ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು ಕ್ಷೇತ್ರದಿಂದಲೇ ಮತ್ತೆ ಸ್ಪರ್ಧೆ: ಶ್ರೀರಾಮುಲು

ಅದ್ದೂರಿ ಮೆರವಣಿಗೆ ಮೂಲಕ ಹಿರೇಕೆರೆಗೆ ತೆರಳಿ ಶಾಸ್ತ್ರೋಕ್ತವಾಗಿ ಬಾಗಿನ ಅರ್ಪಣೆ
Last Updated 1 ಅಕ್ಟೋಬರ್ 2022, 4:33 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಮೊಳಕಾಲ್ಮುರು ಕ್ಷೇತ್ರದಿಂದಲೇ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಪಕ್ಷವು ಸೂಚನೆ ನೀಡಿದರೆ ಇಲ್ಲಿನಿಂದಲೇ ಸ್ಪರ್ಧಿಸಿ ಗೆದ್ದು ಕ್ಷೇತ್ರದಲ್ಲಿರುವ ಎಲ್ಲ 78 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡುತ್ತೇನೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ನಾಯಕನಹಟ್ಟಿಯ ಐತಿಹಾಸಿಕ ಗುರುತಿಪ್ಪೇರುದ್ರಸ್ವಾಮಿ ಹಿರೇಕೆರೆಗೆ ಶುಕ್ರವಾರ ಬಾಗಿನ ಅರ್ಪಿಸಿ ನಂತರ ವೇದೆಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಿಜೆಪಿ ಅಧಿಕಾರಕ್ಕೆ ಬಂದಾಗೆಲ್ಲ ರಾಜ್ಯದಲ್ಲಿ ಅಣೆಕಟ್ಟುಗಳು, ಕೆರೆಕಟ್ಟೆಗಳು ತುಂಬಿ ಸಮೃದ್ಧಿ ಆವರಿಸುತ್ತದೆ. 2010ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಹಿರೇಕೆರೆಯು ತುಂಬಿ ಕೋಡಿ ಹರಿದಿತ್ತು. ನಂತರ ಭೀಕರ ಬರಗಾಲಕ್ಕೆ ತುತ್ತಾಗಿ ಬಾಯಿಬಿಟ್ಟುಕೊಂಡಿತ್ತು. 12 ವರ್ಷಗಳ ನಂತರ ಬಿಜೆಪಿ ಸರ್ಕಾರ ಇರುವಾಗಲೇ ಕೆರೆ ತುಂಬಿರುವುದು ವಿಪರ್ಯಾಸ ಎಂದು ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆ ಅಡಿ ಹಿರಿಯೂರಿನ ವಾಣಿವಿಲಾಸ ಜಲಾಶಯಕ್ಕೆ ನೀರು ಹರಿಸಲಾಗಿದೆ. ಇದರ ಫಲವಾಗಿ ವೇದಾವತಿ ನದಿಯು ತುಂಬಿ ಹರಿಯುತ್ತಿದೆ. ಇದರಿಂದ ಕ್ಷೇತ್ರದ ತಳಕು ಭಾಗದಲ್ಲಿ ಅಂತರ್ಜಲಮಟ್ಟ ಹೆಚ್ಚಿ ರೈತರ ಕೊಳವೆ ಬಾವಿಗಳಲ್ಲಿ ಜಲ ಮರುಪೂರಣವಾಗಿದೆ. ತುಂಗಭದ್ರ ಹಿನ್ನಿರಿನಿಂದ ಪ್ರತಿ ಹಳ್ಳಿಗಳಿಗೂ ಕುಡಿಯುವ ನೀರು ಸರಬರಾಜು ಮಾಡಲು ಕೈಗೊಂಡಿರುವ ಪೈಪ್‌ಲೈನ್ ಕಾಮಗಾರಿಯು 2ರಿಂದ3 ತಿಂಗಳಲ್ಲಿ ಪೂರ್ಣವಾಗಲಿದೆ ಎಂದು ತಿಳಿಸಿದರು.

ಹಿರೇಕೆರೆಯಿಂದ ಕೋಡಿ ಹರಿಯುವ ನೀರು ವ್ಯರ್ಥವಾಗಿ ಆಂಧ್ರಕ್ಕೆ ಸಾಗುತ್ತದೆ. ಇದನ್ನು ಚಿಕ್ಕಕೆರೆಗೆ ಹರಿಯುವಂತೆ ಮಾಡಿದರೆ ಏಕಕಾಲಕ್ಕೆ ಎರಡೂ ಕೆರೆಗಳಲ್ಲಿ ನೀರು ತುಂಬಿ ಕುಡಿಯುವ ನೀರು ಮತ್ತು ಕೃಷಿ ಚಟುವಟಕೆಗೆ ಅನುಕೂಲವಾಗುತ್ತದೆ. ಸಾರಿಗೆ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ ಮನವಿ ಮಾಡಿದರು.

ವಿಧಾನಪರಿಷತ್‌ ಸದಸ್ಯ ಕೆ.ಎಸ್. ನವೀನ್, ಪಟ್ಟಣ ಪಂಚಾಯಿತಿ ಸದಸ್ಯರಾದ ಎನ್. ಮಹಾಂತಣ್ಣ, ವಿನುತಾ, ತಹಶೀಲ್ದಾರ್ ಎನ್. ರಘುಮೂರ್ತಿ, ಮುಖ್ಯಾಧಿಕಾರಿ ಟಿ. ಲೀಲಾವತಿ, ದೇವಾಲಯದ ಇಒ ಗಂಗಾಧರಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ. ಮುರಳಿ, ಮಂಡಲ ಅಧ್ಯಕ್ಷರಾದ ಡಾ.ಮಂಜುನಾಥ್, ಇ. ರಾಮರೆಡ್ಡಿ, ಸೂರನಹಳ್ಳಿ ಶ್ರೀನಿವಾಸ್, ಮುಖಂಡರಾದ ದೇವರಾಜ್ ಎತ್ತಿನಹಟ್ಟಿ, ರಾಮ್‌ದಾಸ್, ಪಿ. ಶಿವಣ್ಣ, ಮಲ್ಲೇಶ್, ಮೋಹನ್, ತ್ರಿಶೂಲ್‌ಕುಮಾರ್, ಗೋವಿಂದ್, ರಾಜು ಇದ್ದರು.

ಕಾರ್ಯಕ್ರಮದ ಬಳಿಕ ಮಲ್ಲೂರಹಟ್ಟಿ ಗ್ರಾಮಕ್ಕೆ ತೆರಳಿದ ಶ್ರೀರಾಮುಲು ಅವರು, ಸಿಡಿಲು ಬಡಿದು ಈಚೆಗೆ ಮೃತಪಟ್ಟಿದ್ದ ವ್ಯಕ್ತಿೊಬ್ಬರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರದ ಚೆಕ್ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT