ಶುಕ್ರವಾರ, ಆಗಸ್ಟ್ 19, 2022
25 °C

ಭದ್ರೆ ನೀರು ವೀಕ್ಷಿಸಲು ಹೆಚ್ಚಿದ ಕುತೂಹಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ಹೆಬ್ಬೂರು ಸಮೀಪದ ಹಳ್ಳದ ಮಾರ್ಗವಾಗಿ ವೇದಾವತಿ ನದಿ ಮೂಲಕ ಹರಿಯಲಿರುವ ಭದ್ರಾ ನದಿಯ ನೀರನ್ನು ವೀಕ್ಷಿಸಲು ತಾಲ್ಲೂಕಿನ ಜನರಿಗೆ ಕುತೂಹಲ ಹೆಚ್ಚಾಗಿದೆ.

ವೇದಾವತಿ ನದಿ ಅಂಚಿನಲ್ಲಿ ಬರುವ ಕೆಲವು ಗ್ರಾಮಗಳ ಜನರು ಸೋಮವಾರ ಆಗಾಗ ಕಾತುರದಿಂದ ಭದ್ರಾ ನೀರು ಬಂದಿರುವುದನ್ನು ನೋಡಲು ನದಿಯ ಹತ್ತಿರ ಹೋಗುತ್ತಿದ್ದರು. ದೂರದ ಊರಿನವರು, ಸಂಬಂಧಿಕರು ದೂರವಾಣಿ ಕರೆ ಮಾಡಿ ನೀರು ಹರಿದು ಬಂದಿದೆಯೋ, ಇಲ್ಲವೋ ಎಂಬುದನ್ನು ತಿಳಿದುಕೊಳ್ಳುತ್ತಿದ್ದರು.

ವಾಣಿವಿಲಾಸ ಸಾಗರ ಜಲಾಶಯಕ್ಕೆ ಭದ್ರಾ ನೀರು ಹರಿಸಲು ಅಜ್ಜಂಪುರ ಸಮೀಪದ ಬೆಟ್ಟದಾವರೆಕೆರೆ ಬಳಿಯ ಪಂಪ್‌ವೊಂದನ್ನು ಚಾಲನೆ ಮಾಡಲಾಗಿದೆ. ಹೆಬ್ಬೂರು, ಬೇಗೂರು ಗ್ರಾಮದ ಹಳ್ಳದ ಮಾರ್ಗವಾಗಿ ಹರಿಯುತ್ತಿರುವ ನೀರು ಸೋಮವಾರ ಮುಂಜಾನೆ ಚಿಕ್ಕಬಳ್ಳೇಕೆರೆ–ಕಲ್ಕೆರೆ ಕೆರೆಯನ್ನು ತಲುಪಿದೆ.

ದೊಡ್ಡದಾದ ಈ ಕೆರೆ ಮಂಗಳವಾರ ಬೆಳಿಗ್ಗೆ ಹೊತ್ತಿಗೆ ಭರ್ತಿಯಾಗಿ ಕೋಡಿ ಮೂಲಕ ನೀರು ಮುಂದೆ ಹರಿಯಲಿದೆ. ನಂತರ ಚೌಳಹಿರಿಯೂರು ಸಮೀಪದ ಹಳ್ಳದ ಮಾರ್ಗವಾಗಿ ತಾಲ್ಲೂಕಿನ ಗಡಿಗ್ರಾಮವಾದ ಕೊರಟಿಕೆರೆಗೆ ಮಂಗಳವಾರ ನೀರು ತಲುಪಬಹುದು. ನಂತರದಲ್ಲಿ ಕೊರಟಿಕೆರೆ, ಬಲ್ಲಾಳಸಮುದ್ರ, ಕಾರೇಹಳ್ಳಿ ಬ್ಯಾರೇಜ್‌ಗಳ ಮೂಲಕ ಭದ್ರಾ ನದಿ ನೀರು ಮಂಗಳವಾರ ರಾತ್ರಿ ಅಥವಾ ಬುಧವಾರದ ಹೊತ್ತಿಗೆ ವಾಣಿವಿಲಾಸ ಸಾಗರ ಜಲಾಶಯದ ಹಿನ್ನೀರು ಸೇರುವ ಸೇರಬಹುದು ಎಂಬ ನಿರೀಕ್ಷೆ ರೈತರದ್ದು.

ಬೆಟ್ಟದಾವರಕೆರೆ ಬಳಿ ಒಂದೇ ಪಂಪ್‌ ಚಾಲನೆ ಮಾಡಿರುವುದರಿಂದ ಹೆಬ್ಬೂರು, ಬೇಗೂರು ಹಳ್ಳದಲ್ಲಿ ಭದ್ರಾ ನೀರು ಕಡಿಮೆ ಪ್ರಮಾಣದಲ್ಲಿ ಹರಿಯುತ್ತಿದೆ. ವೇದಾವತಿ ನದಿ ಪಾತ್ರದಲ್ಲಿ ಬರುವ ಕೆರೆ ಹಾಗೂ ಚೆಕ್‌ಡ್ಯಾಂಗಳು ಭರ್ತಿಯಾಗಬೇಕಿದೆ. ಹಾಗಾಗಿ ಬಯಲು ಸೀಮೆಯ ಜಿಲ್ಲೆಯ ವಾಣಿವಿಲಾಸ ಸಾಗರ ಜಲಾಶಯಕ್ಕೆ ಈ ಬಾರಿ ಹೆಚ್ಚು ನೀರು ಹರಿಸಲು ಎರಡು ಪಂಪ್‌ಗಳನ್ನು ಚಾಲನೆ ಮಾಡಬೇಕು ಎಂಬುದು ತಾಲ್ಲೂಕಿನ ಜನರ ಒತ್ತಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು