ಮಂಗಳವಾರ, ಏಪ್ರಿಲ್ 7, 2020
19 °C
ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತ, ಬೆಳಿಗ್ಗೆಯಷ್ಟೇ ಹಾಲು ಲಭ್ಯ

‘ಜನತಾ ಕರ್ಫ್ಯೂ’: ಬಂದ್‌ ಆಗಲಿದೆ ಚಿತ್ರದುರ್ಗ ಜಿಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೊರೊನಾ ವೈರಸ್‌ ಹರಡುವುದನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ‘ಜನತಾ ಕರ್ಫ್ಯೂ’ಗೆ ಕರೆನೀಡಿರುವುದರಿಂದ ಮಾರ್ಚ್‌ 22ರ ಭಾನುವಾರ ಚಿತ್ರದುರ್ಗ ಜಿಲ್ಲೆ ಸಂಪೂರ್ಣ ಬಂದ್‌ ಆಗಲಿದೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಜನರು ಮನೆಯಿಂದ ಹೊರಬರುವುದು ಕೂಡ ಅನುಮಾನವಾಗಿದೆ.

ಬಹುತೇಕರು ಪ್ರಧಾನಿ ಕರೆಗೆ ತಲೆಬಾಗಿದ್ದಾರೆ. ಇಡೀ ದಿನ ಮನೆಯಲ್ಲೇ ಉಳಿಯಲು ನಿರ್ಧರಿಸಿದ್ದಾರೆ. ಹಲವು ಸಂಘ ಸಂಸ್ಥೆಗಳು ಇದಕ್ಕೆ ಬೆಂಬಲ ಸೂಚಿಸಿವೆ. ಜನಸಂಚಾರ ವಿರಳವಾಗುವ ಲಕ್ಷಣ ಗೋಚರಿಸುತ್ತಿದ್ದು, ನಗರದ ಪ್ರಮುಖ ರಸ್ತೆಗಳು ಜನರಿಲ್ಲದೇ ಭಣಗುಡುವ ಸಾಧ್ಯತೆ ಇದೆ.

ನಗರದ ಯಾವ ಅಂಗಡಿಗಳು ಬಾಗಿಲು ತೆರೆಯುವ ಸಾಧ್ಯತೆ ಇಲ್ಲ. ಹಣ್ಣು, ತರಕಾರಿ ಮಾರುಕಟ್ಟೆ ಕೂಡ ಸ್ತಬ್ಧವಾಗುವ ಸಾಧ್ಯತೆ ಇದೆ. ಬಸ್‌ ನಿಲ್ದಾಣಗಳಲ್ಲಿ ಜನಸಂಚಾರ ವಿರಳವಾಗಲಿದೆ. ವಾಣಿಜ್ಯೋದ್ಯಮಿಗಳು, ಬೀದಿ ಬದಿ ವ್ಯಾಪಾರಿಗಳು, ಕಟ್ಟಿಂಗ್‌ ಶಾಪ್‌ನವರು ಸಹ ಕರ್ಫ್ಯೂ ಬೆಂಬಲಿಸಿದ್ದಾರೆ. ವೈದ್ಯಕೀಯ ಸೇವೆ, ಹಾಲು, ಔಷಧ, ಅಗ್ನಿಶಾಮಕ ದಳ, ಪತ್ರಿಕೆಗಳು ಮಾತ್ರ ಲಭ್ಯ ಇವೆ.

ಇಡೀ ದಿನ ಮನೆಯಲ್ಲೇ ಉಳಿಯುವ ನಿರ್ಧಾರಕ್ಕೆ ಬದ್ಧವಾಗಿರಲು ಶನಿವಾರ ಕೆಲ ಸಿದ್ಧತೆಗಳನ್ನು ಮಾಡಿಕೊಂಡರು. ಮನೆಗೆ ಅಗತ್ಯವಿರುವ ವಸ್ತುಗಳನ್ನು ಮುಂಚಿತವಾಗಿ ಖರೀದಿಸಿದರು. ತರಕಾರಿ, ಹಣ್ಣು, ಹಾಲು, ದಿನಸಿ ಸಾಮಗ್ರಿಯನ್ನು ಮನೆಗೆ ಕೊಂಡೊಯ್ದರು. ಟಿ.ವಿ, ಸಿನಿಮಾ ನೋಡಲು ಅಗತ್ಯವಿರುವ ಪ್ಯಾಕೇಜ್‌ಗಳನ್ನು ಪಡೆದರು. ಮೊಬೈಲ್‌ ರೀಚಾರ್ಜ್‌ ಮಾಡಿಸಿಕೊಂಡರು.

ಸಾರಿಗೆ ಸಂಚಾರ ಸ್ಥಗಿತ: ‘ಜನತಾ ಕರ್ಫ್ಯೂ’ ಹಿನ್ನೆಲೆಯಲ್ಲಿ ಆಟೊ, ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೆ ಬಸ್‌ ಸೇವೆಯನ್ನು ಸ್ಥಗಿತಗೊಳಿಸಲು ಖಾಸಗಿ ಬಸ್‌ ಮಾಲೀಕರು ನಿರ್ಧರಿಸಿದ್ದಾರೆ. ಈ ಮಾಹಿತಿಯನ್ನು ಬಸ್‌ ನಿಲ್ದಾಣದಲ್ಲಿ ಶನಿವಾರವೇ ಪ್ರಯಾಣಿಕರ ಗಮನಕ್ಕೆ ತರಲಾಯಿತು.

‘ಜಿಲ್ಲೆಯಲ್ಲಿ ಸುಮಾರು 400 ಖಾಸಗಿ ಬಸ್‌ಗಳು ನಿತ್ಯ ಸೇವೆ ಒದಗಿಸುತ್ತಿವೆ. ಕರ್ಫ್ಯೂ ಅಂಗವಾಗಿ ಎಲ್ಲ ಬಸ್‌ ಸಂಚಾರ ಸ್ಥಗಿತಗೊಳಿಸಲಿವೆ. ಇಡೀ ದಿನ ಯಾವುದೇ ಬಸ್‌ಗಳು ಸೇವೆ ಒದಗಿಸುವುದಿಲ್ಲ. ಪ್ರಯಾಣಿಕರು ಸಹಕರಿಸಬೇಕು’ ಎಂದು ಖಾಸಗಿ ಬಸ್‌ ಮಾಲೀಕರ ಸಂಘದ ಬಿ.ಎ.ಲಿಂಗಾರೆಡ್ಡಿ ಮನವಿ ಮಾಡಿದ್ದಾರೆ.

ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಸಂಚಾರ ಸೇವೆ ಒದಗಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ನಿರ್ಧರಿಸಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಸಂಚರಿಸಲಿವೆ. ಆದರೆ, ಪ್ರಯಾಣಿಕರು ಬಸ್‌ ನಿಲ್ದಾಣಕ್ಕೆ ಬಾರದೇ ಇದ್ದರೆ ಸೇವೆ ಅಲಭ್ಯ. ರಾತ್ರಿ 9 ಗಂಟೆಯ ಬಳಿಕ ಎಲ್ಲ ಬಸ್‌ಗಳು ಸಂಚರಿಸಲಿವೆ ಎಂದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ್‌ ತಿಳಿಸಿದ್ದಾರೆ.

ಹೋಟೆಲ್‌, ರೆಸ್ಟೋರೆಂಟ್‌ ಇಲ್ಲ: ಭಾನುವಾರ ಇಡೀ ದಿನ ಹೋಟೆಲ್‌ ಬಾಗಿಲು ಮುಚ್ಚಲು ಮಾಲೀಕರು ನಿರ್ಧರಿಸಿದ್ದಾರೆ. ಹೋಟೆಲ್‌, ಸ್ವೀಟ್‌ ಅಂಗಡಿ ಹಾಗೂ ಬೇಕರಿಗಳು ಬಾಗಿಲು ತೆರೆಯುವುದಿಲ್ಲ. ಸಣ್ಣ, ಮಧ್ಯಮ ಸೇರಿ ಸಾವಿರಕ್ಕೂ ಅಧಿಕ ಹೋಟೆಲ್‌ಗಳಿದ್ದು, ಇವು ಗ್ರಾಹಕರಿಗೆ ಸೇವೆ ಒದಗಿಸುವುದಿಲ್ಲ. ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ ಗ್ರಾಹಕರಿಗೆ ಮಾತ್ರ ಸೇವೆ ಲಭ್ಯ ಇದೆ ಎಂದು ಹೋಟೆಲ್‌ ಮಾಲೀಕರ ಸಂಘ ಮಾಹಿತಿ ನೀಡಿದೆ.

‘ಜನತಾ ಕರ್ಫ್ಯೂ’ಗೆ ಪೆಟ್ರೋಲಿಯಂ ಡೀಲರ್ಸ್‌ ಅಸೋಸಿಯೇಷನ್‌ ಬೆಂಬಲ ಸೂಚಿಸಿದೆ. ಜಿಲ್ಲೆಯಲ್ಲಿರುವ 94 ಪೆಟ್ರೋಲ್‌ ಬಂಕ್‌ಗಳು ಭಾನುವಾರ ಬೆಳಿಗ್ಗೆ 6ರಿಂದ ಸಂಜೆ 6ಗಂಟೆಯವರೆಗೆ ಸಂಪೂರ್ಣವಾಗಿ ಬಂದ್ ಆಗಲಿವೆ. ಹೀಗಾಗಿ, ಇಂಧನ ತುಂಬಿಸಿಕೊಳ್ಳಲು ಸಾರ್ವಜನಿಕರು ಶನಿವಾರವೇ ಪೆಟ್ರೋಲ್‌ ಬಂಕ್‌ ಬಳಿ ಜಮಾಯಿಸಿದ್ದರು. ಭಾನುವಾರ ಸಂಜೆ 6 ಗಂಟೆಯ ಬಳಿಕ ಸೇವೆ ಒದಗಿಸಲಿವೆ.

ಹಾಲು ಸಂಗ್ರಹಿಸಿಕೊಂಡ ಜನರು: ದೈನಂದಿನ ಅಗತ್ಯವಾದ ಹಾಲು ಸೇವೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಮುಂದಾಲೋಚನೆಯಿಂದ ಅನೇಕರು ಶನಿವಾರವೇ ಹಾಲು ಖರೀದಿಸಿಟ್ಟುಕೊಂಡರು. ಹೀಗಾಗಿ, ಬೆಳಿಗ್ಗೆ 8 ಗಂಟೆಯ ಬಳಿಕ ಬಹುತೇಕ ಕಡೆಗಳಲ್ಲಿ ಹಾಲು ಖಾಲಿ ಆಗಿತ್ತು.

ಅಗತ್ಯ ವಸ್ತುಗಳು ಲಭ್ಯ ಇರುತ್ತವೆ ಎಂಬುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಿದರೂ, ಹಾಲು ಮಾರಾಟಗಾರರು ಇದಕ್ಕೆ ಸಮ್ಮತಿ ನೀಡುತ್ತಿಲ್ಲ. ಭಾನುವಾರ ಇಡೀ ದಿನ ಹಾಲು ಮಾರಾಟ ಮಾಡಲು ಅವರು ಹಿಂದೇಟು ಹಾಕಿದ್ದಾರೆ. ಭಾನುವಾರ ಬೆಳಿಗ್ಗೆ 7 ಗಂಟೆಯ ಒಳಗೆ ಹಾಲು ಖರೀದಿಸುವಂತೆ ಗ್ರಾಹಕರಿಗೆ ಸೂಚನೆ ನೀಡಿದ್ದಾರೆ.

ಭೀತಿ ಸೃಷ್ಟಿಸುತ್ತಿವೆ ವದಂತಿ: ‘ಜನತಾ ಕರ್ಫ್ಯೂ’ಗೆ ಸಂಬಂಧಿಸಿದಂತೆ ಅನೇಕರು ತಮಗೆ ತೋಚಿದಂತೆ ವಿಶ್ಲೇಷಣೆ ಮಾಡುತ್ತಿದ್ದಾರೆ. ಇವು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳ ಸ್ವರೂಪ ಪಡೆದು ಜನರಲ್ಲಿ ಭೀತಿ ಸೃಷ್ಟಿಸುತ್ತಿವೆ.

‘ಕೊರೊನಾ ವೈರಸ್‌ ನಾಶಕ್ಕೆ ಔಷಧ ಸಿಂಪಡಿಸಲಾಗುತ್ತಿದ್ದು, ಯಾರು ಮನೆಯಿಂದ ಹೊರಬರಬೇಡಿ’ ಎಂಬ ಸಂದೇಶವೊಂದು ವಾಟ್ಸ್‌ಆ್ಯಪ್‌ಗಳಲ್ಲಿ ಹರಿದಾಡುತ್ತಿದೆ. ಇದನ್ನೇ ನಿಜವೆಂದು ನಂಬಿಸುವ ಪ್ರಯತ್ನಗಳು ನಡೆಯುತ್ತಿವೆ. ಚಿಕ್ಕಜಾಜೂರು ಸಮೀಪದ ಗ್ರಾಮಗಳಿಗೆ ಭೇಟಿ ನೀಡಿದ ವೈದ್ಯರೊಬ್ಬರು ಇದಕ್ಕೆ ಪುಷ್ಠಿ ನೀಡುವಂತೆ ಮಾತನಾಡಿದ್ದಾರೆ. 12 ಗಂಟೆ ಯಾರೂ ಹೊರಗೆ ಬಾರದೇ ಇದ್ದರೆ ವೈರಾಣು ನಾಶವಾಗುತ್ತದೆಂದು ಹೇಳಿದ್ದಾರೆ. ಆದರೆ, ಇದನ್ನು ಆರೋಗ್ಯ ಇಲಾಖೆ ಅಲ್ಲಗಳೆದಿದೆ.

ಮನೆಯಲ್ಲಿ ಇರುವಂತೆ ಅರಿವು: ‘ಜನತಾ ಕರ್ಫ್ಯೂ’ ಬಗ್ಗೆ ಅರಿವು, ಜಾಗೃತಿ ಮೂಡಿಸುವ ಕೆಲಸ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಶನಿವಾರ ನಡೆಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿ ಕರೊನಾ ಜಾಗೃತಿಯ ಜೊತೆಗೆ ಕರ್ಫ್ಯೂ ಬಗ್ಗೆಯೂ ವಿವರಣೆ ನೀಡಿದರು.

ಕೆಲ ಸಂಘ–ಸಂಸ್ಥೆಗಳು ಕೂಡ ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸಿದವು. ಮನೆಯಲ್ಲೇ ಇರುವಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಹಲವು ಬಗೆಯ ಚರ್ಚೆಗಳು ನಡೆದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು