ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಿಕಿರಿ ಉಂಟು ಮಾಡುವ ರೈಲ್ವೆ ಅಂಡರ್‌ಪಾಸ್‌ಗಳು

ಮೊಳಕಾಲ್ಮುರು: ಅವೈಜ್ಞಾನಿಕ ನಿರ್ಮಾಣ ಆರೋಪ
Last Updated 5 ಡಿಸೆಂಬರ್ 2020, 3:35 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನ ಹಲವೆಡೆ ನಿರ್ಮಾಣ ಮಾಡಿರುವ ರೈಲ್ವೆ ಅಂಡರ್ ಪಾಸ್‌ಗಳು ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೀವ್ರ ಕಿರಿಕಿರಿ ಉಂಟು ಮಾಡುತ್ತಿವೆ ಎಂಬ ಆರೋಪ ಕೇಳಿಬಂದಿದೆ.

ಬಿ.ಜಿ.ಕೆರೆ, ಮೊಳಕಾಲ್ಮುರು, ಎದ್ದಲ ಬೊಮ್ಮಯ್ಯನ ಹಟ್ಟಿ, ರುದ್ರಮ್ಮನಹಳ್ಳಿ, ಮನ್ನೇಕೋಟೆ ಸೇರಿದಂತೆ ಹಲವೆಡೆ ನಿರ್ಮಿಸಿರುವ ಅಂಡರ್ ಪಾಸ್‌ಗಳಿಂದ ಅನುಕೂಲಕ್ಕಿಂತ ಅನನುಕೂಲ ಹೆಚ್ಚಾಗಿದೆ. ಇದಕ್ಕೆ ನಿರ್ಮಾಣ ಸಮಯದಲ್ಲಿ ಸ್ಥಳೀಯರ ಅಭಿಪ್ರಾಯ ಪರಿಗಣಿಸದಿರುವುದು ಹಾಗೂ ಹಲವು ವರ್ಷಗಳ ಹಿಂದಿನ ವಾಹನ ಸಂಚಾರ ಅಂಕಿ-ಅಂಶಗಳನ್ನು ಇಟ್ಟುಕೊಂಡು ಕ್ರಿಯಾಯೋಜನೆ ಮಾಡಿರುವುದು ಕಾರಣವಾಗಿದೆ ಎಂದು ಸಾರ್ವಜನಿಕರಾದ ಮಲ್ಲೇಶಪ್ಪ, ನಿಂಗರಾಜ್ ದೂರಿದರು.

ಎತ್ತರ ಕಡಿಮೆ ಮಾಡಲಾಗಿದೆ. ಇದರಿಂದ ಸ್ವಲ್ಪ ಎತ್ತರದ ಲಾರಿ ಬಂದರೆ ತೂರುವುದಿಲ್ಲ. ತಾಲ್ಲೂಕಿನಲ್ಲಿ ಇತ್ತೀಚೆಗೆ ಕೋಳಿ ಫಾರಂ, ಇಟ್ಟಿಗೆ ಕೈಗಾರಿಕೆಗಳು ತಲೆ ಎತ್ತುತ್ತಿವೆ. ಪರಿಣಾಮ ಸಾಮಗ್ರಿಗಳನ್ನು ತುಂಬಿಕೊಂಡು ಲಾರಿಗಳು ಬರುತ್ತವೆ. ಸ್ವಲ್ಪ ಎತ್ತರ ಇದ್ದರೂ ಈ ಅಂಡರ್ ಪಾಸ್‌ಗಳಲ್ಲಿ ಹೋಗುವುದು ಕಷ್ಟ. ಹಲವು ಬಾರಿ ಲಾರಿ ಸಿಕ್ಕಿ ಹಾಕಿಕೊಂಡಿವೆ ಎಂದು ಚಾಲಕ ತಿಪ್ಪೇಸ್ವಾಮಿ ಹೇಳಿದರು.

ಪಟ್ಟಣದ ಕೋನಸಾಗರ ರಸ್ತೆಯಲ್ಲಿ ನಿರ್ಮಿಸಿರುವ ಅಂಡರ್ ಪಾಸ್‌ನ ಸಮಸ್ಯೆಗಳು ಹೇಳತೀರದು. ಮಳೆ ಬಂದರೆ ಸಾಕು ನೀರು ನಿಂತುಕೊಳ್ಳುತ್ತದೆ. ವಾಹನಗಳು, ಜನರು ಹರಸಾಹಸ ಪಟ್ಟುಕೊಂಡು ಓಡಾಡಬೇಕು. ಸರಿಪಡಿಸುವ ಭರವಸೆಯನ್ನು ಗುತ್ತಿಗೆದಾರರು ನೀಡಿದರೂ ಕಾರ್ಯರೂಪಕ್ಕೆ ಬಂದಿಲ್ಲ. ಪಟ್ಟಣ ಪಂಚಾಯಿತಿ ಅತ್ತ ತಿರುಗಿಯೂ ನೋಡುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.

‘ಈ ಅಂಡರ್ ಪಾಸ್‌ನಲ್ಲಿ ಗುಂಡಿಗಳು ಬಿದ್ದು ವಾಹನ ಓಡಿಸುವುದು ಕಷ್ಟವಾಗಿದೆ. ನಿರ್ಮಾಣ ಸಮಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಸೂಚನೆ ನೀಡದಿರುವುದೇ ಇದಕ್ಕೆ ಮುಖ್ಯ ಕಾರಣ. ಮುಂದಿನ ದಿನಗಳಲ್ಲಿ ಇದು ಮರುಕಳಿಸದಂತೆ
ಎಚ್ಚರ ವಹಿಸಬೇಕು. ಜತೆಗೆ ಗುಂಡಿಗಳ ದುರಸ್ತಿ ಮಾಡಿಸಬೇಕು’ ಎಂದು ನಿಸ್ಸಾರ್, ಬೋರಯ್ಯ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT