ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗದ ಐತಿಹಾಸಿಕ ತಾಣಗಳಲ್ಲಿ ಯೋಗ ವೈಭವ

ಸಾಮೂಹಿಕ ಯೋಗದಲ್ಲಿ ಸಾವಿರಾರು ಜನರು ಭಾಗಿ
Last Updated 22 ಜೂನ್ 2022, 2:12 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜಿಲ್ಲೆಯ ವಿವಿಧೆಡೆ ಮಂಗಳವಾರ ಸಾಮೂಹಿಕ ಯೋಗ ಪ್ರದರ್ಶಿಸಲಾಯಿತು. ಐತಿಹಾಸಿಕ ಕಲ್ಲಿನ ಕೋಟೆ ಹಾಗೂ ಪ್ರವಾಸಿ ತಾಣ ಚಂದ್ರವಳ್ಳಿಯಲ್ಲಿ ನಡೆದ ಯೋಗ ಗಮನ ಸೆಳೆಯಿತು.

‘ಮಾನವೀಯತೆಗಾಗಿ ಯೋಗ’ ಎಂಬ ಘೋಷಾವಾಕ್ಯದೊಂದಿಗೆ ಯೋಗ ದಿನವನ್ನು ಆಯೋಜಿಸಲಾಗಿತ್ತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆಯೊಂದಿಗೆ ಯೋಗ ಸಂಸ್ಥೆಗಳು ಕೈಜೋಡಿಸಿದ್ದವು. ಯೋಗ ವೈಭವವನ್ನು ಕಣ್ತುಂಬಿಕೊಳ್ಳುವ ಕುತೂಹಲದಿಂದ ನೂರಾರು ಜನರು ಸೇರಿದ್ದರು.

ಯೋಗ ಪ್ರದರ್ಶನಕ್ಕೆ ಕಾತುರದಿಂದ ಕಾಯುತ್ತಿದ್ದ ಪಟುಗಳು ತಂಡೋಪತಂಡವಾಗಿ ಮಂಗಳವಾರ ನಸುಕಿನ 5.30ರಿಂದ ಕೋಟೆ ಹಾಗೂ ಚಂದ್ರವಳ್ಳಿಯತ್ತ ಹೆಜ್ಜೆ ಹಾಕಿದರು. ನಿಗದಿತ ವೇದಿಕೆಯ ಮುಂಭಾಗದಲ್ಲಿ ಶಿಸ್ತುಬದ್ಧವಾಗಿ ನೆಲಹಾಸು ಹಾಕಿಕೊಂಡರು. ಒಂದಷ್ಟು ಹೊತ್ತು ತಾಲೀಮು ನಡೆಸಿ ಯೋಗ ಪ್ರದರ್ಶನಕ್ಕೆ ಸಜ್ಜಾದರು.

ಕಲ್ಲಿನಕೋಟೆಯಲ್ಲಿ ಯೋಗಗುರು ಕೆಂಚವೀರಪ್ಪ ಮಾರ್ಗದರ್ಶನದಲ್ಲಿ ಬೆಳಿಗ್ಗೆ 7ಕ್ಕೆ ಆರಂಭವಾದ ಯೋಗ 45 ನಿಮಿಷ ನಡೆಯಿತು. ಚಂದ್ರವಳ್ಳಿಯಲ್ಲಿ ರವಿ ಅಂಬೇಕರ್ ನೇತೃತ್ವದಲ್ಲಿ ಯೋಗ ಪ್ರದರ್ಶಿಸಲಾಯಿತು. ಕುಳಿತು, ನಿಂತು ಹಾಗೂ ಮಲಗಿಕೊಂಡು ಹಲವು ಆಸನಗಳನ್ನು ಪ್ರದರ್ಶಿಸಿದರು. ಸೂರ್ಯನ ಕಿರಣಗಳು ಆಗಷ್ಟೇ ಭೂಮಿಯನ್ನು ಸ್ಪರ್ಶಿಸುತ್ತಿದ್ದಂತೆ ತಂಗಾಳಿ ತೀಡಿ ಯೋಗಪಟುಗಳಿಗೆ ಮುದ ನೀಡಿತು.

‘ಭಾರತವು ತನ್ನ ವಿದ್ಯೆ, ಕಲೆ ಹಾಗೂ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುತ್ತಿದೆ. ಯಾವುದೇ ಉಪಕರಣ, ಸಲಕರಣೆ ಇಲ್ಲದೇ ದೇಹ ಮತ್ತು ಮನಸ್ಸನ್ನು ಸಮತೋಲನದಲ್ಲಿ ಇಡಲು ಯೋಗದಿಂದ ಸಾಧ್ಯವಿದೆ. ಇಡೀ ಜಗತ್ತಿಗೆ ಯೋಗವನ್ನು ನೀಡಿದ ಹಿರಿಮೆ ಭಾರತದ್ದು’ ಎಂದು ವಿಧಾನಪರಿಷತ್‌ ಸದಸ್ಯ ಕೆ.ಎಸ್‌. ನವೀನ್‌ ಅಭಿಪ್ರಾಯಪಟ್ಟರು.

‘ಮಕ್ಕಳಿಗೆ ಯೋಗ ತರಬೇತಿ ನೀಡಬೇಕು. ಯೋಗ ಕಲಿಯುವದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಯುವಸಮೂಹ ಆಧುನಿಕತೆಯ ಸೆಳೆತಕ್ಕೆ ಒಳಗಾಗುತ್ತಿದೆ. ಅವರನ್ನು ಯೋಗದತ್ತ ಕರೆತರುವ ಅಗತ್ಯವಿದೆ. ಮುಂದಿನ ವರ್ಷ ಯೋಗಾಭ್ಯಾಸ ಮಾಡುವವರ ಸಂಖ್ಯೆ ಹೆಚ್ಚಾಗಬೇಕು’ ಎಂದು ಹೇಳಿದರು.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಹೆಚ್ಚುವರಿ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಯು. ಗಿರೀಶ್, ಪುರಾತತ್ವ ಇಲಾಖೆಯ ಅಧಿಕಾರಿ ಸುಧೀರ್, ರಾಜ್ಯ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ಪ್ರದೀಪ್, ಪತಂಜಲಿ ಯೋಗ ಸಂಸ್ಥೆಯ ಸುಜಾತ, ರಾಮಲಿಂಗಪ್ಪ, ಚಿತ್ರದುರ್ಗ ಯೋಗ ಸಂಸ್ಥೆ ಅಧ್ಯಕ್ಷ ಮಹಡಿ ಶಿವಮೂರ್ತಿ, ಮಹಿಳಾ ಸಮಾಜದ ಅಧ್ಯಕ್ಷೆ ಮೋಕ್ಷ ರುದ್ರಸ್ವಾಮಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಶ್ಮಿ, ದಿವ್ಯ, ಅಮೃತ ಆಯುರ್ವೇದಿಕ್ ಕಾಲೇಜ್ ಪ್ರಾಂಶುಪಾಲ ಡಾ.ಪ್ರಶಾಂತ್
ಇದ್ದರು.

50 ಹಾಸಿಗೆಯ ಆಯುರ್ವೇದ ಆಸ್ಪತ್ರೆಯ ನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆ. ಉಜಿರೆ ಮಾದರಿಯಲ್ಲಿ ನೈಸರ್ಗಿಕ ಚಿಕಿತ್ಸಾ ಕೇಂದ್ರ ಸ್ಥಾಪಿಸಲಾಗುತ್ತದೆ. ಇದರಿಂದ ಜನರಿಗೆ ಅನುಕೂಲವಾಗಲಿದೆ.

ಕೆ.ಎಸ್‌. ನವೀನ್‌, ವಿಧಾನಪರಿಷತ್‌ ಸದಸ್ಯ

..........

ಯೋಗಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ದೇಹ ಮತ್ತು ಮನಸ್ಸು ರೋಗಮುಕ್ತಗೊಂಡು ಜೀವನದಲ್ಲಿ ನೆಮ್ಮದಿ ಸಿಗುತ್ತದೆ.

- ಡಾ.ಸುರೇಶ್‌, ವೈದ್ಯ, ಜಿಲ್ಲಾ ಆಸ್ಪತ್ರೆ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT