ಮಂಗಳವಾರ, ಮಾರ್ಚ್ 28, 2023
28 °C
ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯ ಸಂಸ್ಥಾಪಕ ದೇವಮಿತ್ರ

ಒಳಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶ ಇಲ್ಲ: ದೇವಮಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಒಳಮೀಸಲಾತಿ ಕಲ್ಪಿಸಲು ಸಂವಿಧಾನದಲ್ಲಿ ಅವಕಾಶವೇ ಇಲ್ಲ. ಸಚಿವ ಸಂಪುಟದಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವೂ ಇಲ್ಲ’ ಎಂದು ಹೈಕೋರ್ಟ್‌ ವಕೀಲ ಹಾಗೂ ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯ ಸಂಸ್ಥಾಪಕ ದೇವಮಿತ್ರ ತಿಳಿಸಿದರು.

‘ಅಧಿಕಾರ ಇಲ್ಲದಿದ್ದರೂ ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದೆ ಆದಲ್ಲಿ ಕಾಯ್ದೆ ಉಲ್ಲಂಘನೆಯಡಿ ಮುಖ್ಯಮಂತ್ರಿ, ಸಚಿವರು ಸೇರಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

‘ಉಪಮುಖ್ಯಮಂತ್ರಿ ಗೋವಿಂದ ಜಾರಜೋಳ ಸಂವಿಧಾನ ಬಲ್ಲವರಲ್ಲ. ಕಾನೂನು, ಕಾಯ್ದೆಯ ತಿಳಿವಳಿಕೆಯೂ ಇಲ್ಲ. ಅವರಿಗೆ ಒಳಮೀಸಲಾತಿ ಬಗ್ಗೆ ಕಿಂಚಿತ್ತು ಜ್ವಾನವಿಲ್ಲ’ ಎಂದು ದೂರಿದರು.

‘ಒಳಮೀಸಲಾತಿ ಆಯಾ ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ ಎಂಬುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಐವರು ನ್ಯಾಯಮೂರ್ತಿಗಳ ಪೀಠ ಒಮ್ಮತದ ತೀರ್ಮಾನಕ್ಕೆ ಬಂದಿಲ್ಲ. ಹೀಗಾಗಿ ಏಳು ನ್ಯಾಯಮೂರ್ತಿಗಳ ಸದಸ್ಯ ಪೀಠಕ್ಕೆ ಸಲಹೆಯನ್ನಷ್ಟೇ ನೀಡಿದ್ದಾರೆ. ಒಳಮೀಸಲಾತಿ ಕುರಿತು ದನಿ ಎತ್ತಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನ ರಾಜಕಾರಣಿಗಳು ಪರಿಶಿಷ್ಟ ಜಾತಿಯಲ್ಲಿನ ಒಳಪಂಗಡಗಳನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಅಕ್ರಮ ಆಸ್ತಿ: ಆರೋಪ

‘ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದರಾದ ರಮೇಶ ಜಿಗಜಿಣಗಿ, ಎ.ನಾರಾಯಣಸ್ವಾಮಿ, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದರಾದ ಕೆ.ಎಚ್.ಮುನಿಯಪ್ಪ, ಬಿ.ಎನ್.ಚಂದ್ರಪ್ಪ ಸೇರಿ ಅನೇಕರು ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ. ಇವರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಗುವುದು’ ಎಂದು ದೇವಮಿತ್ರ ಹೇಳಿದರು.

‘ರಾಜಕೀಯಕ್ಕೆ ಬಂದ ನಂತರ ಅಧಿಕಾರ ಪಡೆದು ಕೆಲವೇ ವರ್ಷಗಳಲ್ಲಿ ನೂರಾರು ಕೋಟಿಗೆ ಮಾಲೀಕರಾಗಿದ್ದಾರೆ. ಸರ್ಕಾರದ ಆಸ್ತಿ, ಸಂಪತ್ತು ಕಬಳಿಸಿ ಸಂವಿಧಾನ ಮತ್ತು ಅಂಬೇಡ್ಕರ್ ಅವರಿಗೆ ಮೋಸ ಮಾಡಿದ್ದಾರೆ’ ಎಂದು ದೂರಿದರು.

ಮುಖಂಡರಾದ ಮಾರುತಿರಾವ ಜಂಬಗಾ, ಬಿ.ಎಸ್.ಪ್ರಸನ್ನಕುಮಾರ, ಪ್ರಕಾಶ್ ಬೀರಾವರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು