ಮಳೆಯ ಸಿಂಚನದಲ್ಲಿ ಕಳೆಗಟ್ಟಿದ ಸಂಭ್ರಮ

7
72ನೇ ಸ್ವಾತಂತ್ರ್ಯ ದಿನಾಚರಣೆ, ಧ್ವಜಾರೋಹಣ ನೆರವೇರಿಸಿದ ಸಚಿವ ವೆಂಕಟರಮಣಪ್ಪ

ಮಳೆಯ ಸಿಂಚನದಲ್ಲಿ ಕಳೆಗಟ್ಟಿದ ಸಂಭ್ರಮ

Published:
Updated:
Deccan Herald

ಚಿತ್ರದುರ್ಗ: ಸೂರ್ಯನ ಕಿರಣಗಳು ಭೂಮಿಯನ್ನು ಸ್ಪರ್ಶಿಸದಂತೆ ಆಗಸದಲ್ಲಿ ಕವಿದಿದ್ದ ಮೋಡಗಳು ಆಗಾಗ ಮಳೆ ಸುರಿಸಿ ಮುಂದೆ ಚಲಿಸುತ್ತಿದ್ದವು. ವರುಣನ ಬಿಡುವು ನೋಡಿಕೊಂಡು ವಿಜ್ಞಾನ ಕಾಲೇಜು ಮೈದಾನಕ್ಕೆ ಬಂದಿದ್ದವರು ಧ್ವಜಾರೋಹಣಕ್ಕಾಗಿ ಕಾತುರರಾಗಿದ್ದರು. ತ್ರಿವರ್ಣ ಧ್ವಜ ಹಾರುತ್ತಿದ್ದಂತೆ ದೇಶಭಕ್ತಿಯು ತೊರೆಯಾಗಿ ಹರಿಯಲಾರಂಭಿಸಿತು.

72ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತ ಬುಧವಾರ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮ ರೋಮಾಂಚನಕಾರಿ ಸನ್ನಿವೇಶಗಳಿಗೆ ಸಾಕ್ಷಿಯಾಯಿತು. ಮಳೆಯನ್ನು ಲೆಕ್ಕಿಸದೆ ಮಕ್ಕಳು ನಡೆಸಿಕೊಟ್ಟ ನೃತ್ಯ ಹಾಗೂ ಆಕರ್ಷಕ ಪಥಸಂಚಲನಕ್ಕೆ ಗಣ್ಯರು ತಲೆದೂಗಿದರು. ಮೈದಾನದಲ್ಲಿ ನೆರೆದಿದ್ದ ಸಾವಿರಕ್ಕೂ ಹೆಚ್ಚು ಅಭಿಮಾನಿಗಳಲ್ಲಿ ಇದು ರಾಷ್ಟ್ರಪ್ರೇಮ ಪ್ರಜ್ಞೆಯನ್ನು ಜಾಗೃತಗೊಳಿಸಿತು.

ಆಕರ್ಷಕ ಪಥಸಂಚಲನ:

ನಸುಕಿನಿಂದಲೇ ಮಳೆ ಆರಂಭವಾಗಿದ್ದರೂ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದ ಮಕ್ಕಳ ಉತ್ಸಾಹಕ್ಕೆ ತಣ್ಣೀರು ಎರೆಚಲಿಲ್ಲ. ದೇಶಪ್ರೇಮವನ್ನು ಬಿಂಬಿಸುವ ಪೋಷಾಕಿನಲ್ಲಿ ಮೈದಾನಕ್ಕೆ ಧಾವಿಸಿದ ವಿವಿಧ ಶಾಲೆಯ ವಿದ್ಯಾರ್ಥಿಗಳು ನಿಗದಿತ ಸ್ಥಳದಲ್ಲಿ ಶಿಸ್ತುಬದ್ಧವಾಗಿ ನಿಂತುಕೊಂಡರು. ಬಹುತೇಕರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದಿದ್ದರಿಂದ ಮೈದಾನ ವಿಶೇಷವಾಗಿ ಕಂಗೊಳಿಸುತ್ತಿತ್ತು.

ಪರೇಡ್‌ ಕಮಾಂಡರ್‌ ಎಚ್‌.ಬಿ.ಸೋಮಶೇಖರಪ್ಪ ಅವರ ನೇತೃತ್ವದಲ್ಲಿ ಪಥ ಸಂಚಲನ ಆಕರ್ಷಕವಾಗಿ ನಡೆಯಿತು. ಬ್ಯಾಂಡ್‌ ಮಾಸ್ಟರ್ ಪಾಂಡುರಂಗ ನೇತೃತ್ವದಲ್ಲಿ ಪೊಲೀಸ್‌ ಬ್ಯಾಂಡ್‌ ನುಡಿಸುತ್ತಿದ್ದ ಸುಶ್ರಾವ್ಯ ಸಂಗೀತಕ್ಕೆ ತಕ್ಕಂತೆ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು. ಪೊಲೀಸ್‌್ ಇಲಾಖೆ, ಗೃಹ ರಕ್ಷಕ ದಳ, ಎನ್‌ಸಿಸಿ, ಅರಣ್ಯ ಇಲಾಖೆ, ಸ್ಕೌಟ್‌ ಅಂಡ್‌ ಗೈಡ್ಸ್‌ ಸೇರಿ 38 ತಂಡಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದವು.

ಸ್ಫೂರ್ತಿ ತುಂಬಿದ ನೃತ್ಯ:

ಧ್ವಜಾರೋಹಣದ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನಿಜಕ್ಕೂ ದೇಶಭಕ್ತಿಯನ್ನು ಕೆರಳಿಸಿತು. ಸಾಂಸ್ಕೃತಿಕ ಶಕ್ತಿಯನ್ನು ಪ್ರದರ್ಶಿಸುತ್ತಲೇ ಸವಾಲುಗಳನ್ನು ಮೆಟ್ಟಿನಿಲ್ಲುವ ಸಾಮರ್ಥ್ಯವಿದೆ ಎಂಬ ಸಂದೇಶವನ್ನು ಸಾರಿತು. ನೂರಾರು ಮಕ್ಕಳು ಏಕಕಾಲಕ್ಕೆ ನಡೆಸಿಕೊಟ್ಟ ನೃತ್ಯಕ್ಕೆ ರೋಮಾಂಚನಗೊಂಡ ಸಾರ್ವಜನಿಕರು ಚಪ್ಪಾಳೆಯ ಮಳೆ ಸುರಿಸಿ ಹುರಿದುಂಬಿಸಿದರು.

‘ಭಾರತಾಂಬೆ ನಿನ್ನ ಜನುಮದಿನ..’ ಹಾಡಿಗೆ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಹೆಜ್ಜೆಹಾಕಿದರು. ತ್ರಿವರ್ಣ ಧ್ವಜ ಹಿಡಿದು ನಿಂತಿದ್ದ ಭಾರತಾಂಬೆಯ ಸುತ್ತ ಕುಣಿಯುತ್ತ ಸಂಭ್ರಮಿಸಿದರು. ಹಿಂದಿ ಸಿನಿಮಾದ ದೇಶಭಕ್ತಿ ಗೀತೆಗಳಿಗೆ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ನೃತ್ಯ ಪ್ರದರ್ಶಿಸಿದರು. ‘ವಂದೇ ಮಾತರಂ...’ ‘ಏ ಮೇರಾ ಇಂಡಿಯಾ...’ ಹಾಡುಗಳಿಗೆ ಹಾಕಿದ ಹೆಜ್ಜೆಗಳು ಪ್ರೇಕ್ಷಕರನ್ನು ಮೂಕವಿಸ್ಮಯಗೊಳಿಸಿದವು.

ದೇಹಕ್ಕೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣವನ್ನು ಹಚ್ಚಿಕೊಂಡಿದ್ದ ಸರ್ಕಾರಿ ಕೋಟೆ ಪ್ರೌಢಶಾಲೆಯ ವಿದ್ಯಾರ್ಥಿಗಳು ತ್ರಿವರ್ಣ ಧ್ವಜದಂತೆ ಕಂಗೊಳಿಸುತ್ತಿದ್ದರು. ಕೆಸರು ಗದ್ದೆಯಂತಾದ ಮೈದಾನದಲ್ಲಿ ಮಲಗಿ, ಕುಳಿತು ವಿವಿಧ ಶೈಲಿಯ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ‘ರಘುಪತಿ ರಾಘವ ರಾಜಾರಾಮ್‌...’ ಹಾಡಿಗೆ ಹೆಜ್ಜೆ ಹಾಕುತ್ತಲೇ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಬಣ್ಣ ತುಂಬಿದಾಗಿ ಎಲ್ಲೆಡೆ ಹರ್ಷೋದ್ಗಾರ ಮೇಲೆದ್ದಿತು.

‘ವಿಶ್ವ ವಿನೂತನ ವಿದ್ಯಾ ಚೇತನ...’ ಹಾಡಿಗೆ ನೃತ್ಯ ಪ್ರದರ್ಶಿಸಿದ ವಾಸವಿ ವಿದ್ಯಾಸಂಸ್ಥೆಯ ಮಕ್ಕಳು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿದರು. ನೇಗಿಲು ಹಿಡಿದ ರೈತ, ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣ, ಅಕ್ಕಮಹಾದೇವಿ ಅವರನ್ನು ಪರಿಚಯಿಸಿದರು.

ಬೀಜದುಂಡೆಯನ್ನು ಮಕ್ಕಳಿಗೆ ನೀಡುವ ಮೂಲಕ ಸಚಿವ ವೆಂಕಟರಮಣಪ್ಪ ಅವರು ಅರಣ್ಯ ಇಲಾಖೆಯ ‘ಹಸಿರು ಕರ್ನಾಟಕ’ಕ್ಕೆ ಚಾಲನೆ ನೀಡಿದರು. ಸಂಸದ ಬಿ.ಎನ್‌.ಚಂದ್ರಪ್ಪ, ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌, ನಗರಸಭೆ ಅಧ್ಯಕ್ಷ ಎಚ್‌.ತಿಮ್ಮಣ್ಣ, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ್‌ ಎಂ.ಜೋಶಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್‌.ರವೀಂದ್ರ, ಪೌರಾಯುಕ್ತ ಚಂದ್ರಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !