ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರಿನಿಂದ ಸ್ಪರ್ಧಿಸುವುದಿಲ್ಲ: ಶ್ರೀರಾಮುಲು

ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ, ಡಿಪೊಗೆ ಶಂಕುಸ್ಥಾಪನೆ ನೆರವೇರಿಸಿದ ಶ್ರೀರಾಮುಲು
Last Updated 11 ಫೆಬ್ರುವರಿ 2023, 19:04 IST
ಅಕ್ಷರ ಗಾತ್ರ

ಮೊಳಕಾಲ್ಮುರು: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಮೊಳಕಾಲ್ಮುರಿನಿಂದ ಸ್ಪರ್ಧೆ ಮಾಡುವುದಿಲ್ಲ. ಬದಲಾಗಿ ಬಳ್ಳಾರಿ ಜಿಲ್ಲೆಯಿಂದ ಸ್ಪರ್ಧೆ ಮಾಡಲು ನಿರ್ಣಯಿಸಿದ್ದೇನೆ’ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.

ಶನಿವಾರ ಇಲ್ಲಿ ಕೆಎಸ್ಆರ್‌ಟಿಸಿ ನೂತನ ಬಸ್ ನಿಲ್ದಾಣ ಮತ್ತು ಡಿಪೊ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

‘ಕಾಂಗ್ರೆಸ್ ನಾಯಕರು ಈಚೆಗೆ ಟೀಕೆ ಮಾಡಿರುವಂತೆ ನಾನು ಇಲ್ಲಿ ಅಭಿವೃದ್ಧಿ ಮಾಡಿಲ್ಲ ಎಂಬ ಭಯಕ್ಕೆ ಕ್ಷೇತ್ರ ಬಿಟ್ಟು ಹೋಗುತ್ತಿಲ್ಲ. ಮುಂದಿನ ಬಾರಿ ಸ್ಥಳೀಯರಿಗೆ ಅವಕಾಶ ಮಾಡಿಕೊಡಬೇಕು ಮತ್ತು ಸಕಾಲಕ್ಕೆ ಬಂದು ಹೋಗಲು ಕ್ಷೇತ್ರ ದೂರವಾಗುತ್ತದೆ ಎಂಬ ಕಾರಣಕ್ಕೆ ಬಿಟ್ಟು ಹೋಗುತ್ತಿದ್ದೇನೆ. ಹಿಂದೆ ಇಲ್ಲಿ ಕಾಂಗ್ರೆಸ್‌ನ 10 ಶಾಸಕರು ಮಾಡದಷ್ಟು ಅಭಿವೃದ್ಧಿಯನ್ನು ನಾನು ಮಾಡಿದ್ದೇನೆ. ಬಳ್ಳಾರಿಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬುದನ್ನು ಶೀಘ್ರ ಬಹಿರಂಗಪಡಿಸುತ್ತೇನೆ’ ಎಂದರು.

‘ಮೊಳಕಾಲ್ಮುರಿನಲ್ಲಿ ಬಸ್ ನಿಲ್ದಾಣ ಮತ್ತು ಡಿಪೊ ನಿರ್ಮಾಣ ಹಲವು ವರ್ಷಗಳ ಬೇಡಿಕೆಯಾಗಿತ್ತು. ಇಲ್ಲಿ ಸರ್ಕಾರಿ ಸ್ಥಳ ಲಭ್ಯವಿಲ್ಲದ ಕಾರಣ ಹಳೆ ತಾಲ್ಲೂಕು ಕಚೇರಿಯ ಸ್ಥಳವನ್ನು ಶ್ರಮಪಟ್ಟು ಕಂದಾಯ ಇಲಾಖೆಯಿಂದ ಸಾರಿಗೆ ಇಲಾಖೆಗೆ ಹಸ್ತಾಂತರಿಸಿಕೊಂಡು‌ ನಿರ್ಮಿಸಲಾಗುತ್ತಿದೆ. ಬಸ್ ನಿಲ್ದಾಣವನ್ನು 1.10 ಎಕರೆಯಲ್ಲಿ ₹ 5 ಕೋಟಿ ವೆಚ್ಚದಲ್ಲಿ ಮತ್ತು ಡಿಪೊ ಅನ್ನು 150 ‘ಎ’ ಹೆದ್ದಾರಿಯಲ್ಲಿನ ರಾಯಾಪುರ ಬಳಿ 6 ಎಕರೆ ವಿಸ್ತೀರ್ಣದಲ್ಲಿ ₹ 8 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ಒಂದು ವರ್ಷದಲ್ಲಿ ಎರಡೂ ಸೇವೆಗೆ ಲಭ್ಯವಾಗಲಿವೆ’ ಎಂದು ವಿವರಿಸಿದರು.

‘5 ವರ್ಷಗಳಲ್ಲಿ ನಾನು ತೆಗಳಿಕೆಗೆ ಬೆಲೆ ನೀಡದೆ ನನ್ನದೇ ಆದ ಶೈಲಿಯಲ್ಲಿ ಅಭಿವೃದ್ಧಿ ಮಾಡಿಕೊಂಡು ಬಂದಿದ್ದೇನೆ. 170 ದೇವಸ್ಥಾನಗಳಿಗೆ ನನ್ನ ಅನುದಾನ ನೀಡಿದ್ದೇನೆ. ₹ 640 ಕೋಟಿ ವೆಚ್ಚದಲ್ಲಿ 78 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ, ತುಂಗಭದ್ರಾ ಹಿನ್ನೀರು ಮೂಲಕ ಬಹುಗ್ರಾಮ ಯೋಜನೆ ಅಂತಿಮ ಹಂತದಲ್ಲಿದ್ದು, ಒಂದು ತಿಂಗಳಲ್ಲಿ ಕಾರ್ಯಾರಂಭವಾಗಲಿದೆ, ಪಟ್ಟಣದ ಮುಖ್ಯರಸ್ತೆ ವಿಸ್ತರಣೆಯೂ ನನ್ನ ಸಾಧನೆ’ ಎಂದರು.

‘ಕಷ್ಟಕಾಲದಲ್ಲಿ ಮೊಳಕಾಲ್ಮುರು ಕ್ಷೇತ್ರ ನನಗೆ ರಾಜಕೀಯ ಮರುಜನ್ಮ ನೀಡಿದೆ. ಬಳ್ಳಾರಿ ನನ್ನ ಜನ್ಮಭೂಮಿಯಾದರೆ, ಮೊಳಕಾಲ್ಮುರು ನನ್ನ ಕರ್ಮಭೂಮಿ. ನನ್ನ ಜೀವನದಲ್ಲಿ ಮೊಳಕಾಲ್ಮುರಿಗೆ ತೀರ್ಥಸ್ಥಳದಷ್ಟು ಗೌರವ ನೀಡುತ್ತೇನೆ. ನನ್ನ ಬಗ್ಗೆ ಕೆಲವರಿಗೆ ಅಪಪ್ರಚಾರ ಮಾಡಿಕೊಂಡು ಓಡಾಡುವುದು ಕಾಯಕವಾಗಿದ್ದು, ಇದರ ಮಧ್ಯೆಯೂ ಉಳಿಸಿದ್ದ ದೊಡ್ಡ ಕಾರ್ಯಗಳಿಗೆ ಚಾಲನೆ ನೀಡಿದ್ದು, ಇಲ್ಲಿನ ಕೆಲಸಗಳು ಸಮಾಧಾನ ತಂದಿವೆ’ ಎಂದು ಹೇಳಿದರು.

ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನೂಬ್‌ಕುಮಾರ್, ಸಾರಿಗೆ ನಿಗಮ ಉಪಾಧ್ಯಕ್ಷ ಮೋಹನ್ ಮೆಣಸಿನಕಾಯಿ, ನಿರ್ದೇಶಕರಾದ ಪಿ. ರುದ್ರೇಶ್, ಆರುಂಡಿ ನಾಗರಾಜ್, ರಾಜು ವಿಠಲಸ ಜರತಾರಘರ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ಟಿ. ರವಿಕುಮಾರ್, ಉಪಾಧ್ಯಕ್ಷ ಮಂಜಣ್ಣ, ಬಿಜೆಪಿ ಮುಖಂಡರಾದ ಪಟೇಲ್, ಜಿ.ಎಂ. ತಿಪ್ಪೇಸ್ವಾಮಿ, ಡಾ.ಪಿ.ಎಂ. ಮಂಜುನಾಥ್, ಜಯಪಾಲಯ್ಯ, ರಾಮರೆಡ್ಡಿ, ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್. ಹೆಬ್ಬಾಳ್, ಅಧಿಕಾರಿಗಳಾದ ಬಿ.ಜಿ. ಮಂಜುನಾಥ್, ಎಸ್.ಎಸ್. ನಿರಂಜನಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT