ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಇಂದಿರಾ ಕ್ಯಾಂಟೀನ್‌ಗೆ ಅನುದಾನದ ಕೊರತೆ

Last Updated 28 ನವೆಂಬರ್ 2022, 4:38 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಡವರಿಗೆ ಕಡಿಮೆ ದರದಲ್ಲಿ ಊಟ ಹಾಗೂ ಉಪಾಹಾರ ಒದಗಿಸುವ ಉದ್ದೇಶದಿಂದ ಸರ್ಕಾರ ಆರಂಭಿಸಿರುವ ‘ಇಂದಿರಾ ಕ್ಯಾಂಟೀನ್‌’ಗಳಿಗೆ ಅನುದಾನದ ಕೊರತೆ ಎದುರಾಗಿದೆ. ಬಾಕಿ ಇರುವ ಸುಮಾರು ₹ 1 ಕೋಟಿ ಅನುದಾನ ಬಿಡುಗಡೆಗೆ ಜಿಲ್ಲಾಡಳಿತ ಸರ್ಕಾರವನ್ನು ಕೋರಿಕೊಂಡಿದೆ.

ಜಿಲ್ಲೆಗೆ ಎಂಟು ‘ಇಂದಿರಾ ಕ್ಯಾಂಟೀನ್‌’ ಮಂಜೂರಾಗಿವೆ. ಈ ಪೈಕಿ ಆರು ಕ್ಯಾಂಟೀನ್‌ ಕಾರ್ಯಾರಂಭವಾಗಿವೆ. ಸಾರಿಗೆ ಸಚಿವ ಬಿ.ಶ್ರೀರಾಮುಲು ಪ್ರತಿನಿಧಿಸುವ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಎರಡು ಕ್ಯಾಂಟೀನ್‌ಗೆ ಇನ್ನೂ ಕಟ್ಟಡ ಕೂಡ ನಿರ್ಮಾಣವಾಗಿಲ್ಲ. ಮೊಳಕಾಲ್ಮುರು ಹಾಗೂ ನಾಯಕನಹಟ್ಟಿಯಲ್ಲಿ ಕ್ಯಾಂಟೀನ್‌ ಆರಂಭ ವಿಳಂಬವಾಗುತ್ತಿದೆ. ಚಿತ್ರದುರ್ಗದ ಎರಡು ಕ್ಯಾಂಟೀನ್‌ ಸುಸೂತ್ರವಾಗಿ ನಡೆಯುತ್ತಿವೆ. ತಾಲ್ಲೂಕು ಕೇಂದ್ರದ ಕ್ಯಾಂಟೀನ್‌ಗೆ ಆಗಾಗ ಅನುದಾನದ ಸಮಸ್ಯೆ ಕಾಡಿದೆ.

ಹಿರಿಯೂರು ತಾಲ್ಲೂಕು ಕೇಂದ್ರದಲ್ಲಿರುವ ಕ್ಯಾಂಟೀನ್‌ ಈ ಹಿಂದೆ ಕೆಲ ದಿನ ಸ್ಥಗಿತಗೊಂಡಿತ್ತು. ಹೊಳಲ್ಕೆರೆಯ ಕ್ಯಾಂಟೀನ್‌ ಕೂಡ ಇಂತಹದೇ ಸಮಸ್ಯೆ ಎದುರಿಸಿದೆ. ಚಳ್ಳಕೆರೆ ಹಾಗೂ ಹೊಸದುರ್ಗದ ಕ್ಯಾಂಟೀನ್‌ಗೆ ತೊಂದರೆ ಉಂಟಾಗಿಲ್ಲ. ಆಹಾರದ ಗುಣಮಟ್ಟ, ರುಚಿ, ಸ್ವಚ್ಛತೆ ಹಾಗೂ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಹಲವೆಡೆ ಗ್ರಾಹಕರಿಂದ ದೂರು ಕೇಳಿಬಂದಿವೆ.

ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ‘ಇಂದಿರಾ ಕ್ಯಾಂಟೀನ್‌’ ಆರಂಭಿಸಲಾಯಿತು. ತಮಿಳುನಾಡಿನ ‘ಅಮ್ಮ ಕ್ಯಾಂಟೀನ್‌’ ಮಾದರಿಯಲ್ಲಿ ಸ್ಥಾಪನೆಯಾದ ಈ ಕ್ಯಾಂಟೀನ್‌ಗೆ ಕರ್ನಾಟಕದಲ್ಲಿ ‘ಇಂದಿರಾ’ ಹೆಸರು ಇರಿಸಲಾಯಿತು. ದಿನದ ಮೂರು ಹೊತ್ತು ಊಟ, ಉಪಾಹಾರವನ್ನು ಕಡಿಮೆ ದರದಲ್ಲಿ ಒದಗಿಸುವುದು ಇದರ ಉದ್ದೇಶ. ಬೆಳಗಿನ ಉಪಹಾರಕ್ಕೆ ₹ 5 ಹಾಗೂ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ₹ 10 ಬೆಲೆ ನಿಗದಿ ಮಾಡಲಾಗಿದೆ.

ಚಿತ್ರದುರ್ಗದ ಪ್ರವಾಸಿ ಮಂದಿರ ಹಾಗೂ ಯೂನಿಯನ್‌ ಉದ್ಯಾನದಲ್ಲಿರುವ ಕ್ಯಾಂಟೀನ್‌ಗಳನ್ನು ‘ಗುತ್ತಿ ಚನ್ನಬಸವೇಶ್ವರ’ ಎಂಬ ಸಂಸ್ಥೆ ಗುತ್ತಿಗೆ ಪಡೆದಿದೆ. ತಾಲ್ಲೂಕಿನ ಇತರ ಕ್ಯಾಂಟೀನ್‌ಗಳನ್ನು ‘ರಿವಾರ್ಡ್ಸ್‌’ ಎಂಬ ಕಂಪನಿ ಗುತ್ತಿಗೆ ಪಡೆದಿದೆ. ನಿಗದಿತ ಪ್ರಮಾಣದ ಉಪಾಹಾರ, ಊಟ, ನೀರು ಒದಗಿಸುವುದು ಗುತ್ತಿಗೆದಾರರ ಜವಾಬ್ದಾರಿ.
ನಿರ್ವಹಣಾ ವೆಚ್ಚ, ಊಟ, ತಿಂಡಿಗೆ ಸರ್ಕಾರ ಸಹಾಯಧನ ನೀಡುತ್ತದೆ. ಈ ಸಹಾಯಧನ ಬಿಡುಗಡೆಯಲ್ಲಿ ಇತ್ತೀಚೆಗೆ ವ್ಯತ್ಯಾಸ ಉಂಟಾಗಿದ್ದರಿಂದ ಇಂದಿರಾ ಕ್ಯಾಂಟೀನ್‌ ಆಕರ್ಷಣೆ ಕಳೆದುಕೊಳ್ಳತೊಡಗಿವೆ.

ನಿತ್ಯ ಬೆಳಿಗ್ಗೆ 7.30ರಿಂದ ಉಪಾಹಾರ, ಮಧ್ಯಾಹ್ನ 12ಕ್ಕೆ ಊಟ ಹಾಗೂ ಸಂಜೆ 7ರಿಂದ ರಾತ್ರಿ ಊಟದ ಸಮಯ ನಿಗದಿ ಮಾಡಲಾಗಿದೆ. ನಿತ್ಯ ನೀಡುವ ಉಪಾಹಾರ ಹಾಗೂ ಊಟದ ಮೆನುವನ್ನು ಕ್ಯಾಂಟೀನ್‌ನಲ್ಲಿ ಭಿತ್ತರಿಸಲಾಗಿದೆ. ಉಪಾಹಾರಕ್ಕೆ ಇಡ್ಲಿ, ‌ಪುಳಿಯೊಗರೆ, ಪೊಂಗಲ್‌, ತರಕಾರಿ ಪಲಾವ್‌, ಖಾರಾ ಬಾತ್‌, ಚಿತ್ರನ್ನ ಸೇರಿ ಇತರ ತಿಂಡಿಗಳನ್ನು ನಿಗದಿಪಡಿಸಲಾಗಿದೆ.

ಚಿತ್ರದುರ್ಗದ ಗ್ರಾಹಕರು ಪೊಂಗಲ್‌ ಇಷ್ಟಪಡದ ಕಾರಣಕ್ಕೆ ಪರ್ಯಾಯ ತಿಂಡಿಯನ್ನು ನೀಡಲಾಗುತ್ತಿದೆ. ಮಧ್ಯಾಹ್ನ ಹಾಗೂ ರಾತ್ರಿಗೆ ಅನ್ನ, ಸಾಂಬಾರ್‌, ಮುದ್ದೆ, ಮೊಸರನ್ನ ನೀಡಲಾಗುತ್ತದೆ. ನಗರ ಸ್ಥಳೀಯ ಸಂಸ್ಥೆಗಳು ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಆರೋಗ್ಯ ನಿರೀಕ್ಷಕರು ನಿಯಮಿತವಾಗಿ ಕ್ಯಾಂಟೀನ್‌ಗೆ ಭೇಟಿ ನೀಡಿ ಗುಣಮಟ್ಟ ಹಾಗೂ ಪ್ರಮಾಣ ಪರಿಶೀಲನೆ ಮಾಡುತ್ತಿದ್ದಾರೆ.

ಒಂದು ಹೊತ್ತಿಗೆ 500–700 ಜನರಿಗೆ ಊಟ ಅಥವಾ ಉಪಾಹಾರ ಒದಗಿಸಬೇಕಿದೆ. ಚಿತ್ರದುರ್ಗದ ಪ್ರವಾಸಿ ಮಂದಿರದ ಸಮೀಪದ ಕ್ಯಾಂಟೀನ್‌ನಲ್ಲಿ ಬೆಳಗಿನ ಉಪಾಹಾರವನ್ನು 500ಕ್ಕಿಂತ ಹೆಚ್ಚು ಜನರು ಸೇವಿಸುತ್ತಾರೆ. ಮಧ್ಯಾಹ್ನದ ಊಟಕ್ಕೂ ಹೆಚ್ಚು ಬೇಡಿಕೆ ಇದೆ. ರಾತ್ರಿ ನಿಗದಿಗಿಂತ ಕಡಿಮೆ ಗ್ರಾಹಕರು ಊಟ ಮಾಡುತ್ತಾರೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಕ್ಯಾಂಟೀನ್‌ನಿಂದ ಅನುಕೂಲವಾಗಿದೆ.

ವಿದ್ಯಾರ್ಥಿಗಳಿಗೆ ನೆರವಾದ ಕ್ಯಾಂಟೀನ್‌

ಶಿವಗಂಗಾ ಚಿತ್ತಯ್ಯ

ಚಳ್ಳಕೆರೆ: ಇಲ್ಲಿನ ಶಿಕ್ಷಣ ಇಲಾಖೆ ಮುಂಭಾಗದ ಇಂದಿರಾ ಕ್ಯಾಂಟೀನ್‍ನಲ್ಲಿ ಕೂಲಿ ಕಾರ್ಮಿಕರು, ನಿರಾಶ್ರಿತರು, ವಾಹನಗಳ ಚಾಲಕರ ಜತೆಗೆ ಶಾಲಾ- ಕಾಲೇಜುಗಳಿಗೆ ಬರುವ ಗ್ರಾಮೀಣ ಪ್ರದೇಶದ ನೂರಾರು ವಿದ್ಯಾರ್ಥಿಗಳು ಪ್ರತಿದಿನ ಹಸಿವು ನೀಗಿಸಿಕೊಳುತ್ತಿದ್ದಾರೆ.

ಶಾಲೆ- ಕಾಲೇಜಿಗೆ ಬರುವ, 30-40 ಕಿ.ಮೀ. ದೂರದ ಗಡಿ ಗ್ರಾಮದ ವಿದ್ಯಾರ್ಥಿಗಳು ಪ್ರತಿದಿನ ಬೆಳಿಗ್ಗೆ ಮನೆಯನ್ನು ಬಿಡುತ್ತಾರೆ. ಅವರೆಲ್ಲ ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನದ ಊಟಕ್ಕೆ ಕ್ಯಾಂಟೀನ್‍ ಅವಲಂಬಿಸಿದ್ದಾರೆ.

‘ಕಬ್ಬಿಣದ ಸಾಮಾನು ದುರಸ್ತಿ ಮಾಡುವವರು, ಗುಜರಿ ಅಂಗಡಿಯ ಕೆಲಸಗಾರರು, ಕೂಲಿ ಕಾರ್ಮಿಕರು, ವಾಹನ ಚಾಲಕರು, ಅನಾಥರು ಹಾಗೂ ಗ್ರಾಮೀಣ ವಿದ್ಯಾಥಿಗಳು ಸೇರಿ ಪ್ರತಿ ಹೊತ್ತು 400ರಿಂದ 500 ಜನರು ಊಟ ಮಾಡುತ್ತಾರೆ. ಮಂಗಳವಾರ ಮತ್ತು ಗುರುವಾರ ಇಡ್ಲಿ, ಚಟ್ನಿ, ಸಾಂಬಾರು ಲಭ್ಯ ಇರುವುದರಿಂದ ಹೆಚ್ಚು ಜನ ಬರುತ್ತಾರೆ’ ಎಂದು ಕ್ಯಾಂಟೀನ್ ನಿರ್ವಾಹಕ ಶ್ರೀಧರ್ ತಿಳಿಸುತ್ತಾರೆ.

ಗ್ರಾಹಕರನ್ನು ಆಕರ್ಷಿಸದ ರುಚಿ

ಸಾಂತೇನಹಳ್ಳಿ ಸಂದೇಶ್ ಗೌಡ

ಹೊಳಲ್ಕೆರೆ: ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯ ನಿರ್ವಹಿಸುತ್ತಿದ್ದರೂ, ಗ್ರಾಹಕರಿಲ್ಲದೆ ಭಣಗುಡುತ್ತಿದೆ. ಕ್ಯಾಂಟೀನ್‌ನಲ್ಲಿ ಬೆಳಿಗ್ಗೆ ತಿಂಡಿ ಹಾಗೂ ಮಧ್ಯಾಹ್ನದ ಊಟ ತಯಾರಿಸುತ್ತಾರೆ. ಆದರೆ, ಜನ ಮಾತ್ರ ಇತ್ತ ಸುಳಿಯುವುದಿಲ್ಲ.

‘ಬೆಳಿಗ್ಗೆ ರೈಸ್ ಬಾತ್ ಮಾತ್ರ ಮಾಡುತ್ತಾರೆ. ಆದರೆ ಅದರಲ್ಲಿ ಉಪ್ಪು, ಹುಳಿ, ಖಾರವೇ ಇರುವುದಿಲ್ಲ. ಮಸಾಲೆಯಂತೂ ಮೊದಲೇ ಇರುವುದಿಲ್ಲ. ಸಪ್ಪೆ ಅನ್ನ ತಿನ್ನಲು ಯಾರು ಬರುತ್ತಾರೆ?’ ಎಂದು ವಿದ್ಯಾರ್ಥಿ ಹರೀಶ್ ಬೇಸರದಿಂದ ನುಡಿಯುತ್ತಾರೆ.

‘ಪಟ್ಟಣದ ಬೀದಿ ಬದಿಯ ಸಂಚಾರಿ ಕ್ಯಾಂಟೀನ್‌ಗಳಿಗೆ ಜನ ಮುತ್ತಿಕೊಳ್ಳುತ್ತಾರೆ. ಅಲ್ಲಿ ಬಿಸಿ ಇಡ್ಲಿ, ವಡೆ, ರೈಸ್ ಬಾತ್, ಪಲಾವ್, ಪೂರಿ, ಸಾಗು, ದೋಸೆ ಎಲ್ಲವೂ ಸಿಗುತ್ತದೆ. ಬೆಲೆ ಹೆಚ್ಚಾದರೂ ರುಚಿ ಇರುವುದರಿಂದ ಅರ್ಧ ಗಂಟೆಯಲ್ಲಿ ತಿಂಡಿ ಖಾಲಿ ಆಗುತ್ತದೆ. ಆದರೆ ಇಂದಿರಾ ಕ್ಯಾಂಟೀನ್ ನಲ್ಲಿ ₹ 5ಕ್ಕೆ ತಿಂಡಿ ಕೊಟ್ಟರೂ ಬರೀ ಒಂದು ಸೌಟು ರೈಸ್ ಕೊಡುತ್ತಾರೆ. ರುಚಿ ಇಲ್ಲದ ಮೇಲೆ ಅಲ್ಲಿಗೆ ಯಾರು ಹೋಗುತ್ತಾರೆ. ಬೆಲೆಗಿಂತ ಶುಚಿ, ರುಚಿ ಮುಖ್ಯ’ ಎನ್ನುತ್ತಾರೆ ಸಾರ್ವಜನಿಕರು.

ಆರಂಭವಾಗದ ಕ್ಯಾಂಟೀನ್‌

ಕೊಂಡ್ಲಹಳ್ಳಿ ಜಯಪ್ರಕಾಶ

ಮೊಳಕಾಲ್ಮುರು: ಬಡವರ ಹಸಿವು ನೀಗಿಸಲು ಕಡಿಮೆ ದರದಲ್ಲಿ ಆಹಾರ ಒದಗಿಸಲು ಸರ್ಕಾರ ಆರಂಭಿಸಿದ ‘ಇಂದಿರಾ ಕ್ಯಾಂಟೀನ್‌’ ಪಟ್ಟಣದಲ್ಲಿ ಇನ್ನೂ ಆರಂಭವಾಗಿಲ್ಲ. ಕ್ಯಾಂಟೀನ್‌ ಕಟ್ಟಡ ಬುನಾದಿಗೆ ಮಾತ್ರ ಸೀಮಿತವಾಗಿದೆ.

ಜನರ ಮನವಿ ನಂತರ ಬಸ್ ನಿಲ್ದಾಣ ಹಿಂಭಾಗದ ಪಿಎಲ್‌ಡಿ ಬ್ಯಾಂಕ್ ಸಮೀಪದಲ್ಲಿ ನಿವೇಶನ ಮಂಜೂರು ಮಾಡಲಾಯಿತು. ಅದ್ದೂರಿ ಶಂಕುಸ್ಥಾಪನೆ ಕೂಡ ನಡೆಯಿತು. ನಾಲ್ಕು ವರ್ಷ ಕಳೆದರೂ ಕಟ್ಟಡ ನಿರ್ಮಾಣವಾಗಿಲ್ಲ.

‘ಬೆಂಗಳೂರಿನ ಕಂಪನಿಯೊಂದು ಕ್ಯಾಂಟೀನ್‌ ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದಿತ್ತು. ಕೆಲ ಸಾಮಗ್ರಿಗಳನ್ನು ಸರಬರಾಜು ಮಾಡಿದೆ. ಬಳಿಕ ಸಂಬಂಧಪಟ್ಟ ಗುತ್ತಿಗೆದಾರರು ಇತ್ತ ಸುಳಿದಿಲ್ಲ. ಈ ಕುರಿತು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲಾಗಿದೆ’ ಎಂದು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಕಾಂತರಾಜ್ ಹೇಳಿದರು.

ಸುಳಿಯದ ಗ್ರಾಹಕರು

ಸುವರ್ಣಾ ಬಸವರಾಜ್‌

ಹಿರಿಯೂರು: ಮೂರು ವರ್ಷಗಳ ಹಿಂದೆ ನಗರದ ಬಸ್ ನಿಲ್ದಾಣದ ಎದುರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಗೊಂಡಾಗ ಊಟ–ಉಪಾಹಾರಕ್ಕೆ ಸರದಿಯಲ್ಲಿ ನಿಲ್ಲಬೇಕಿತ್ತು. ಈಗ ಕ್ಯಾಂಟೀನ್ ಬಳಿಗೆ ಗ್ರಾಹಕರು ಸುಳಿಯುತ್ತಿಲ್ಲ.

ನಿತ್ಯ 700 ಜನರಿಗೆ ಉಪಾಹಾರ, 500 ಜನರಿಗೆ ಮಧ್ಯಾಹ್ನದ ಊಟ ಹಾಗೂ 200 ಜನರಿಗೆ ರಾತ್ರಿ ಊಟ ಕೊಡಬೇಕೆಂಬ ಷರತ್ತಿದೆ. ನ.27ರಂದು ಉಪಾಹಾರಕ್ಕೆ ಬಂದವರ ಸಂಖ್ಯೆ 100 ದಾಟಿರಲಿಲ್ಲ. ನಗರಸಭೆಯ ಪೌರಕಾರ್ಮಿಕರಿಗೆ ಬೆಳಗಿನ ಉಪಾಹಾರವನ್ನು ಇಂದಿರಾ ಕ್ಯಾಂಟೀನ್‌ನಿಂದ ಕೊಡಲಾಗುತ್ತಿತ್ತು. ಪೌರಕಾರ್ಮಿಕರು ರುಚಿಯ ಬಗ್ಗೆ ದೂರು ಹೇಳಿದ್ದರಿಂದ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಗೆ ಅಂದಾಜು ₹ 1 ಕೋಟಿ ಅನುದಾನದ ಬಾಕಿ ಇದೆ. ಈ ಕುರಿತು ಹಿರಿಯ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ಸಿಕ್ಕಿದೆ. ಕ್ಯಾಂಟೀನ್‌ ಚೆನ್ನಾಗಿ ನಡೆಯುತ್ತಿವೆ.

ಎನ್‌.ಸತೀಶ್‌ ರೆಡ್ಡಿ, ಯೋಜನಾ ನಿರ್ದೇಶಕ ನಗರಾಭಿವೃದ್ಧಿ ಕೋಶ, ಚಿತ್ರದುರ್ಗ

ಕಡಿಮೆ ದರದಲ್ಲಿ ಆಹಾರ ದೊರೆಯುವುದರಿಂದ ನನ್ನಂಥ ಅನೇಕರ ಹಸಿವನ್ನು ಕ್ಯಾಂಟೀನ್‌ ನೀಗಿಸಿದೆ. ಊಟ, ತಿಂಡಿ ರುಚಿಯಾಗಿರುತ್ತದೆ. ಕ್ಯಾಂಟೀನ್‌ನಿಂದ ಜೀವನಕ್ಕೆ ಅನುಕೂಲವಾಗಿದೆ.

ಗೋವಿಂದರಾಜು, ಚಳ್ಳಕೆರೆ

ಮೊಳಕಾಲ್ಮುರು ತಾಲ್ಲೂಕಿನಲ್ಲಿ ಹೆಚ್ಚು ದಿನಗೂಲಿಗಳಿದ್ದಾರೆ. ಕೆಲಸ ಕಾರ್ಯಕ್ಕೆ ಪಟ್ಟಣಕ್ಕೆ ಬಂದಾಗ ಕ್ಯಾಂಟೀನ್ ಹಸಿವು ನೀಗಿಸುತ್ತಿತ್ತು. ಶೀಘ್ರದಲ್ಲೇ ಕ್ಯಾಂಟೀನ್‌ ಆರಂಭಿಸಿದರೆ ಅನುಕೂಲ.

ಜಾಫರ್ ಷರೀಫ್, ಸಿಪಿಐ ಕಾರ್ಯದರ್ಶಿ ಮೊಳಕಾಲ್ಮುರು

ರಸ್ತೆ ಬದಿ ಕಡಿಮೆ ದರದಲ್ಲಿ ಉಪಾಹಾರ ದೊರೆಯುತ್ತದೆ. ಯುವ ಸಮೂಹ ಇಚ್ಛಿಸುವ ಫಾಸ್ಟ್‌ಫುಡ್‌ ಮಳಿಗೆ ಸಾಕಷ್ಟು ಇರುವ ಕಾರಣ ಕ್ಯಾಂಟೀನ್ ಆಕರ್ಷಣೆ ಕಡಿಮೆಯಾಗಿದೆ. ಊಟದಲ್ಲಿ ಇನ್ನಷ್ಟು ವೈವಿಧ್ಯ, ಗುಣಮಟ್ಟದ ಅಗತ್ಯವಿದೆ.

ಸಮೀವುಲ್ಲಾ, ಹಣ್ಣಿನ ವ್ಯಾಪಾರಿ, ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT