆಯುತ್ತಿಲ್ಲ. 2 ದಿನಗಳಲ್ಲಿ ಡಿ.ಡಿ. ಫಾರಂ ಬರಲಿದೆ.
-ಗೋವಿಂದ್‌, ಎಸ್‌ಬಿಐ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT