ಸೋಮವಾರ, ಜೂನ್ 21, 2021
27 °C
ಸನ್ಮಾನ ಸಮಾರಂಭ

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿ ನಿಲಯ: ಎನ್.ತಿಪ್ಪಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಿತ್ರದುರ್ಗ: ಬೆಂಗಳೂರಿನಲ್ಲಿ ಸಮುದಾಯದ 2 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂಥ ವಸತಿ ನಿಲಯವನ್ನು 3.5 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗುವುದು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷ ಎನ್.ತಿಪ್ಪಣ್ಣ ಭರವಸೆ ನೀಡಿದರು.

ಮುರುಘಾಮಠದ ಅನುಭವ ಮಂಟಪದಲ್ಲಿ ಭಾನುವಾರ ಮಹಾಸಭಾದ ಚಿತ್ರದುರ್ಗ ಘಟಕದಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ 90ಕ್ಕೂ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರಿನಂಥ ಮಹಾನಗರದಲ್ಲಿ ವಸತಿ ನಿಲಯಗಳಿದ್ದರೂ ಅವುಗಳ ಸಾಮರ್ಥ್ಯ ಮಾತ್ರ ನೂರಿನ್ನೂರು ವಿದ್ಯಾರ್ಥಿಗಳಿಗೆ ಸೀಮಿತವಾಗಿದೆ. ಈ ಹಿನ್ನೆಲೆಯಲ್ಲಿ ತಲಾ 1 ಸಾವಿರ ಬಾಲಕ, ಬಾಲಕಿಯರಿಗಾಗಿ ಸುಸಜ್ಜಿತ ವಸತಿ ನಿಲಯ ನಿರ್ಮಿಸಲು ತೀರ್ಮಾನಿಸಿದ್ದೇವೆ. ₹ 15 ಕೋಟಿ ವೆಚ್ಚದಲ್ಲಿ ಜಾಗ ಖರೀದಿಸಲಾಗಿದ್ದು, ಶೀಘ್ರದಲ್ಲೇ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ. ಅದಕ್ಕಾಗಿ ಈ ಜಿಲ್ಲೆಯಿಂದಲೂ ಸಹಕಾರ ನಿರೀಕ್ಷಿಸಲಾಗಿದೆ ಎಂದರು.

ಶತಮಾನದ ಹಿಂದೆಯೇ ಹಾನಗಲ್ ಕುಮಾರಸ್ವಾಮಿ ಅವರಿಂದ ಸ್ಥಾಪಿತವಾದ ವೀರಶೈವ ಮಹಾಸಭಾವೂ ಅಂದಿನ ಕಾಲದಲ್ಲೇ ಬಾಗಲಕೋಟೆ, ವಿಜಯಪುರ, ಬೆಳಗಾವಿ ಹಾಗೂ ಬಳ್ಳಾರಿಯಲ್ಲಿ ಬಸವೇಶ್ವರ, ಬಿಎಲ್‌ಡಿ, ಕರ್ನಾಟಕ ಲಿಂಗಾಯಿತ ಶಿಕ್ಷಣ, ವೀರಶೈವ ವಿದ್ಯಾವರ್ಧಕ ಹೆಸರುಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಅಂದು ಕೂಡ ವೀರಶೈವ - ಲಿಂಗಾಯತ ಎಂದೆಲ್ಲ ಯಾವುದೇ ವ್ಯತ್ಯಾಸ ಇರಲಿಲ್ಲ ಎಂದು ಹೇಳಿದರು.

ಹೆಬ್ಬಾಳು ವಿರಕ್ತ ಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿ, ಲಿಂಗ ಧಾರಣೆ ಎಂಬುದು ಜಾತಿ ಸೂಚಕವಲ್ಲ. ಅದು ಧರ್ಮದ ಸಂಕೇತ. ಅದನ್ನು ಹಾಕಿಕೊಳ್ಳಲು ನಾಚಿಕೆ ಬೇಡ ಎಂದ ಅವರು, ವೀರಶೈವ ಲಿಂಗಾಯತ ಧರ್ಮ ಎಂದರೆ ಇಲ್ಲದವರಿಗೆ ದಾನ ಮಾಡುವಂಥವರು ಎಂದರು.

ಇದೇ ಸಂದರ್ಭದಲ್ಲಿ ಶಿವದಾರ ಕರಡಿಗೆ, ಇಷ್ಟ ಲಿಂಗ, ನಗದು ಸಹಿತ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕೊಟ್ಟೂರು ಹಿರೇಮಠದ ಯೋಗಿ ರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಮಹಾಸಭಾದ ರಾಜ್ಯ ಕಾರ್ಯದರ್ಶಿ ಎಚ್.ಎಂ.ರೇಣುಕಾ ಪ್ರಸನ್ನ, ಜಿಲ್ಲಾ ಘಟಕದ ಅಧ್ಯಕ್ಷ ಪಿ.ಕೆ.ಕುಮಾರಸ್ವಾಮಿ, ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ಗೀತಾ ಜಯಂತ್, ರಾಜ್ಯಾಧ್ಯಕ್ಷೆ ಮಂಜುಳಾ ಕಿರಣ್, ಜಿಲ್ಲಾಧ್ಯಕ್ಷೆ ಎಂ.ವಿ. ವೀಣಾ, ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಮಮತಾ, ನಗರಸಭೆ ಸದಸ್ಯರಾದ ಮಂಜುನಾಥ ಗೊಪ್ಪೆ, ಜಯಂತಿ ಗೊಪ್ಪೆ, ಕೆ.ಬಿ.ಸುರೇಶ್, ಜಯಪ್ಪ, ಲೇಖಕಿ ಜಯಶೀಲಾ ಬ್ಯಾಕೋಡ್, ಕೆಇಬಿ ಷಣ್ಮುಖಪ್ಪ ಇದ್ದರು. 

ಸಮಾರಂಭಕ್ಕೂ ಮುನ್ನ ನೀಲಕಂಠೇಶ್ವರ ಸ್ವಾಮಿ ದೇಗುಲದಿಂದ ಬಸವೇಶ್ವರ, ಹಾನಗಲ್ ಕುಮಾರಸ್ವಾಮಿ ಅವರ ಭಾವಚಿತ್ರ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಮೆರವಣಿಗೆ ನಡೆಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು