ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಭೀತಿ: ಸ್ವಗ್ರಾಮಕ್ಕೆ ಹೋಗಲು ಜನರ ಪರದಾಟ

ವಿಜಯಪುರದಿಂದ ಚಾಮರಾಜನಗರಕ್ಕೆ ಗುಳೆ ಹೋಗಿದ್ದ 32 ಮಂದಿ
Last Updated 28 ಮಾರ್ಚ್ 2020, 15:45 IST
ಅಕ್ಷರ ಗಾತ್ರ

ಹೊಸದುರ್ಗ: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹೋರ್ತಿ ಗ್ರಾಮದಿಂದ ಉದ್ಯೋಗ ಅರಸಿ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಭಾಗಿವಾಲುಗೆ ಗುಳೆ ಹೋಗಿದ್ದ 32 ಮಂದಿ ಕಾರ್ಮಿಕರು ಸ್ವಗ್ರಾಮಕ್ಕೆ ಹೋಗಲು ಬಂದಿದ್ದಾಗ ಮಾರ್ಗ ಮಧ್ಯದ ತಾಲ್ಲೂಕಿನ ಶ್ರೀರಾಂಪುರದಲ್ಲಿ ಶುಕ್ರವಾರ ತಡರಾತ್ರಿ ಪರದಾಡುವಂತಾಯಿತು.

4 ತಿಂಗಳ ಹಿಂದೆ ಕಬ್ಬು ಮುರಿಯುವ ಕೂಲಿ ಕೆಲಸಕ್ಕೆ ಹೋಗಿದ್ದರು. ಆದರೆ, ಕಳೆದ ಒಂದು ವಾರದಿಂದ ಕೊರೊನಾ ವೈರಸ್‌ ಮಹಾಮಾರಿ ರೋಗ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಜನತಾ ಕರ್ಫ್ಯೂ ಜಾರಿಯಾಗಿತ್ತು. ನಂತರ ಲಾಕ್‌ಡೌನ್‌ ಘೋಷಣೆಯಾಗಿತ್ತು. ಇದರಿಂದಾಗಿ ಕೂಲಿ ಕೆಲಸ ಇಲ್ಲದಂತಾಯಿತು. ಮತ್ತೊಂದೆಡೆ ಕೊರೊನಾ ಸುದ್ದಿಯಿಂದ ಭಯಭೀತರಾದ 32 ಮಂದಿ ಸ್ವಗ್ರಾಮಕ್ಕೆ ಹೋಗಲು ಶುಕ್ರವಾರ ಸಂಜೆ ಬಾಡಿಗೆ ಲಾರಿಯಲ್ಲಿ ಬಂದಿದ್ದಾರೆ.

‘ಶ್ರೀರಾಂಪುರದಲ್ಲಿ ಪೊಲೀಸರು ತನಿಖೆ ಮಾಡಿ ಲಾರಿ ಚಾಲಕ ಹಾಗೂ ನಮಗೆ ಲಾಟಿ ಏಟು ಕೊಟ್ಟರು. ಇದರಿಂದ ಭಯಭೀತನಾದ ಚಾಲಕ ಸ್ವಲ್ಪ ಮುಂದೆ ಬಂದು ಪೆಟ್ರೋಲ್‌ ಬಂಕ್‌ ಬಳಿ ಲಾರಿ ನಿಲ್ಲಿಸಿದನು. ಇಲ್ಲಿನ ಪೊಲೀಸರ ಠಾಣೆಗೆ ಹೋಗಿ ಅನುಮತಿ ಪಡೆದುಕೊಂಡು ಬನ್ನಿ ಎಂದು ಎಲ್ಲರನ್ನು ಕೆಳಗೆ ಇಳಿಸಿದರು. ಆಗ ಎಲ್ಲರೂ ಪೊಲೀಸ್‌ ಠಾಣೆಯತ್ತ ಹೋದಾಗ ಲಾರಿಯಲ್ಲಿದ್ದ ಎಲ್ಲ ಲಗೇಜು ಕೆಳಗಿಳಿಸಿ ಅಹೋರಾತ್ರಿ ಲಾರಿ ಚಾಲಕ ತಪ್ಪಿಸಿಕೊಂಡಿದ್ದಾನೆ. ಎಲ್ಲಿ ನೋಡಿದರೂ ಲಾರಿ ಕಾಣಿಸಲಿಲ್ಲ. ಒಂದೆಡೆ ಕೊರೊನಾ ಭೀತಿ, ಮತ್ತೊಂದೆಡೆ ಪೊಲೀಸರ ಭಯದಲ್ಲಿ ಸ್ವಗ್ರಾಮಕ್ಕೆ ಹೋಗಲು ವಾಹನಕ್ಕೆ ತಡರಾತ್ರಿಯಿಂದ ಪರದಾಡುವಂತಾಗಿತ್ತು. ಆದರೂ ಯಾವುದೇ ವಾಹನ ಸಿಗಲಿಲ್ಲ’ ಎಂದು ಹೋರ್ತಿ ಗ್ರಾಮದ ಭೀಮರಾಯ್‌ ಮುದುಕಣ್ಣ ಪೂಜಾರ್‌ ತಿಳಿಸಿದರು.

‘ಬೆಳಿಗ್ಗೆ ಆಗುತ್ತಿದಂತೆ ತಾಲ್ಲೂಕು ಆಡಳಿತ ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ 32 ಮಂದಿಯನ್ನು ಕರೆದುಕೊಂಡು ಬಂದು ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಿದ್ದಾರೆ. ಒಬ್ಬರು ಗರ್ಭಿಣಿ, 6 ಮಂದಿ ಮಕ್ಕಳು, 15 ಮಂದಿ ಮಹಿಳೆಯರು, 10 ಮಂದಿ ಪುರುಷರು ಇದ್ದೇವೆ. ಆದರೆ, ಲಾಕ್‌ಡೌನ್‌ ಅವಧಿ ಮುಗಿಯುವವರೆಗೂ ಇಲ್ಲಿಯೇ ಇರಬೇಕು ಎಂದು ಹೇಳುತ್ತಿದ್ದಾರೆ. ಅಷ್ಟೊಂದು ದಿನ ಊರಲ್ಲಿರುವ ಚಿಕ್ಕಮಕ್ಕಳನ್ನು ಬಿಟ್ಟು ಇಲ್ಲಿ ಹೇಗೆ ಇರಬೇಕು ಎಂದು ತಿಳಿಯುತ್ತಿಲ್ಲ’ ಎಂದು ‘ಪ್ರಜಾವಾಣಿ’ ಜತೆಗೆ ಅಳಲು ತೋಡಿಕೊಂಡರು.

‘ಡಾ.ಗುರುದೇವ, ಡಾ.ಚೈತ್ರಾ, ಡಾ.ಶಿವನಾಥ್‌, ಡಾ.ಪ್ರದೀಪ್‌ ತಂಡದವರು 32 ಮಂದಿಯ ಆರೋಗ್ಯ ತಪಾಸಣೆ ಮಾಡಿದ್ದಾರೆ. ತಹಶೀಲ್ದಾರ್‌ ತಿಪ್ಪೇಸ್ವಾಮಿ ಅವರ ಆದೇಶದ ಮೇರೆಗೆ ಅವರಿಗೆ ಊಟ ಹಾಗೂ ವಸತಿ ಸೌಕರ್ಯ ಕಲ್ಪಿಸಲಾಗಿದೆ’ ಎಂದು ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ಕೆ.ಸಿ.ಶಶಿಧರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT