ಶುಕ್ರವಾರ, ನವೆಂಬರ್ 27, 2020
18 °C

PV Web Exclusive | ಇದು ಬರದ ನಾಡಿನ ನಡುಗಡ್ಡೆ!

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕಣ್ಣು ಹಾಯಿಸಿದಷ್ಟು ದೂರದವರೆಗೆ ಕಾಣುವ ಜಲರಾಶಿ. ಮನೆಯ ಅಂಗಳಕ್ಕೂ ಕೇಳಿಸುವ ನೀರ ಅಲೆಯ ಸದ್ದು. ಒಂದೆಡೆ ಬೆಟ್ಟದ ಸಾಲು, ಮತ್ತೊಂದೆಡೆ ಆವರಿಸಿದ ನೀರು. ತೆಪ್ಪದಲ್ಲಿ ಕುಳಿತು ಹುಟ್ಟು ಹಾಕದಿದ್ದರೆ ಹೊರಗಿನ ಪ್ರಪಂಚವನ್ನು ಕಾಣುವುದು ಅಸಾಧ್ಯ!

ಇದು ಮಲೆನಾಡು ಅಥವಾ ಕರಾವಳಿ ಪ್ರದೇಶದ ದೃಶ್ಯವಲ್ಲ. ಬರದ ನಾಡು ಎಂಬ ಅನ್ವರ್ಥನಾಮವನ್ನು ಅಂಟಿಸಿಕೊಂಡ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ಜಿಲ್ಲಾದಿಗೊಂದಿ ಎಂಬ ಜನವಸತಿ ಪ್ರದೇಶದ ಜನರ ಸ್ಥಿತಿ. ಜನವಸತಿ ಪ್ರದೇಶಕ್ಕೆ ಇನ್ನೂ ಹಳ್ಳಿ ಅಥವಾ ಗ್ರಾಮದ ಸ್ಥಾನ ಸಿಕ್ಕಿಲ್ಲ. ಭಾರಿ ಮಳೆ ಸುರಿದು ಕೆರೆ ಭರ್ತಿಯಾದರೆ ಈ ಪ್ರದೇಶ ಸಂಪರ್ಕ ಕಡಿದುಕೊಳ್ಳುತ್ತದೆ. 11 ವರ್ಷಗಳ ಬಳಿಕ ಇಂತಹ ಸ್ಥಿತಿ ಬಂದೊದಗಿದೆ.

ಮೊಳಕಾಲ್ಮುರು ತಾಲ್ಲೂಕಿನ ಜೆ.ಬಿ.ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಕ್ಕುರ್ತಿ ಕೆರೆ, ಜಿಲ್ಲಾದಿಗೊಂದಿ ಜನವಸತಿ ಪ್ರದೇಶದ ಜನರಿಗೆ ತಲೆಮಾರುಗಳಿಂದ ಸಮಸ್ಯೆಯಾಗಿ ಕಾಡುತ್ತಿದೆ. ಆರು ಕುಟುಂಬ, 40ಕ್ಕೂ ಹೆಚ್ಚು ಜನರು ವಾಸವಾಗಿರುವ ಈ ಊರು ಸರ್ಕಾರಿ ದಾಖಲೆಗಳಲ್ಲಿಲ್ಲ. ಕುಡಿಯುವ ನೀರಿಗೆ ಒಂದು ಹ್ಯಾಂಡ್‌ಪಂಪ್‌, ಬೆಳಕಿನ ವ್ಯವಸ್ಥೆಗೆ ಸೋಲಾರ್‌ ಬೀದಿ ದೀಪಗಳನ್ನು ಬಿಟ್ಟರೆ ಸರ್ಕಾರದ ಯಾವ ಸೌಲಭ್ಯವೂ ಇಲ್ಲಿಗೆ ತಲುಪಿಲ್ಲ. ಬರಿದಾದ ಕೆರೆಯಲ್ಲಿ ಸಂಚರಿಸುತ್ತಿದ್ದ ಜನರು ಈಗ ತೆಪ್ಪದ ಹುಟ್ಟು ಹಿಡಿಯುವುದು ಅನಿವಾರ್ಯವಾಗಿದೆ.


ಮೊಳಕಾಲ್ಮುರು ತಾಲ್ಲೂಕಿನ ಜಿಲ್ಲಾದಿಗೊಂದಿ ಎಂಬ ಜನವಸತಿ ಪ್ರದೇಶ.
ಚಿತ್ರ–ನಿಸರ್ಗ ಗೋವಿಂದರಾಜು

1953ರಲ್ಲಿ ಪಕ್ಕುರ್ತಿ ಕೆರೆ ನಿರ್ಮಾಣವಾಗಿದೆ ಎನ್ನುತ್ತದೆ ಸರ್ಕಾರಿ ದಾಖಲೆ. 150 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಕೆರೆ ಹರಡಿಕೊಂಡಿದೆ. ಕೆರೆಯ ಹಿನ್ನೀರು ಬೆಟ್ಟದ ಸಾಲುಗಳವರೆಗೆ ಚಾಚಿಕೊಂಡಿದೆ. ಸುಮಾರು 160 ಹೆಕ್ಟೇರ್‌ ಪ್ರದೇಶಕ್ಕೆ ನೀರು ಒದಗಿಸುತ್ತದೆ. ದೇವಸಮುದ್ರ ಹೋಬಳಿಯ ಅಂತರ್ಜಲ ಮಟ್ಟವೂ ಏರಿಕೆ ಆಗುತ್ತದೆ. ಕೆರೆ ತುಂಬಲಿ ಎಂಬುದು ಹೋಬಳಿಯ ಜನರ ಪ್ರಾರ್ಥನೆ. ಆದರೆ, ಜಿಲ್ಲಾದಿಗೊಂದಿಯ ಜನರಿಗೆ ಮಾತ್ರ ಕೆರೆ ತುಂಬಿದರೆ ಸಂಕಷ್ಟ ಶುರುವಾಗುತ್ತದೆ.

ಜೆ.ಬಿ.ಹಳ್ಳಿಯ ಕುಟುಂಬವೊಂದು ಕೆರೆ ನಿರ್ಮಾಣಕ್ಕೂ ಮೊದಲೇ ಜಿಲ್ಲಾದಿಗೊಂದಿಯಲ್ಲಿ ಸಾಗುವಳಿ ಮಾಡಿಕೊಂಡಿತ್ತು. ಕುರಿ, ಜಾನುವಾರು ಸಾಕಾಣಿಕೆಯೊಂದಿಗೆ ಬದುಕು ಕಟ್ಟಿಕೊಂಡಿತ್ತು. ಕೆರೆ ನಿರ್ಮಾಣವಾದ ಬಳಿಕ ಜೆ.ಬಿ.ಹಳ್ಳಿಯ ಸಂಪರ್ಕವನ್ನು ಕಡಿದುಕೊಂಡಿತು. ಕಾಲಾನುಕ್ರಮೇಣ ಕುಟುಂಬ ವಿಸ್ತರಿಸಿತು. ಆರು ಕುಟುಂಬಗಳು ಕೃಷಿ ನಂಬಿಕೊಂಡು ಬದುಕು ಕಟ್ಟಿಕೊಂಡಿವೆ. ಪ್ರತಿಯೊಬ್ಬರು ಮತದಾನದ ಗುರುತಿನ ಚೀಟಿ, ಪಡಿತರ ಚೀಟಿ ಹೊಂದಿದ್ದಾರೆ.

‘ಜಿಲ್ಲಾದಿಗೊಂದಿಯಲ್ಲಿ ಎರಡು ಎಕರೆ ಜಮೀನಿದೆ. ಕೃಷಿ ಕೆಲಸಕ್ಕೆ ತೆಪ್ಪದಲ್ಲೇ ಹೋಗುತ್ತೇವೆ. ಇದೇ ತೆಪ್ಪವನ್ನು ಜನರು ಬಳಸುತ್ತಿದ್ದರು. ಅಗತ್ಯವಿದ್ದಾಗ ತೆಪ್ಪದಲ್ಲಿ ಸೇವೆ ಒದಗಿಸುತ್ತಿದ್ದೆವು. ಪ್ರತಿಯೊಂದಕ್ಕೂ ತೆಪ್ಪದಲ್ಲಿ ಸಂಚರಿಸುವುದು ಕಷ್ಟ. ಶಾಶ್ವತ ಪರಿಹಾರಕ್ಕೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ’ ಎನ್ನುತ್ತಾರೆ ಜೆ.ಬಿ.ಹಳ್ಳಿಯ ನಿವಾಸಿ ಸುರೇಶ್‌.


