ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಪಕ್ಷ ಹೊರಗಿಟ್ಟರೆ ನಾಡಿಗೆ ಭವಿಷ್ಯ: ಡಿ.ಯಶೋಧರ

ಜೆಡಿಎಸ್‌ ಜನತಾ ಜಲಧಾರೆ ರಥಯಾತ್ರೆ
Last Updated 4 ಮೇ 2022, 13:38 IST
ಅಕ್ಷರ ಗಾತ್ರ

ಚಿತ್ರದುರ್ಗ: ಧರ್ಮ ಸಂಘರ್ಷಕ್ಕೆ ಕುಮ್ಮಕ್ಕು ನೀಡುವ ಬಿಜೆಪಿಯನ್ನು ಕಿತ್ತೊಗೆಯದಿದ್ದರೆ ನಾಡಿಗೆ ಭವಿಷ್ಯವಿಲ್ಲ. ಅವನತಿಯ ಹಾದಿಯಲ್ಲಿರುವ ಕಾಂಗ್ರೆಸ್‌ನಿಂದ ಅಧಿಕಾರ ನಿರೀಕ್ಷಿಸಲು ಸಾಧ್ಯವಿಲ್ಲ. ಪ್ರಾದೇಶಿಕ ಸೊಗಡಿನ ಜೆಡಿಎಸ್‌ ಮಾತ್ರ ಕನ್ನಡ ನಾಡು, ನುಡಿ, ಜಲ ಸಂರಕ್ಷಿಸಬಲ್ಲದು ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಯಶೋಧರ ಅಭಿಪ್ರಾಯಪಟ್ಟರು.

ಜೆಡಿಎಸ್‌ ಹಮ್ಮಿಕೊಂಡಿರುವ ‘ಜನತಾ ಜಲಧಾರೆ ರಥಯಾತ್ರೆ’ಯ ಅಂಗವಾಗಿ ಒನಕೆ ಓಬವ್ವ ವೃತ್ತದಲ್ಲಿ ಬುಧವಾರ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ಎರಡು ರಾಷ್ಟ್ರೀಯ ಪಕ್ಷಗಳಿಗೆ ರಾಜ್ಯದ ಮೇಲೆ ಕಾಳಜಿ ಇಲ್ಲ. ಮಹದಾಯಿ ಹಾಗೂ ಮೇಕೆದಾಟು ನೀರಾವರಿ ಯೋಜನೆ ಮೂಲಕ ಇದು ಬಹಿರಂಗವಾಗಿದೆ. ಗೋವಾದಲ್ಲಿ ಬಿಜೆಪಿ, ತಮಿಳುನಾಡಿನಲ್ಲಿ ಕಾಂಗ್ರೆಸ್‌ ಮಿತ್ರಪಕ್ಷ ಅಧಿಕಾರ ನಡೆಸುತ್ತಿವೆ. ಆದರೂ, ಎರಡು ಪಕ್ಷಗಳು ರಾಜಕೀಯ ಮಾಡುತ್ತಿವೆಯೇ ಹೊರತು ನೀರು ತರುವ ಕಾಳಜಿ ತೋರುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯ ಗಂಡಾಂತರ ಪರಿಸ್ಥಿತಿ ಎದುರಿಸುತ್ತಿದೆ. ಧರ್ಮಗಳ ನಡುವೆ ಕಂದಕ ಸೃಷ್ಟಿಸುವ, ಸಾಮಾಜಿಕ ವ್ಯವಸ್ಥೆಯನ್ನು ಹಾಳು ಮಾಡುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ. ಜನರ ಮನಸಿನಲ್ಲಿ ವಿಷ ಬೀಜ ಬಿತ್ತುವ ಕೆಲಸದಲ್ಲಿ ಆಢಳಿತಾರೂಢ ಪಕ್ಷವೇ ತೊಡಗಿಸಿಕೊಂಡಿದೆ. ಈ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಈ ಎರಡೂ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ನೆಮ್ಮದಿ ಇಲ್ಲ’ ಎಂದು ಕಿಡಿಕಾರಿದರು.

‘ಸ್ವಾತಂತ್ರ್ಯ ಬಂದಾಗಿನಿಂದ ಇಂತಹ ಕೆಟ್ಟ ಸರ್ಕಾರವನ್ನು ಕರ್ನಾಟಕ ಕಂಡಿರಲಿಲ್ಲ. ಸರ್ಕಾರಿ ನೌಕರಿಗೆ ಅಭ್ಯರ್ಥಿಗಳು ಲಕ್ಷಗಟ್ಟಲೆ ಹಣ ನೀಡುವ ಸ್ಥಿತಿ ಇರುವುದು ದುರಂತ. ವರ್ಗಾವಣೆಗೆ ಅಧಿಕಾರಿಗಳಿಂದ ಸಚಿವರು ಲಂಚ ಪಡೆಯುತ್ತಿದ್ದಾರೆ. ಅಭಿವೃದ್ಧಿ ಕಾಮಗಾರಿಯಲ್ಲಿ ಶೇ 40ರಷ್ಟು ಅನುದಾನವನ್ನು ಜನಪ್ರತಿನಿಧಿಗಳು ಲಂಚದ ರೂಪದಲ್ಲಿ ಪಡೆಯುತ್ತಿದ್ದಾರೆ. ಇದಕ್ಕೆ ಒಬ್ಬ ಸಚಿವರ ತಲೆದಂಡವಾಗಿದೆ’ ಎಂದರು.

‘ಏಳು ವರ್ಷಗಳಿಂದ ಕೇಂದ್ರದಲ್ಲಿರುವ ಬಿಜೆಪಿ ದುರಾಡಳಿತ ನಡೆಸುತ್ತಿದೆ. ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ರೈತರು, ಬಡವರು, ಕೂಲಿ ಕಾರ್ಮಿಕರ ಬದುಕು ತತ್ತರಿಸಿಹೋಗಿದೆ. ಹಿಂದೆಂದೂ ಇಂತಹ ಬೆಲೆ ಏರಿಕೆಯನ್ನು ಜನರು ಕಂಡಿರಲಿಲ್ಲ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸರ್ಕಾರಗಳು ನಡೆದುಕೊಳ್ಳುತ್ತಿವೆ’ ಎಂದು ಕಿಡಿಕಾರಿದರು.

‘ಕಾಂಗ್ರೆಸ್‌ ಪಕ್ಷ ನಾಯಕತ್ವದ ಬಿಕ್ಕಟ್ಟಿನಿಂದ ಕುಗ್ಗಿ ಹೋಗಿದೆ. ಇದರಿಂದ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲವಾಗಿದೆ. ಗುಂಪುಗಾರಿಕೆ, ಆಂತರಿಕ ಕಲಹಗಳು ಹೆಚ್ಚಾಗಿವೆ. ಪಂಜಾಬ್‌ನಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಆಗಿರುವ ಸ್ಥಿತಿ ಕರ್ನಾಟಕದಲ್ಲಿಯೂ ಬಂದೊದಗಲಿದೆ. ಹೀಗಾಗಿ, ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ ಮತದಾರರು ಒಲವು ತೋರಬೇಕು. ಜನಪರ ಆಡಳಿತ ನಡೆಸಿದ ಎಚ್‌.ಡಿ.ಕುಮಾರಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು’ ಎಂದರು.

‘ಜನತಾ ಜಲಧಾರೆ ಯಾತ್ರೆಯು ಜಿಲ್ಲೆಯ ಎಲ್ಲೆಡೆ ಸಂಚರಿಸಿ ವಿ.ವಿ.ಸಾಗರ, ಸುವರ್ಣಮುಖಿ ನದಿಯ ಜಲ ಸಂಗ್ರಹಿಸಿದೆ. ಮೇ 13 ರಂದು ಯಾತ್ರೆ ಬೆಂಗಳೂರು ತಲುಪಲಿದ್ದು, ಲಕ್ಷಾಂತರ ಕಾರ್ಯಕರ್ತರ ಸಮ್ಮುಖದಲ್ಲಿ ಬೃಹತ್ ಸಮಾವೇಶ ಜರುಗಲಿದೆ. ರಾಜ್ಯ ರಾಜಕಾರಣದಲ್ಲಿ ಹೊಸ ಭಾಷ್ಯ ಬರೆಯುವ ಅಗತ್ಯವಿದ್ದು, ಕಾರ್ಯಕರ್ತರು ಒಗ್ಗಟ್ಟಿನಿಂದ ದುಡಿಯಬೇಕಿದೆ. ಚುನಾವಣೆಗೆ ಇನ್ನೂ ಒಂದು ವರ್ಷ ಕಾಲಾವಕಾಶವಿದ್ದು, ಪಕ್ಷವನ್ನು ಇನ್ನಷ್ಟು ಸಬಲಗೊಳಿಸುವ ಅಗತ್ಯವಿದೆ’ ಎಂದರು.

ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಜಿ.ಬಿ.ಶೇಖರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್, ರಾಜ್ಯ ಕಾರ್ಯದರ್ಶಿ ಮಠದಕುರುಬರಹಟ್ಟಿ ವೀರಣ್ಣ, ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಕೃಷ್ಣಮೂರ್ತಿ, ತಾಲ್ಲೂಕು ಅಧ್ಯಕ್ಷೆ ಗೀತಾ, ಕಾರ್ಮಿಕ ಘಟಕದ ಅಧ್ಯಕ್ಷ ನಜೀರ್, ಯುವ ಘಟಕದ ಅಧ್ಯಕ್ಷ ಓ.ಪ್ರತಾಪ್‍ಜೋಗಿ, ಸಣ್ಣತಿಮ್ಮಪ್ಪ, ಪರಮೇಶ್ವರಪ್ಪ, ಗಣೇಶ್‍ಮೂರ್ತಿ, ಹನುಮಂತರಾಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT