ಶುಕ್ರವಾರ, ಸೆಪ್ಟೆಂಬರ್ 17, 2021
24 °C
ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಭಾಷಣದಲ್ಲಿ ಉಲ್ಲೇಖ

ಗಗನಯಾತ್ರಿ ತರಬೇತಿ ಕೇಂದ್ರ ಆರಂಭ: ಬಿ.ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಬಾಹ್ಯಾಕಾಶ ಹಾಗೂ ರಕ್ಷಣೆಗೆ ಸಂಬಂಧಿಸಿದ ಸಂಸ್ಥೆಗಳಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಗಗನಯಾತ್ರಿಗಳ ತರಬೇತಿ ಕೇಂದ್ರವೂ ಆರಂಭವಾಗಲಿದೆ. ನಾಡಿನ ಯುವ ಸಮೂಹಕ್ಕೆ ಇದು ಸ್ಫೂರ್ತಿ ತುಂಬಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ 75ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದ ಅವರು, ‘ನೇರ ರೈಲು ಮಾರ್ಗ, ನೀರಾವರಿ, ವೈದ್ಯಕೀಯ ಕಾಲೇಜು ಹಾಗೂ ಕೈಗಾರಿಕೆ ನೆಲೆಗೊಳ್ಳುವಂತೆ ಪ್ರೋತ್ಸಾಹ ನೀಡುವ ಕ್ರಮಗಳಿಗೆ ಸರ್ಕಾರ ಬದ್ಧವಾಗಿದೆ. ಜಿಲ್ಲೆಯ ಜನರ ಆಶೋತ್ತರಗಳನ್ನು ಈಡೇರಿಸಲು ಶ್ರಮಿಸಲಿದೆ’ ಎಂದರು.

‘ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ಸಿಗುವ ಕಾಲ ಸನ್ನಿಹಿತವಾಗಿದೆ. ಈ ಯೋಜನೆಯಿಂದ ಜಿಲ್ಲೆಯ 1.54 ಲಕ್ಷ ಹೆಕ್ಟೇರ್ ಪ್ರದೇಶ ಹನಿ ನೀರಾವರಿಗೆ ಒಳಪಡಲಿದೆ. 204 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಕೋವಿಡ್ ಕಷ್ಟ ಕಾಲದಲ್ಲೂ ಭದ್ರಾ ಮೇಲ್ದಂಡೆ ಹಾಗೂ ತುಂಗಾಭದ್ರಾ ಹಿನ್ನೀರು ಕುಡಿಯುವ ನೀರಿನ ಯೋಜನೆಗಳನ್ನು ಕೈಬಿಟ್ಟಿಲ್ಲ’ ಎಂದು ಹೇಳಿದರು.

‘ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಲ್ಲಿ ಐದು ವರ್ಷಗಳಲ್ಲಿ ₹ 249 ಕೋಟಿ ಸಂಗ್ರಹವಾಗಿದೆ. ಇದರಲ್ಲಿ ₹ 92 ಕೋಟಿಯನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ. ಕೋವಿಡ್ ನಿಯಂತ್ರಣಕ್ಕಾಗಿ ಮೀಸಲಿಟ್ಟ ₹ 36 ಕೋಟಿಯಲ್ಲಿ ₹ 29 ಕೋಟಿ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಿದೆ’ ಎಂದು ಮನವಿ ಮಾಡಿದರು.

‘ಒಂದೆಡೆ ಕೋವಿಡ್ ಮೂರನೇ ಅಲೆಯ ಸವಾಲು, ಮತ್ತೊಂದೆಡೆ ಭೀಕರ ಪ್ರವಾಹ ಜನರನ್ನು ಸಂಕಷ್ಟಕ್ಕೆ ದೂಡಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಜನರೊಂದಿಗೆ ನಿಂತಿದೆ. ಜನರ ಸೇವೆಯೇ ಸರ್ಕಾರದ ಗುರಿಯಾಗಿದೆ. ಕೃಷಿ, ವಿಜ್ಞಾನ, ತಂತ್ರಜ್ಞಾನ, ಆರೋಗ್ಯ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಭಾರತೀಯರು ಸಾಧನೆ ಮಾಡುತ್ತಿದ್ದಾರೆ’ ಎಂದರು.

‘ರೈತರ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ಸರ್ಕಾರ ವಿದ್ಯಾರ್ಥಿ ವೇತನ ನೀಡುವ ಹೊಸ ಯೋಜನೆ ರೂಪಿಸಿದೆ. ಪರಿಶಿಷ್ಟ ಪಂಗಡದ ಜನರ ಬಹುದಿನಗಳ ಬೇಡಿಕೆಯಾದ ಪ್ರತ್ಯೇಕ ಸಚಿವಾಲಯ ಸ್ಥಾಪನೆಯಾಗಿದೆ. ಸಂಧ್ಯಾ ಸುರಕ್ಷಾ ವೇತನವನ್ನು ₹1,200ಕ್ಕೆ, ವಿಧವಾ ಹಾಗೂ ಅಂಗವಿಕಲರ ಮಾಸಾಶನವನ್ನು ₹ 800ಕ್ಕೆ ಹೆಚ್ಚಿಸಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ₹ 10 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ’ ಎಂದು ಹೇಳಿದರು.

ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ಡಿವೈಎಸ್‌ಪಿ ಜಿ.ಎಂ.ತಿಪ್ಪೇಸ್ವಾಮಿ ನೇತೃತ್ವದಲ್ಲಿ ಆಕರ್ಷಕ ಪರೇಡ್‌ ನಡೆಯಿತು. ಸಶಸ್ತ್ರ ಮೀಸಲು ಪಡೆ ತುಕಡಿ, ನಾಗರಿಕ ಪೊಲೀಸ್ ತುಕಡಿ, ಮಹಿಳಾ ಪೊಲೀಸ್ ತುಕಡಿ, ಗೃಹ ರಕ್ಷಕ ದಳ, ಅಬಕಾರಿ ಇಲಾಖೆ ತುಕಡಿ, ಅರಣ್ಯ ಇಲಾಖೆ ತುಕಡಿ ಹಾಗೂ ಪೊಲೀಸ್ ಬ್ಯಾಂಡ್ ತಂಡ ಮತ್ತು ಸೇವಾದಳದ ತಂಡದವರಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಕೋವಿಡ್‌ ಕಾರಣಕ್ಕೆ ಸ್ವಾತಂತ್ರ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು.

ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಬದರಿನಾಥ್, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಗಾವಿ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು