ಗುರುವಾರ , ಸೆಪ್ಟೆಂಬರ್ 19, 2019
24 °C
ರೈತರು, ಜನಪ್ರತಿನಿಧಿಗಳ ಸಭೆಯಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಏತ ನೀರಾವರಿ: ‌ಜನಪ್ರತಿನಿಧಿಗಳ ಸಹಕಾರ ಮುಖ್ಯ

Published:
Updated:
Prajavani

ಸಿರಿಗೆರೆ: ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಂಜೂರಾಗಿರುವ ಸಾಸ್ವೆಹಳ್ಳಿ, ಜಗಳೂರು ಹಾಗೂ ಭರಮಸಾಗರ ಏತ ನೀರಾವರಿ ಯೋಜನೆಗಳಿಗೆ ತಡೆಯಾಗುವ ಅಂಶಗಳ ನಿವಾರಣೆಗೆ ಮುಂದಾಗುವಂತೆ ಸಂಸದರು ಮತ್ತು ಶಾಸಕರಿಗೆ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸೂಚಿಸಿದರು.

ಇಲ್ಲಿನ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ರೈತರು ಮತ್ತು ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.

ರೈತರು ಸಹ ಏತ ನೀರಾವರಿ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡದೇ ಇದ್ದರೆ ಅವು ಯಶಸ್ವಿಯಾಗುವುದಿಲ್ಲ. ರೈತರು ತಮ್ಮ ಸ್ವಾರ್ಥವನ್ನು ಬದಿಗಿಟ್ಟು ಎಲ್ಲರಿಗೂ ನೀರು ಸಿಗಲಿ ಎಂಬ ವಿಶಾಲ ಮನೋಭಾವ ಬೆಳೆಸಿಕೊಂಡರೆ ನೀರಾವರಿ ಯೋಜನೆಗಳು ಯಶಸ್ವಿಯಾಗುತ್ತವೆ ಎಂದು ಸಲಹೆ ನೀಡಿದರು.

‘ಜಗಳೂರು ಭಾಗದ ಕೆರೆಗಳ ಯೋಜನೆಗೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ₹ 500 ಕೋಟಿ ಬಜೆಟ್‌ನಲ್ಲಿ ಮೀಸಲಿಟ್ಟಿದ್ದರು. ನಂತರ ಬಂದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಕರ್ನಾಟಕ ನೀರಾವರಿ ನಿಗಮದ ಮೂಲಕ ₹ 1,200 ಕೋಟಿ ಮಂಜೂರಾತಿಗೆ ಅನುಮತಿ ನೀಡಿದ್ದರು. ಈಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಎರಡೂ ಯೋಜನೆಗಳಿಗೆ ಹಣ ಬಿಡುಗಡೆ ಮಾಡಬೇಕಾಗಿದೆ. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಹಿಂದಿನ ಸರ್ಕಾರಗಳ ಮಂಜೂರಾತಿ ನೀಡಿರುವ ಯೋಜನೆಗಳ ಮಾಹಿತಿ ನೀಡಿದ್ದೇವೆ. ಜಗಳೂರು ಕೆರೆಗಳ ಯೋಜನೆಗೆ ₹ 220 ಕೋಟಿ ಹಾಗೂ ಭರಮಸಾಗರ ಯೋಜನೆಗೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ’ ಎಂದರು.

ಜನಪರ ಕೆಲಸಕ್ಕೆ ಬೆಂಬಲ: ‘ನಾವು ಯಾವುದೇ ಪಕ್ಷದ ಪರವೂ ಅಲ್ಲ, ವಿರೋಧವೂ ಅಲ್ಲ. ಜನಪರ ಸರ್ಕಾರದ ಪರ. ರಾಜನಹಳ್ಳಿ ಏತ ನೀರಾವರಿಗೆ ಸಂಬಂಧಿಸಿದಂತೆ ₹15 ಕೋಟಿ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸಲಾಗಿದೆ. ಮಲಶೆಟ್ಟಿಹಳ್ಳಿ ಬಳಿ ಇದ್ದ 4 ಎಕರೆ ಜಾಕ್‍ವೆಲ್ ಬಳಿ 16 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ₹ 5 ಕೋಟಿ ವೆಚ್ಚದಲ್ಲಿ ಕೆರೆಯೊಂದನ್ನು ನಿರ್ಮಿಸಲಾಗುತ್ತಿದೆ. ಇದರ ಕಾಮಗಾರಿ ಪೂರ್ಣ ಮುಗಿದ ನಂತರ ಈ ಯೋಜನೆಯು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತದೆ’ ಎಂದು ಹೇಳಿದರು.

ಬಿಟ್ಟು ಹೋಗಿರುವ ಕೆರೆಗಳನ್ನು ಸೇರಿಸಲು ಕ್ರಮ: ಈ ಯೋಜನೆಯ ವ್ಯಾಪ್ತಿಗೆ ಇನ್ನೂ ಹಲವು ಕೆರೆಗಳು ಬಿಟ್ಟುಹೋಗಿರುವುದಾಗಿ ಅನೇಕ
ಗ್ರಾಮಗಳ ರೈತರು ತಮ್ಮ ಅಹವಾಲು ಸಲ್ಲಿಸುತ್ತಿದ್ದಾರೆ. ಹೀಗಾಗಿ ಯೋಜನೆವಾರು ಕೆರೆಗಳ ಪಟ್ಟಿಯನ್ನು ಪ್ರಕಟಿಸಿ ಸಾರ್ವಜನಿಕರ ಗಮನಕ್ಕೆ ತರಲಾಗುವುದು. ಬಿಟ್ಟುಹೋಗಿರುವ ಕೆರೆಗಳ ಸೇರ್ಪಡೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಕಾಂಗ್ರೆಸ್ ಮುಖಂಡ ಎಚ್.ಎ.ಷಣ್ಮುಖಪ್ಪ, ಕೆರೆಗಳ ಹೋರಾಟ ಸಮಿತಿ ಅಧ್ಯಕ್ಷ ಡಾ.ಮಂಜುನಾಥ ಗೌಡ, ಚೌಲಿಹಳ್ಳಿ ಶಶಿ ಪಾಟೀಲ್, ಶ್ರೀಮಠದ ಆಡಳಿತಾಧಿಕಾರಿ ಎಸ್‌.ಬಿ.ರಂಗನಾಥ್‌ ಹಾಗೂ ರೈತ ಮುಖಂಡರು ಇದ್ದರು.

Post Comments (+)