ಶುಕ್ರವಾರ, ಮಾರ್ಚ್ 24, 2023
22 °C

ಚಿತ್ರದುರ್ಗ: ಸೆ.12ಕ್ಕೆ ಹಿಂದೂ ಮಹಾಗಣಪತಿ ವಿಸರ್ಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಇಲ್ಲಿನ ಜಿಲ್ಲಾ ಕ್ರೀಡಾಂಗಣ ರಸ್ತೆಯಲ್ಲಿ ಸ್ಥಾಪಿಸಿರುವ ಹಿಂದೂ ಮಹಾಗಣಪತಿಯ ವಿಸರ್ಜನೆ ಸೆ.12ರಂದು ಸರಳವಾಗಿ ನೆರವೇರಲಿದೆ. ಸಮಿತಿಯ ಸದಸ್ಯರು ಹಾಗೂ ಕಾರ್ಯಕರ್ತರು ಮಾತ್ರ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಟಿ. ಬದರೀನಾಥ್ ತಿಳಿಸಿದರು.

‘ಆ.22ರಂದು ಸ್ಥಾಪನೆಯಾಗಿದ್ದ ಗಣೇಶಮೂರ್ತಿಯ ವಿಸರ್ಜನೆ 22ನೇ ದಿನದಂದು ನಡೆಯಲಿದೆ. ಕೊರೊನಾ ಸೋಂಕು ಇರುವ ಕಾರಣಕ್ಕೆ ಪ್ರತಿ ವರ್ಷದಂತೆ ಅದ್ದೂರಿ ಶೋಭಾಯಾತ್ರೆ ಇರುವುದಿಲ್ಲ. ಭಕ್ತಿ ಸಮರ್ಪಣೆ ಹಾಗೂ ಪೂಜಾ ಕೈಂಕರ್ಯಗಳಿಗೆ ನಿರ್ಬಂಧವಿಲ್ಲ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಅಂದು ಮಧ್ಯಾಹ್ನ 3ಕ್ಕೆ ಆರಂಭವಾಗುವ ಮೆರವಣಿಗೆಯಲ್ಲಿ ಆಹ್ವಾನಿತ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಸಂಜೆ 7.30ಕ್ಕೆ ಚಂದ್ರವಳ್ಳಿಯಲ್ಲಿ ವಿಸರ್ಜನೆ ನಡೆಯಲಿದೆ. ಪ್ರತಿ ವರ್ಷ ಶೋಭಾಯಾತ್ರೆ ತೆರಳುತ್ತಿದ್ದ ಮಾರ್ಗದಲ್ಲಿಯೇ ಮೆರವಣಿಗೆ ಸಾಗಲಿದೆ. ಗಾಂಧಿ ವೃತ್ತದಲ್ಲಿ ಮಾತ್ರ ಆರತಿಗೆ ಅವಕಾಶವಿದೆ. ಉಳಿದಂತೆ ಎಲ್ಲಿಯೂ ಗಣೇಶ ಮೂರ್ತಿ ಆಸೀನವಾಗಿರುವ ಪುಷ್ಪಾಲಂಕೃತ ರಥ ನಿಲುಗಡೆ ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಉತ್ಸವದ ಅಂಗವಾಗಿ ವೃತ್ತಗಳಿಗೆ ಅಲಂಕಾರ ಮಾಡಲಾಗುತ್ತದೆ. ಆದರೆ, ಮಾರ್ಗವನ್ನು ಪೂರ್ಣ ಸಿಂಗರಿಸುವುದಿಲ್ಲ. ಮೆರವಣಿಗೆ ಸಾಗುವ ಮಾರ್ಗದ ಅಂಗಡಿ ಮಾಲೀಕರು ಕಟ್ಟಡಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಿಕೊಳ್ಳಲಿದ್ದಾರೆ. ಸಾಮಾಜಿಕ ಜವಾಬ್ದಾರಿ ಇರುವುದರಿಂದ ಹೆಚ್ಚು ಜನರು ಸೇರದಂತೆ ಎಚ್ಚರ ವಹಿಸಲಾಗಿದೆ. ಮೆರವಣಿಗೆಯ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಸವಾಲು ಎದುರಿಸಿದ್ದೇವೆ’

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದ ದಿನಗಳಲ್ಲಿ ಹಿಂದೂ ಮಹಾಗಣಪತಿ ಉತ್ಸವನ್ನು ಜನರ ಬಳಿಗೆ ಕೊಂಡೊಯ್ಯವ ಅವಕಾಶ ಕೈತಪ್ಪಿತೆ ಎಂಬ ಆತಂಕ ಕಾಡುತ್ತಿತ್ತು. ಹೊಸ ಬದಲಾವಣೆಯೊಂದಿಗೆ ಸವಾಲು ಎದುರಿಸಿದ್ದೇವೆ ಎಂದು ಹಿಂದೂ ಮಹಾಗಣಪತಿ ಸಂಚಾಲಕ ಪ್ರಭಂಜನ್ ತಿಳಿಸಿದರು.

‘ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳು ಪ್ರತಿ ವರ್ಷದಂತೆ ನಡೆದಿವೆ. ರಂಗೋಲಿ ಸ್ಪರ್ಧೆ ಕೂಡ ಆನ್‌ಲೈನ್‌ ಮೂಲಕ ಆಯೋಜಿಸಿದ್ದೆವು. ಸರ್ಕಾರದ ಎಲ್ಲ ನಿಯಮಗಳಿಗೆ ಅನುಸಾರವಾಗಿ ಉತ್ಸವ ನಡೆಸಿದ್ದೇವೆ. ಧರ್ಮಸ್ಥಳದ ವೀರೇಂದ್ರ ಹೆಗಡೆ ಹಾಗೂ ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಸಂದೇಶ ಕಳುಹಿಸಿದ್ದಾರೆ’ ಎಂದರು.

ವಿಎಚ್‍ಪಿ ನಗರ ಘಟಕದ ಅಧ್ಯಕ್ಷ ಶ್ರೀನಿವಾಸ್, ಬಜರಂಗದಳ ಜಿಲ್ಲಾ ಘಟಕದ ಸಂಚಾಲಕ ಪಿ. ಸಂದೀಪ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು