ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಾನುಭವಿಗಳು ಮನೆ ಮಾರಾಟ ಮಾಡಬಾರದು

ಎಪಿಎಂಸಿ ಮಹಿಳಾ ಹಮಾಲರಿಗೆ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಮನವಿ
Last Updated 6 ಜನವರಿ 2023, 12:49 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಾಗದ ಸಮಸ್ಯೆ ನಡುವೆಯೂ ಕಷ್ಟಪಟ್ಟು ಸ್ಥಳ ಗುರುತಿಸಿ ಸುಸಜ್ಜಿತ ಮನೆಗಳನ್ನು ನಿರ್ಮಿಸಲಾಗಿದೆ. ಆದ್ದರಿಂದ ಯಾರು ಸಹ ಇವುಗಳನ್ನು ಬಾಡಿಗೆ ನೀಡುವುದಾಗಲಿ ಅಥವಾ ಮಾರಾಟ ಮಾಡುವ ಕೆಲಸಕ್ಕೆ ಮಾತ್ರ ಮುಂದಾಗಬೇಡಿ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಮನವಿ ಮಾಡಿದರು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಮಹಿಳಾ ಹಮಾಲರಿಗೆ ನಿರ್ಮಿಸಿರುವ ಮನೆಗಳನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ನಗರ ವ್ಯಾಪ್ತಿಯಲ್ಲಿ ಒಂದು ಅಡಿ ಜಾಗ ಸಿಗುವುದು ಕಷ್ಟವಾಗಿದೆ. ಇಂತಹ ಸನ್ನಿವೇಶದಲ್ಲಿ ಬಡವರಿಗಾಗಿ ಜಾಗ ಗುರುತಿಸಿ ಮನೆಗಳನ್ನು ನಿರ್ಮಿಸಿ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಇವುಗಳನ್ನು ಪಡೆದ ಬಳಿಕ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಗಾಂಧಿ ನಗರದಲ್ಲಿ ಬೆಳಕಿಗೆ ಬಂದಿದೆ. ಇದು ನೋವಿನ ಸಂಗತಿಯಾಗಿದೆ’ ಎಂದು ಬೇಸರಿಸಿದರು.

‘ಎಪಿಎಂಸಿಯಲ್ಲಿ ಕಷ್ಟಪಟ್ಟು ದುಡಿಯುವ ಹಮಾಲರು ಮನೆಗಳ ಬಾಡಿಗೆ ಕಟ್ಟಲು ಕಷ್ಟಪಡುತ್ತಿದ್ದಾರೆ ಎಂಬ ವಿಚಾರ ತಿಳಿದು ನಗರದಲ್ಲಿ ಜಾಗ ಮತ್ತು ಮನೆ ನಿರ್ಮಿಸಿಕೊಡುವ ಕೆಲಸ ಮಾಡಲಾಗಿದೆ. ಈಗಾಗಲೇ ಪುರುಷ ಹಮಾಲರಿಗೆ 150 ಮನೆಗಳು ನೀಡಲಾಗಿದೆ. ವಿಶೇಷವಾಗಿ ಮಹಿಳಾ ಹಮಾಲರಿಗೆ ಮನೆಗಳನ್ನು ನೀಡಬೇಕೆಂದು ಜಾಗ ಗುರುತಿಸಿ 133 ಮನೆಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ ಏಳು ವರ್ಷ ಶ್ರಮಿಸಿದ್ದೇನೆ’ ಎಂದರು.

‘ಬೆಳಕು ಯೋಜನೆಯಡಿ ಮನೆಗಳಿಗೆ ಉಚಿತ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಪ್ರಥಮ ಹಂತದಲ್ಲಿ 54 ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿದ್ದು, ಶೀಘ್ರ ಎಲ್ಲಾ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ’ ಎಂದು ತಿಳಿಸಿದರು.

‘ಹಮಾಲರಿಗೆ ನಿರ್ದಿಷ್ಟ ಪ್ರದೇಶ ಎಂದು ಸಿಮೀತ ಮಾಡದೇ ನಗರದಲ್ಲಿ ಅವಕಾಶ ಇರುವ ಎಲ್ಲಾ ಕಡೆ ನಿರ್ಮಿತಿ ಕೇಂದ್ರದ ಮೂಲಕ ಮನೆ ನಿರ್ಮಿಸಲಾಗಿದೆ. ಉಳಿದ ಮನೆಗಳ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ’ ಎಂದು ಹೇಳಿದರು.

ಕೆಪಿಟಿಸಿಎಲ್‌ ಕಾರ್ಯನಿರ್ವಾಹಕ ಎಂಜಿನಿಯರ್‌ ಜಯ್ಯಣ್ಣ ಮಾತನಾಡಿ, ‘ಹಮಾಲರ ಮನೆಗಳಿಗೆ ಬೆಳಕು ಯೋಜನೆಯಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗುತ್ತಿದೆ. ಬಿಪಿಎಲ್‌ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಕೇಂದ್ರ ಸರ್ಕಾರದ ದೀನ್‌ದಯಾಳ್‌ ಉಪಾಧ್ಯ ಯೋಜನೆ ಮತ್ತು ಬೆಳಕು ಯೋಜನೆ ಮೂಲಕ‌ ಮೊದಲನೇ ಹಂತದಲ್ಲಿ 54 ಮನೆಗಳಿಗೆ ಸಂಪರ್ಕ ನೀಡಲಾಗಿದೆ’ ಎಂದು ತಿಳಿಸಿದರು.

ಎಪಿಎಂಸಿ ವ್ಯವಸ್ಥಾಪಕ ದೊರೆಸ್ವಾಮಿ, ಹಮಾಲರ ಸಂಘದ ಅಧ್ಯಕ್ಷ ಬಸವರಾಜ್‌, ಸದಸ್ಯ ಜಯರಾಮರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT