ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ಬಳಕೆ ಕ್ಯಾನ್ಸರ್‌ಗೆ ಆಹ್ವಾನ: ಆರೋಗ್ಯ ತಜ್ಞ ಡಾ.ಶ್ರೀಶೈಲ ಬದಾಮಿ

'ಯೋಗ, ವ್ಯಾಯಾಮ, ಶ್ರಮ ಜೀವನ ಅಗತ್ಯ'
Last Updated 28 ಏಪ್ರಿಲ್ 2019, 12:58 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ದಿನನಿತ್ಯ ಯೋಗ, ವ್ಯಾಯಾಮ, ಪೌಷ್ಟಿಕ ಆಹಾರ ಸೇವನೆ, ಶ್ರಮಪಟ್ಟು ಕಾಯಕದಲ್ಲಿ ತೊಡಗುವುದನ್ನು ರೂಢಿಸಿಕೊಂಡರೆ ಆರೋಗ್ಯವಂಥರಾಗಿ ಬಾಳಲು ಸಾಧ್ಯ’ ಎಂದು ತುಮಕೂರಿನ ಚೈತನ್ಯವಿಕಾಸ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರದ ಆರೋಗ್ಯ ತಜ್ಞ ಡಾ.ಶ್ರೀಶೈಲ ಬದಾಮಿ ತಿಳಿಸಿದರು.

ಐಎಂಎ ಸಭಾಂಗಣದಲ್ಲಿ ಚಿತ್ರದುರ್ಗ ಇತಿಹಾಸ ಕೂಟ, ಇತಿಹಾಸ, ಸಂಸ್ಕೃತಿ, ಸಂಶೋಧನೆಗಳ ವಿಚಾರ ವೇದಿಕೆ, ರೇಣುಕಾ ಪ್ರಕಾಶನಭಾನುವಾರ ಹಮ್ಮಿಕೊಂಡಿದ್ದ ‘ಸಾರ್ವಜನಿಕ ಆರೋಗ್ಯ: ಸಮಸ್ಯೆ-ಪರಿಹಾರಗಳು’ ಕುರಿತು ಅವರು ಮಾತನಾಡಿದರು.

‘ಪ್ರಸ್ತುತ ದಿನಗಳಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಪ್ಲಾಸ್ಟಿಕ್‌ಗೆ ಹೆಚ್ಚು ದಾಸರಾಗಿದ್ದೇವೆ. ಪ್ಲಾಸ್ಟಿಕ್ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂಬುದು ಅನೇಕರಿಗೆ ಗೊತ್ತಿದೆ. ಆದರೂ ಕುಡಿಯುವ ನೀರು, ತಿನ್ನುವ ಆಹಾರ ಸೇರಿ ನಿತ್ಯ ಪ್ಲಾಸ್ಟಿಕ್ ಬಳಕೆ ನಮ್ಮಲ್ಲಿ ಹೆಚ್ಚುತ್ತಿದೆ. ಈ ಬಗ್ಗೆ ಅರಿವು ಇಲ್ಲದವರು ನೇರವಾಗಿ ಕ್ಯಾನ್ಸರ್ ಅನ್ನು ಆಹ್ವಾನಿಸುತ್ತಿದ್ದಾರೆ’ ಎಂದು ವಿಷಾದಿಸಿದರು.

‘ನಮಗೆ ಗೊತ್ತಿಲ್ಲದ ರೀತಿಯಲ್ಲಿ ರಾಸಾಯನಿಕ ಪದಾರ್ಥಗಳು ನಮ್ಮ ದೇಹ ಸೇರುತ್ತಿವೆ. ಮಹಿಳೆಯರು ಉಪಯೋಗಿಸುವ ವಿವಿಧ ಸುಗಂಧ ದ್ರವ್ಯ, ಕ್ರೀಮ್‌ಗಳು ಕೂಡ ಕ್ಯಾನ್ಸರ್‌ಗೆ ಕಾರಣವಾಗುತ್ತಿವೆ. ಈ ಬಗ್ಗೆ ಮಹಿಳೆಯರೂ ಜಾಗೃತರಾಗಿರಬೇಕು’ ಎಂದು ಸಲಹೆ ನೀಡಿದರು.

‘ನಮ್ಮ ದೇಹ ಸೇರಿದ ರಾಸಾಯನಿಕ ಮೂತ್ರದಿಂದ ಅಥವಾ ಬೆವರಿನ ರೂಪದಲ್ಲಿ ಹೊರಹೋಗಬೇಕು. ಆದರೆ, ಇಂದು ನಾವು ಶ್ರಮಪಟ್ಟು ಬೆವರುವುದನ್ನೇ ಮರೆತ್ತಿದ್ದೇವೆ. ಇದು ಹೀಗೆ ಮುಂದುವರೆದರೆ ಆರೋಗ್ಯವಂಥ ಸಮಾಜ ನಿರ್ಮಾಣ ಅಸಾಧ್ಯ. ಅದಕ್ಕಾಗಿ ನಮ್ಮ ಇಡೀ ಜೀವನ ಪದ್ಧತಿಯಲ್ಲೇ ಬದಲಾವಣೆ ತರುವ ಅವಶ್ಯಕತೆ’ ಎಂದರು.

‘ಭಾರತದಲ್ಲಿ 5 ಕೆ.ಜಿ ತೂಕದ ಒಂದು ಮಗುವು ಜನಿಸುತ್ತಿಲ್ಲ. ಆದರೆ, ಇಂಡೋನೇಷಿಯಾ ದೇಶದಲ್ಲಿ 6 ಕೆ.ಜಿ ತೂಕದ ಮಕ್ಕಳು ಹುಟ್ಟುತ್ತಿವೆ. ಇದು ಹೇಗೆ ಸಾಧ್ಯ ಎಂದರೆ ಅಲ್ಲಿನ ಗರ್ಭೀಣಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿರುವುದೇ ಕಾರಣವಾಗಿದೆ’ ಎಂದರು.

‘ದೇಶದಲ್ಲಿ ಶೇ 15ರಷ್ಟು ಮಕ್ಕಳು ಜನಿಸುತ್ತಲೇ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಆಧುನಿಕ ಜೀವನ ಶೈಲಿ, ಒತ್ತಡದಿಂದಾಗಿ ಅನೇಕ ದಂಪತಿಗಳಿಗೆ ಮಕ್ಕಳಾಗುತ್ತಿಲ್ಲ. ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾಗಿ ಜಂಕ್‌ಫುಡ್‌ಗಳ ಸೇವನೆ ಹೆಚ್ಚಾಗಿದೆ. ಪೌಷ್ಟಿಕ ಆಹಾರ ಸೇವಿಸಿದ ಕಾರಣ ಚಿಕ್ಕ ವಯಸ್ಸಿನಲ್ಲೇ ರೋಗಗಳು ಕಾಣಿಸಿಕೊಳ್ಳುತ್ತಿವೆ’ ಎಂದು ವಿಷಾದಿಸಿದರು.

‘ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದನ್ನು ಹಿರಿಯರಿಂದ ಕಲಿಯುವಲ್ಲಿ ವಿಫಲರಾಗುತ್ತಿದ್ದೇವೆ. ಮಕ್ಕಳನ್ನು ನಾವು ಯಾಂತ್ರಿಕ ಬದುಕಿಗೆ ತಳ್ಳುತ್ತಿದ್ದೇವೆ. ಆಹಾರ ಶೈಲಿಯಲ್ಲಿಯೂ ಸಾಕಷ್ಟು ಬದಲಾವಣೆಯಾಗಿದ್ದು, ನಾವುಗಳೇ ಆರೋಗ್ಯ ಹಾಳು ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

‘ಹಿಂದಿನ ಕಾಲದವರಂತೆ ಋತುಮಾನಕ್ಕೆ ಅನುಗುಣವಾಗಿ ಆಹಾರ ಸೇವನೆ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಅಲ್ಲದೆ, ನಿತ್ಯ ತಣ್ಣೀರು ಸ್ನಾನದಿಂದ ನಮ್ಮ ನರಮಂಡಲ ಬಲಿಷ್ಠವಾಗಲಿದೆ. ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ’ ಎಂದು ಹೇಳಿದರು.

ಇತಿಹಾಸ ಕೂಟದ ನಿರ್ದೇಶಕ ಪ್ರೊ.ಲಕ್ಷ್ಮಣ ತೆಲಗಾವಿ, ಸಂಚಾಲಕ ಡಾ.ಎನ್.ಎಸ್.ಮಹಂತೇಶ್, ಸಾಹಿತಿ ಡಾ.ಬಿ.ಎಲ್.ವೇಣು, ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT