ಭಾನುವಾರ, ಏಪ್ರಿಲ್ 2, 2023
32 °C
ರಸ್ತೆ ಉಬ್ಬುಗಳನ್ನು ನಿರ್ಮಿಸಲು ಒತ್ತಾಯ

ಅಪಘಾತ ಹೆಚ್ಚಳ: ಅದಿರು ಸಾಗಿಸುವ ಲಾರಿಗಳನ್ನು ತಡೆದು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಳ್ಳಕೆರೆ: ನಗರದ ವಾಲ್ಮೀಕಿ ವೃತ್ತದ ಬಳಿ ಗುರುವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅಪರಿಚಿತ ಮಹಿಳೆ ಮೃತಪಟ್ಟಿದ್ದಾರೆ. ಹೀಗಾಗಿ ಆಕ್ರೋಶಗೊಂಡ ನಾಗರಿಕರು ಸಂಚರಿಸುತ್ತಿದ್ದ ಅದಿರು ಲಾರಿಗಳನ್ನು ದಿಢೀರನೆ ತಡೆದು ನಡೆಸಿದ ಪ್ರತಿಭಟನೆಗೆ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಸಾಥ್ ನೀಡಿದರು.

ನಂತರ ವಾಹನಗಳು ಅತಿ ವೇಗವಾಗಿ ಚಲಿಸುವುದನ್ನು ನಿಯಂತ್ರಿಸಲು ನಾಗರಿಕರು ಜೆಸಿಬಿ ಯಂತ್ರವನ್ನು ತರಿಸಿ ರಸ್ತೆಯಲ್ಲಿ ಉಬ್ಬು ನಿರ್ಮಿಸುವ ಮೂಲಕ ಅದಿರು ಲಾರಿಗಳನ್ನು ತಡೆದು ಇನ್ನು ಮುಂದೆ ನಗರದ ಹೊರ ವಲಯದಲ್ಲಿ ಲಾರಿಗಳನ್ನು ಓಡಿಸಬೇಕು ಎಂದು ಚಾಲಕರಿಗೆ ಎಚ್ಚರಿಕೆ ನೀಡಿದರು.

ನಾಗರಿಕ ಮಂಜುನಾಥ್, ‘ನಗರದಲ್ಲಿ ಅದಿರು ಲಾರಿಗಳು ಸಂಚರಿಸುತ್ತಿರುವುದರಿಂದ ನಗರದಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಮೊನ್ನೆ ತಾನೆ ಮಂಗಳವಾರ ಇದೇ ಸ್ಥಳದಲ್ಲಿ 13 ವರ್ಷದ ಬಾಲಕ ಅದಿರು ಲಾರಿಗೆ ಸಿಕ್ಕಿ ಮೃತಪಟ್ಟಿದ್ದಾನೆ. ಈ ದಿನವೂ ಅಪರಿಚಿತ ಮಹಿಳೆಗೆ ಲಾರಿ ಡಿಕ್ಕಿ ಹೊಡೆದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಜೆ. ವೆಂಕಟೇಶ್, ‘ನಗರದ ಮುಖ್ಯರಸ್ತೆಗಳು ವಿಶಾಲವಾಗಿರುವ ಕಾರಣ ಚಾಲಕರು ತಮ್ಮ ವಾಹನಗಳನ್ನು ಬೇಕಾಬಿಟ್ಟಿ ಓಡಿಸುತ್ತಾರೆ. ಅತಿ ವೇಗವಾಗಿ ಚಲಿಸುತ್ತಿರುವ ವಾಹನಗಳಿಗೆ ಬ್ರೇಕ್ ಹಾಕಲು ನಗರದ ಮುಖ್ಯರಸ್ತೆಯ ಮಧ್ಯೆ ಅಲ್ಲಲ್ಲಿ ಒಂದೆರಡು ಕಡೆ ಉಬ್ಬುಗಳನ್ನು ನಿರ್ಮಾಣ ಮಾಡಿಸಬೇಕು’ ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು.

ರಾಜಣ್ಣ, ತಿಪ್ಪೇಸ್ವಾಮಿ, ಮಹಾಂತೇಶ್, ಸುಬಾನುಲ್ಲಾ, ಸಾಗರ್, ರಜನಿಕಾಂತ್, ಸುಪ್ರೀತ, ರಂಗಸ್ವಾಮಿ, ವಸಂತ್, ಕುಮಾರ್, ಬಸವರಾಜ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.