ಮೊಳಕಾಲ್ಮುರು ತಾಲ್ಲೂಕಿನ ಪಕ್ಕುರ್ತಿ ಕೆರೆಯಲ್ಲಿ ತೆಪ್ಪದಲ್ಲಿ ಸಾಗುತ್ತಿರುವ ಜಿಲ್ಲಾದಿಗೊಂದಿಯ ನಿವಾಸಿಗಳು.
ಚಿತ್ರ– ನಿಸರ್ಗ ಗೋವಿಂದರಾಜು

ಸುರೇಶ್‌ ಅವರು ಜೆ.ಬಿ.ಹಳ್ಳಿಯಲ್ಲಿ ನೆಲೆಸಿದ್ದಾರೆ. ಇವರ ಜಮೀನು ಮಾತ್ರ ಜಿಲ್ಲಾದಿಗೊಂದಿಯಲ್ಲಿದೆ. ಈ ಪ್ರದೇಶದ ಆರು ಕುಟುಂಬಕ್ಕೆ ಇವರ ತೆಪ್ಪವೇ ಆಸರೆಯಾಗಿತ್ತು. ಕೆರೆಯ ನೀರು ಇಳಿಯುವವರೆಗೂ ತೆಪ್ಪವನ್ನು ಒದಗಿಸುತ್ತಿದ್ದರು. ಇತ್ತೀಚೆಗೆ ಆರು ಕುಟುಂಬಗಳು ತೆಪ್ಪ ಖರೀದಿಸಿವೆ. ಆದರೆ, ತೆಪ್ಪ ನಡೆಸುವ ಕೌಶಲ ಇನ್ನೂ ಕರಗತವಾಗಬೇಕಿದೆ.

ಜೀವನಾಗತ್ಯಕ್ಕೆ ಬೇಕಾದ ದಿನಸಿ ಸಾಮಗ್ರಿ, ಕೃಷಿ ಉಪಕರಣ, ಬೀಜ–ಗೊಬ್ಬರಕ್ಕೆ ಜೆ.ಬಿ.ಹಳ್ಳಿ, ಪಕ್ಕುರ್ತಿ ಹಾಗೂ ರಾಂಪುರಕ್ಕೆ ಭೇಟಿ ನೀಡಬೇಕು. ಶಾಲೆಯಲ್ಲಿ ವ್ಯಾಸಂಗ ಮಾಡುವ ಎಂಟು ವಿದ್ಯಾರ್ಥಿಗಳು ಜೆ.ಬಿ.ಹಳ್ಳಿಗೆ ನಿತ್ಯ ಸಂಚರಿಸಬೇಕು. ಖಾಲಿ ಕೆರೆಯ ಅಂಗಳದಲ್ಲಿ ದ್ವಿಚಕ್ರ ವಾಹನ ಸಾಗುವ ಕಾಲು ದಾರಿ ಇತ್ತು. ಕೆರೆ ಭರ್ತಿಯಾಗಿದ್ದರಿಂದ ತೆಪ್ಪವೊಂದೇ ಇವರಿಗೆ ಆಸರೆ.

‘ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಮತ ಕೇಳುತ್ತಾರೆ. ಆದರೆ, ಯಾವುದೇ ಸೌಲಭ್ಯ ಕಲ್ಪಿಸುತ್ತಿಲ್ಲ. ಕುಡಿಯುವ ನೀರಿಗೂ ತೊಂದರೆ ಇದೆ. ಕೆರೆ ಭರ್ತಿಯಾದರೆ ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಕಡಿದುಕೊಳ್ಳಬೇಕಾಗಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಜಿಲ್ಲಾದಿಗೊಂದಿಯ ಸೋಮು.

ಬರ ಪರಿಸ್ಥಿತಿಯನ್ನು ಸದಾ ಎದುರಿಸುವ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಕೆರೆ ತುಂಬುವಂತಹ ಮಳೆ ಬೀಳುವುದು ಅಪರೂಪ. 2009ರಲ್ಲಿ ಪಕ್ಕುರ್ತಿ ಕೆರೆ ಭರ್ತಿಯಾಗಿತ್ತು. ಸಾಧಾರಣ ಮಳೆ ಬಿದ್ದಾಗ ಕೆರೆಯ ಅಂಗಳದಲ್ಲಿ ನೀರು ನಿಲ್ಲುತ್ತದೆ. ಆದರೆ, ಸಂಚಾರಕ್ಕೆ ತೊಂದರೆ ಉಂಟಾಗುತ್ತಿರಲಿಲ್ಲ. ದಶಕದ ಬಳಿಕ ಕೆರೆ ಭರ್ತಿಯಾಗಿರುವುದರಿಂದ ಜನರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೋಟಾರು ಚಾಲಿತ ಬೋಟ್‌ ಅಥವಾ ತೆಪ್ಪದ ವ್ಯವಸ್ಥೆ ಕಲ್ಪಿಸುವುದಾಗಿ ಅಧಿಕಾರಿಗಳು ಆಶ್ವಾಸನೆ ನೀಡುತ್ತಿದ್ದಾರೆ. ಆದರೆ, ಈವರೆಗೂ ಈಡೇರಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು